ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೮ / ಕುಕ್ಕಿಲ ಸಂಪುಟ


ಎಷ್ಟೋ ಪದ್ಯಗಳು ಪಾರ್ತಿಸುಬ್ಬನ ಕೃತಿಗಳಲ್ಲಿ ಯಥಾವತ್ತಾಗಿ ಭಾಷಾಂತರರೂಪದಲ್ಲಿ ಸಹ ಬಂದಿರುವುದರಿಂದ ಆತನು ಕಥಕಳಿಯನ್ನು ಬಲ್ಲವನಷ್ಟೆ ಅಲ್ಲ ರಾಮನಾಟವನ್ನು ಕಂಠಪಾಠ ಮಾಡಿದವನೆ ಇದ್ದಿರಬೇಕು ಎಂಬುದರಲ್ಲಿ ಸಂದೇಹ ಬರುವಂತಿಲ್ಲ. ಕಥಕಳಿಯ ಆದರ್ಶದಿಂದಲೆ ನಮ್ಮ ಯಕ್ಷಗಾನದಲ್ಲಿ ಪ್ರಾಯಶಃ ಪ್ರಪ್ರಥಮವಾಗಿ ರಾಮಾಯಣ ಪ್ರಸಂಗಗಳನ್ನು ರಚಿಸಿ ಗಾನ ನರ್ತನ ಆಹಾರ್ಯಾದಿಗಳಲ್ಲಿ ಸಹ ವೈಶಿಷ್ಟ್ಯ ಪೂರ್ಣವಾದ ಸುಧಾರಣೆಯನ್ನು ಮಾಡಿದ ಯಕ್ಷಗಾನಾಚಾರ್ಯನೆಂಬ ಪಾರ್ತಿಸುಬ್ಬನ ಬಿರುದು ಅರ್ಥವತ್ತಾಗಿದೆ. ಯಕ್ಷಗಾನದ ದೃಶ್ಯ ಪ್ರಯೋಗದಲ್ಲಿ ತೆಂಕುತಿಟ್ಟು ಬಡಗುತಿಟ್ಟು ಎಂಬ ಭಿನ್ನ ಸಂಪ್ರದಾಯವು ಪಾರ್ತಿಸುಬ್ಬನ ಕಾಲದಿಂದಲೆ ಹುಟ್ಟಿ ಬೆಳೆದುದಾಗಿದೆ ಎಂದು ನ್ಯಾಯವಾಗಿ ಅನುಮಾನಿಸಬಹುದು. ನಮ್ಮ ತೆಂಕುತಿಟ್ಟಿನ ವೇಷಭೂಷಣಗಳು ಮುಖ್ಯವಾಗಿ ಬಣ್ಣದ ವೇಷ (ಚುಟ್ಟಿ ವೇಷ ಅಥವಾ ರಾಕ್ಷಸರ ವೇಷ) ಹನುಮಂತನ ವೇಷ, ಶೂರ್ಪಣಖಿ ವೇಷ, ಕಟ್ಟು ವೇಷ ಮೊದಲಾದುವು ಕಥಕಳಿಯವಕ್ಕೆ ಸಮಾನವಾಗಿರುವುದು ಮಾತ್ರ ಅಲ್ಲ ಕುಣಿತ, ಪ್ರವೇಶ, ನಿಷ್ಕ್ರಾಮ,ನಿಲುವು, ನೋಟ, ಹಸ್ತಚಾರಿ, ಕೇಶಭಾರ ಇತ್ಯಾದಿಗಳೂ ಕಥಕಳಿಯ ಈ ಅಂಶಗಳಲ್ಲಿ ಸಂಪೂರ್ಣ ಹೋಲಿಕೆಯುಳ್ಳುವು. ಚೆಂಡೆ, ಜಾಗಟೆಗಳೂ ಅಲ್ಲಿಂದಲೆ ಬಂದುವು. ನಾವು 'ತರೆಪರ್‌ಪಾಟ್' ಎಂದು ಕರೆಯುತ್ತಿರುವ ಕಥಾಪ್ರಾರಂಭದ ವೇಷಗಳ ಪ್ರವೇಶಕ್ರಮ ವಿಶೇಷಕ್ಕೆ ಕಥಕಳಿಯಲ್ಲಿ 'ತಿರಪುರಪ್ಪಾಟ್' ಎಂದೇ ಹೆಸರು. ವೇಷಗಳು ತೆರೆ (ಪರದೆ)ಯೊಳಗಿಂದ ರಂಗಕ್ಕೆ ಹೊರಡುವ ನೃತ್ತಕ್ರಮ ಎಂಬರ್ಥದ ಈ ಹೆಸರು ನಮ್ಮಲ್ಲಿ ಅಪಭ್ರಂಶರೂಪದಲ್ಲಿದೆ. ಬಣ್ಣದ ವೇಷದ ಕಿರೀಟಕ್ಕೆ ನಮ್ಮಲ್ಲಿ ಬೇರೆ ಹೆಸರಿಲ್ಲ; ಅಲ್ಲಿ ರೂಢವಾದ 'ಕೇಶವರತ್ತಟ್ಟಿ' (ಕೇಶಭಾರ + ತಟ್ಟಿ) ಎಂದೇ ನಮ್ಮ ವ್ಯವಹಾರ. ಹೀಗೆ ಒಂದೆರಡಲ್ಲ, ಅನೇಕ ವಿಧದ ಪ್ರಯೋಗಪದ್ಧತಿಗಳನ್ನು ನಮ್ಮ ಯಕ್ಷಗಾನದಲ್ಲಿ ಬಳಕೆಗೆ ತಂದು ಬಹು ದೊಡ್ಡ ಸುಧಾರಣೆಯನ್ನು ಮಾಡಿದವನು ಪಾರ್ತಿಸುಬ್ಬನು. ಈ ಯಥಾರ್ಥವನ್ನೆ ಐತಿಹ್ಯಗಳು ಹೇಳುತ್ತಿವೆ. ಯಕ್ಷಗಾನದ ಮೂಲಪುರುಷನೆ ಪಾರ್ತಿಸುಬ್ಬನು ಎಂಬ ಹೇಳಿಕೆಯು ಪ್ರರೂಢವಾಗಿ ಬಂದಿರುವುದಕ್ಕೆ ಇದುವೆ ಕಾರಣ. ಹೀಗೆ ಸುಬ್ಬನು ಮಾಡಿದ ಸುಧಾರಣೆಯ ಕುರಿತು ನನ್ನ ಅಲ್ಪಮತಿಗೆ ತೋರಿದ ವಿವೇಚನೆಯನ್ನು ಸವಿಸ್ತರವಾಗಿ ಮುಂದೆ ಗ್ರಂಥದಲ್ಲಿ ನಿರೂಪಿಸುತ್ತೇನೆ.
ಆತನು ರಾಮಾಯಣ ಗ್ರಂಥರಚನೆಯ ಆದಿಯಲ್ಲಿ ಪ್ರತಿಜ್ಞಾರೂಪವಾಗಿ ಸೂಚಿಸಿರುವ 'ಬತ್ತೀಸಾಕೃತಿ ತಾಳರಾಗ ವಿಧದಿಂ ರಾಮಾಯಣಂ ಪೇಳ್ವುದ' ಎಂಬ ವಾಕ್ಯವು ಮಹತ್ವವುಳ್ಳುದು. ಆ ಬತ್ತೀಸರಾಗಗಳಾವುವು, ತಾಳ ರಾಗ ವ್ಯವಸ್ಥೆ ಎಂದರೇನು, ಗಾನ ಕ್ರಮದಲ್ಲಿ ಆತನು ಮಾಡಿದ ಚಿಕಿತ್ಸೆ ಏನು, ಆತನ ಪೂರ್ವಕಾಲದ ಯಕ್ಷಗಾನದ ಸ್ವರೂಪವು ಹೇಗಿತ್ತು, ಉತ್ತರ ಕಾಲದಲ್ಲಿ ಏನೇನು ಹೊಸ ಕೃಷಿಯಾಯಿತು ಎಂಬಿತ್ಯಾದಿ ವಿಮರ್ಶೆಯು ಯಕ್ಷಗಾನದ ಹುಟ್ಟು ಪೂರ್ವೋತ್ತರ ವಿಚಾರಕ್ಕೆ ಸಂಬಂಧಿಸಿದುದಾಗಿ ಪ್ರತ್ಯೇಕ ಸಂಶೋಧನಾತ್ಮಕ ಗ್ರಂಥಕ್ಕೆ ಪರ್ಯಾಪ್ತವಾದ ವಿಷಯವಾಗಬಲ್ಲುದು. ಪ್ರಕೃತ ಒಂದೇ ಮಾತಿನಿಂದ ಹೇಳುವುದಾದರೆ ಆಂಧ್ರದಲ್ಲಿ ಕೂಚಿಪುಡಿಯ ಸಿದ್ಧೇಂದ್ರಯತಿ ಮತ್ತು ಕೇರಳದಲ್ಲಿ ಕೊಟ್ಟಾರಕರದ ಮಹಾರಾಜ (ವಂಚಿಧರಾವರ) ಇವರಂತೆ ನಮ್ಮ ಯಕ್ಷಗಾನದಲ್ಲಿ ಹೊಸ ಜೀವಕಳೆಯನ್ನು ತುಂಬಿ ಬಲು ದೊಡ್ಡ ಸುಧಾರಣೆಯನ್ನು ಮಾಡಿದ ಮಹಾವ್ಯಕ್ತಿ ಪಾರ್ತಿಸುಬ್ಬನು. ಅವನ ಹೆಸರು ಅಳಿಯದು. ಇದೇ ಮೇಲೆ ಹೇಳಿದ ರಾಮಾಯಣಾರಂಭದ ಆ ಪದ್ಯದಲ್ಲಿರುವ 'ಪಾರ್ವತೀ ನಂದನ' ಎಂಬ ಪದವು ಸ್ಪಷ್ಟನೆಯಾಗಿರಬಹುದೆ? ಎಂಬಂತಹ ಶಂಕೆ ಏನಾದರೂ ಇದ್ದರೆ ಈಗ