ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೦ / ಕುಕ್ಕಿಲ ಸಂಪುಟ

ಒಂಬತ್ತು ಕಡೆಯಲಿ ಠಾಣ್ಯವುಂಟು |
ಒಂಬತ್ತು ಕಡೆಯಲಿ ತೊಂಭತ್ತು ಸರತಿಗೆ |
ಡೊಂಬಿಗೆ ಹೋಗುವ ಜಂಬಾರವಾಯ್ತು! ||
ಗೊಲ್ಲತಿ : ಸುಂಕದ ನಿಜವೇನು ಹೇಳು - ನಿನ್ನ |
ಅಂಕೆಗೆ ನಾವಂಜುವವರಲ್ಲ ಕೇಳು ||
ಬಿಂಕವು ಸಲ್ಲ ಬೀದಿಯೊಳೆಲ್ಲ ಹೊಲೆಕಣ್ಣು |
ಸೋ೦ಕಿದರೆಡರಕ್ಕು ಮೈಗಾಯಸವು ಬಕ್ಕು ||
ಕೃಷ್ಣ  : ಬೆಣ್ಣೆ ಮಣವಿಗೊಂದು ತಾರ - ಮೂರು |
ಹೊನ್ನು ಮೊಸರ ಭಾರಕಹುದು ನೀವಿದರ |
ಮನ್ನಿಸದಿರೆ ನಿಮ್ಮೆಲ್ಲವರ - ಮನೆ |
ಯನ್ನೊಳಪೊಕ್ಕು ಸೆಳೆಕೊಂಬೆ ಪಾಲ್ಮೊಸರ ||
ಗೊಲ್ಲತಿ : ನಂದಗೋಪನ ಸುಕುಮಾರ - ಸಣ್ಣ |
ಕಂದನೆ ನಿನಗೇತಕಿನಿತು ವಿಚಾರ |
ಮುಂದೆಮ್ಮ ತಡೆದಲ್ಲಿ ವಿವರ- ನಿನ್ನ |
ತಂದೆತಾಯಿಗಳಲ್ಲಿ ಪೇಳ್ವೆವು ದೂರ ||

ಈ ಹೆಂಗಳೆಯರು ಮನೆಗೈದಿ ಅಲ್ಲಿ ಮೊಸರು ಕಡೆಯುತ್ತಿರುವಾಗ ಚಿಣ್ಣ ಕೃಷ್ಣನು ಮೆಲ್ಲನೆ ಒಳನುಗ್ಗಿ ಬಚ್ಚಿಟ್ಟಿದ್ದ ಬೆಣ್ಣೆ ತುಪ್ಪ ಜೇನುಸಕ್ಕರೆಗಳನ್ನು ತಿಂದೋಡುತ್ತಾನೆ. ಮತ್ತಾ ವಸ್ತುಗಳು ಕಾಣೆಯಾದುದನ್ನರಿತ ಆ ಹೆಂಗಳೆಯರು ತಮ್ಮೊಳಗೆ ಆಶ್ಚರ್ಯದಿಂದ ಹೀಗೆ ಮಾತಾಡಿಕೊಳ್ಳುತ್ತಾರೆ :

ಅಷ್ಟತಾಳ :

ಯಾರೆಬಂದವರು! - ಇಲ್ಲಿಗೆ ಕಳ್ಳ | ರಾರೆ ಬಂದವರು! ||
ಸೋರೆಯ ಮೊಸರು ಬೆಣ್ಣೆಯ ತಿ೦ಬುತೋಡಿದ || ಪಲ್ಲ ||
ಸಿಕ್ಕದೊಳಿರಿಸಿದ ಮಡಕೆಗಳೊಳಗೆಲ್ಲ|ಬೆಕ್ಕಿನಂದದಿ ಮೆಲ್ಲ ಹುಡುಕಾಡುತ್ತ|
ಅಕ್ಕನವರು ಭಾವಗೆಂದು ಕಟ್ಟಿರಿಸಿದ | ಸಕ್ಕರೆ ಜೇನುತುಪ್ಪವ ತಿಂಬುತೋಡಿದ ||
ಸುತ್ತಲು ಚಾವಡಿಯೊಳು ಮಲಗಿರುವಾಗ|ಹಿತ್ತಿಲ ಬಾಗಿಲಿಂದೋಡಿ ಬಂದು|
ಅತ್ತೆಯು ಮಲಗಿ ನಿದ್ರಿಸುವಾಗ ಕೊರಳಿಂದ|ಮುತ್ತಿನ ಸರವನ್ನು ಹರಿದು

ಬಿಚ್ಚೋಡಿದ

ಹುಣ್ಣಿಮೆ ದಿವಸ ಮುತ್ತೈದೆ ಬ್ರಾಹ್ಮರಿಗೆಲ್ಲ|ಚೆನ್ನಾಗಿ ಬರಹೇಳಿ ಬಡಿಸಲೆಂದು|
ಅಣ್ಣನವರು ತೆಗೆದಿರಿಸಿದ ರಸಬಾಳೆ | ಹಣ್ಣಿನ ಗೊನೆಯ ವಂಚನೆ

ಮಾಡುತೋಡಿದ

ಮರುಳಾದೆ ಏನೆ ಬಾಲೆ- ಇಲ್ಲಿಗೆ ರಾತ್ರಿ|ಬರುವರಾರುಂಟು ಪೇಳೆ|
ನೆರೆಹೊರೆಯವರು ಎಚ್ಚರಿತುಕೊಂಡಿರುವಾಗ |
ಸರಿರಾತ್ರೆಯೊಳಗೊಬ್ಬ ಸುಳಿವ ಮಾತುಂಟೇನೆ? ||
ಚಿನ್ನ ಬೆಳ್ಳಿಗಳ ಬಿಟ್ಟು-ಸಕ್ಕರೆಬಾಳೆ | ಹಣ್ಣಿಗೆಂದಾಸೆವಟ್ಟು |
ಬೆಣ್ಣೆ ತುಪ್ಪಗಳ ಮೆಲ್ವರೆ? ಮನೆಯೊಳಗಿದ್ದ |
ಸಣ್ಣವರಾಟವಲ್ಲದೆ ಬೇರಿನ್ನಾರುಂಟು? ||