ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯ನೆಯ ಪ್ರಕರಣ - ಕಲ್ಯಾಣದ ಚಾಲುಕ್ಯರು
೬೭

ವೈಭವವರ್ಣನೆಯ (೧೨ ನೆಯ) ಪ್ರಕರಣದಲ್ಲಿ ಕೊಟ್ಟಿರುವೆವು. ಅದನ್ನು ಓದಿ ಯಾವ ಕನ್ನಡಿಗನ ಹೃದಯವು ತಾನೇ ಆನಂದದಿಂದ ಉಕ್ಕೇರುವುದಿಲ್ಲ, ಯಾವನ ಮನಸ್ಸು ತಾನೇ ಅಭಿಮಾನವನ್ನು ತಾಳುವುದಿಲ್ಲ?
ಚಾಲುಕ್ಯ ವಿಕ್ರಮನ ತರುವಾಯ, ಈತನ ಮಗನಾದ ೩ನೆಯ ಸೋಮೇಶ್ವರನು ಪಟ್ಟವೇರಿ ೧೧ ವರ್ಷ ಆಳಿದನು. ಅಷ್ಟರಲ್ಲಿಯೇ ಈತನು ಆಂಧ್ರ, ದ್ರವಿಡ, ಮಗಧ, ನೇಪಾಳ ದೇಶಗಳ ಅರಸರನ್ನು ಗೆದ್ದ ನೆಂದೂ ವಿದ್ವಾಂಸರಿಂದ ಹೊಗಳಲ್ಪಟ್ಟನೆಂದೂ ವರ್ಣನೆಯುಂಟು. ಸೋಮೇಶ್ವರನು ಸ್ವತಃ ಗ್ರಂಥಕರ್ತನು. ಈ ಸೋಮೇಶ್ವರನು ಸಂಸ್ಕೃತದಲ್ಲಿ ಮಾನಸೋಲ್ಲಾಸ, ಅಥವಾ ಅಭಿಲಪಿತಾರ್ಥ ಚಿಂತಾಮಣಿಯೆಂಬ ಒಂದು ರಾಜಕೀಯ ಗ್ರಂಥವನ್ನು ಬರೆದನು. ಅದರಲ್ಲಿ, ರಾಜ್ಯವನ್ನು ಹೇಗೆ ಗಳಿಸಬೇಕು, ಗೆದ್ದ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಅರಸರು ಎಂತಂತಹ ವಿಲಾಸಗಳನ್ನು ಉಪಭೋಗಿಸಬೇಕು, ಇವೇ ಮೊದಲಾದ ವಿಷಯಗಳೂ ಬೇಟೆ ಮುಂತಾದ ವಿಷಯಗಳೂ ಇರುತ್ತವೆ. ಈತನು ಬಹಳ ವಿದ್ವಾಂಸನಾದುದರಿಂದ ಈತನಿಗೆ 'ಸರ್ವಜ್ಞ ಭೂಪ' ನಂದು ಬಿರುದು.
ತನ ತರುವಾಯದ ಅರಸರು ನಿರ್ಬಲರಾಗಿದ್ದುದರಿಂದ ಮಾಂಡಲಿಕ ರಾಜರೇ ಸ್ವತಂತ್ರರಾಗುತ್ತ ಬಂದರು. ೨ನೆಯ ತೈಲಪನ ಕಾಲಕ್ಕೆ ಮಾಂಡಲಿಕ ರಾಜನಾದ ಬಿಜ್ಜಣನೆಂಬವನು, ಕೊಲ್ಲಾಪುರ, ಕಾಕತೇಯ ಮುಂತಾದ ಅರಸರ ಸಹಾಯದಿಂದ, ಚಾಲುಕ್ಯರ ತೈಲಪನನ್ನು ತಳ್ಳಿದನು. ತೈಲಪನು ಕಲ್ಯಾಣವನ್ನು ಬಿಟ್ಟು ಅಣ್ಣಿಗೇರಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಿಜ್ಜಳನು ಅಲ್ಲಿಂದಲೂ ತೈಲಪನನ್ನು ಓಡಿಸಿದುದರಿಂದ, ಅವನು ಬನವಾಸಿಗೆ ಓಡಿದನು. ಚಾಲುಕ್ಯರ ಸಿಂಹಾಸನವನ್ನು ಬಿಜ್ಜಳನ ವಂಶದವರು ಆಕ್ರಮಿಸಿದರು. ಆದರೆ ಆ ವಂಶವೂ ಬಹಳ ದಿವಸ ಬಾಳಲಿಲ್ಲ. ಬೊಮ್ಮನೆಂಬ ಸರದಾರನ ಸಹಾಯದಿಂದ ೪ನೆಯ ಸೋಮೇಶ್ವರನು ಪುನಃ ಕೆಲವು ದಿವಸ ರಾಜ್ಯವಾಳಿದನು. ಆದರೆ ಹೊಯ್ಸಳರು ಪ್ರಬಲರಾಗಿ ಚಾಲುಕ್ಯ ವಂಶವನ್ನು ಮುರಿದರು.