ಪುಟ:ಕರ್ನಾಟಕ ಗತವೈಭವ.djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೬೬
ಕರ್ನಾಟಕ ಗತವೈಭವ

ವಿಕ್ರಮನಿಗೆ ಚಾಲುಕ್ಯ ವಿಕ್ರಮ ಅಥವಾ ತ್ರಿಭುವನಮಲ್ಲ ನೆಂದು ಹೆಸರು. ಕಲಿವಿಕ್ರಮ ಅಥವಾ ಪರ್ಮಾಡಿರಾಯನೆಂದೂ ಬಿರುದುಗಳುಂಟು. ಈತನು ತಾನು ಪಟ್ಟವೇರಿದ ಕೂಡಲೇ, ತನ್ನದೊಂದು ಬೇರೆ ಶಕವನ್ನು ಪ್ರಾರಂಭಿಸಿದನು, ಆದರೆ ಅವನ ತರುವಾಯದಲ್ಲಿ ಆಗಿ ಹೋದ ಅರಸರು ಅವನಂತೆ ಬಲಾಢ್ಯರಾಗಿಲ್ಲದ್ದರಿಂದ ಆ ಶಕವು ಮುಂದೆ ಬಹಳ ದಿವಸ ಬಾಳಲಿಲ್ಲ. ಇರಲಿ, ವಿಕ್ರಮನು ಅರಸನಾದ ನಂತರ, ಕರಾಡಕ್ಕೆ ಹೋಗಿ ಅಲ್ಲಿಯ ಅರಸನ ಮಗಳಾದ ಚಂದ್ರ ಲೇಖಾ ಅಥವಾ ಚಂದಲಾದೇವಿಯನ್ನು ಮದುವೆಯಾದನು. ಇವಳು ಅತ್ಯಂತ ಸುಂದರಿಯು. ವಿಕ್ರಮನು ಪಟ್ಟವೇರಿದ ನಂತರ, ಅವನ ತಮ್ಮನಾದ ಜಯಸಿಂಹನಿಗೆ ದುರಾಶೆ ಹುಟ್ಟಿ ಅವನು ಅಣ್ಣನಿಗೆ ವಿರುದ್ದವಾಗಿ ಬನವಾಸಿಯಲ್ಲಿ ಒಳಸಂಚು ಹೂಡಿದನು, ಚಾಲುಕ್ಯ ವಿಕ್ರಮನು ಅವನಿಗೆ ಹಾಗೆ ಮಾಡಬೇಡವೆಂದು ಒಳ್ಳೆಯ ರೀತಿಯಿಂದ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಜಯಸಿಂಹನು ತನ್ನದೊಂದು ಸೈನ್ಯವನ್ನೇ ಸಿದ್ಧ ಪಡಿಸಿ ಕೃಷ್ಣಯ ದಡಕ್ಕೆ ಬಂದು ತಳ ಊರಿದನು, ಅಲ್ಲಿ ಅಣ್ಣ ತಮ್ಮಂದಿರ ನಡುವೆ ಭಯಂಕರ ಕಾಳಗವೆಸಗಿತು. ಜಯಸಿಂಹನು ಓಡಿ ಅಡವಿಯ ಪಾಲಾದನು. ಮುಂದೆ ವಿಕ್ರಮನ ಸೈನ್ಯದವರು ಅವನನ್ನು ಹಿಡಿದು ವಿಕ್ರಮನೆದುರಿಗೆ ತಂದರು. ವಿಕ್ರಮನು ಅವನನ್ನು ಕ್ಷಮಿಸಿ ಬಿಟ್ಟು ಕೊಟ್ಟನು. ಮುಂದೆ ಅನೇಕ ವರ್ಷಗಳವರೆಗೆ ವಿಕ್ರಮನು ಶಾಂತಿಯಿಂದ ರಾಜ್ಯವಾಳಿದನು. ಅವನ ಆಳಿಕೆಯ ಕೊನೆಯ ಭಾಗದಲ್ಲಿ ಹೊಯ್ಸಳರ ವಿಷ್ಣು ವರ್ಧನನೆಂಬವನು ಬಂಡಾಯವನ್ನೆಬ್ಬಿಸಿದನು. ಆದರೆ ವಿಕ್ರಮನ ಸರದಾರನಾದ ಅಚ್ಚ ಅಥವಾ ಅಚ್ಚಿಗನೆಂಬವನು ಆ ಬಂಡಾಯವನ್ನು ತಗ್ಗಿಸಿ, ಪಾಂಡ್ಯ, ಕೊಂಕಣ ಮುಂತಾದ ಅರಸರನ್ನು ಮುರಿದನು. ಚೋಳ ಅರಸನ ಕೂಡ ವಿಕ್ರಮನು ಸ್ವಂತ ತಾನೇ ಯುದ್ಧ ಮಾಡಿ ಅವನನ್ನು ಸೋಲಿಸಿದನು, ಆನಂತರ ಕಲ್ಯಾಣಕ್ಕೆ ಬಂದು ವಿಕ್ರಮಪುರವೆಂಬ ತನ್ನ ಹೆಸರಿನದೊಂದು ಪಟ್ಟಣವನ್ನು ಸ್ಥಾಪಿಸಿದನು, ಇವನಿಗೆ ೧೬ ಮಂದಿ ಮಾಂಡಲಿಕ ರಾಜರಿದ್ದರು.
ತನ ಆಳಿಕೆಯು ಪ್ರಜೆಗಳಿಗೆ ಅತ್ಯಂತ ಸುಖಕರವಾಗಿತ್ತು. ಬಡ ಬಗ್ಗರಿಗೆ ಈತನು ಆಶ್ರಯದಾತನು. ಮಿತಾಕ್ಷರಿಯ ಕರ್ತನಾದ ವಿಜ್ಞಾನೇಶ್ವರನು ಇವನ ಹತ್ತಿರವೇ ಇದ್ದನು, ಈತನ ರಾಜ್ಯವರ್ಣನೆಯನ್ನು ನಾವು ಮುಂದೆ