ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೧೫

ಹಾಡುವ ಸಂದರ್ಭವಿದ್ದಲ್ಲಿ 'ನೇಪಥ್ಯ ಗೀಯತೇ' ಎಂಬ ಸೂಚನೆ ಇರುತ್ತದೆ. ಇದರಿಂದ ರಂಗಸ್ಥಳದಲ್ಲಿ ಗಾನಸಂಪ್ರದಾಯವಿದ್ದಿಲ್ಲವೇ ಎಂಬ ಸಂದೇಹಕ್ಕೆ ಬಲಕಾಣುವುದು.

ಹೀಗಿರುವುದರಿಂದ ವಿದ್ವಾಂಸರಲ್ಲಿ ಈ ಕುರಿತು ಹೀಗೆ ತರ್ಕವಿತರ್ಕಗಳು ಉಂಟಾಗಿವೆ :

ನಾಟ್ಯಶಾಸ್ತ್ರದಲ್ಲಿ ಕಾಣುವ ಪುರಾತನ ಸಂಪ್ರದಾಯವು ಭಾಸ ಕಾಳಿದಾಸಾದಿಗಳ ಕಾಲಕ್ಕೇ ಬಹುಶಃ ಸವೆದುಹೋಗಿದ್ದು ಕ್ರಮೇಣ ನೃತ್ಯ ಸಂಗೀತಗಳು ನಾಟಕದಿಂದ ನಿಃಶೇಷವಾಗಿ ಹೊರಟುಹೋಗಿರಬೇಕು, ಅಥವಾ ಆ ಕಾಲಕ್ಕೆ ನೃತ್ಯಾಭಿನಯಗಳಲ್ಲಿದ್ದ ಗೀತನಾಟಕಗಳು ಬೇರೇ ಇದ್ದಿರಬೇಕು, ಭಾಸ ಕಾಳಿದಾಸಾದಿ ಮಹಾಕವಿಗಳ ಈ ನಾಟಕ ಗಳಲ್ಲಿ ಓದಿ ಕೇಳಿಯೂ ಆನಂದಪಡಬಹುದಾದ ಶ್ರವ್ಯಕಾವ್ಯಗುಣಗಳು ವಿಶೇಷವಿರುವುದ ರಿಂದ ಅವುಗಳಷ್ಟೇ ಬದುಕಿ ನಿಂತು ಗೀತನಾಟಕಗಳು ಸ್ವಭಾವತಃ ಕಾಲಕ್ರಮದಲ್ಲಿ ಅಳಿದು ಹೋಗಿರಬೇಕು; ಅಥವಾ ನೃತ್ಯ ಸಂಗೀತಗಳ ಗೊಂದಲವು ಅಭಿನಯದ ರಸೋತ್ಕರ್ಷಕ್ಕೆ ಪ್ರತ್ಯವಾಯವೆಂದು ಭಾವಿಸಿ ಭಾಸ ಕಾಳಿದಾಸಾದಿ ಮಹಾಕವಿಗಳೇ ಈ ಸುಧಾರಣೆಯನ್ನು ತಂದುದಿರಬೇಕು; ಸಾಮಾಜಿಕರಲ್ಲಿ ಬುದ್ಧಿಸಂಸ್ಕಾರ ಹೆಚ್ಚಿದಂತೆಲ್ಲ ಕೃತ್ರಿಮಕ್ಕೆ ಬೆಲೆ ಕಡಿಮೆಯಾಗುತ್ತ ಬಂದಿರುವುದೂ ಸಹಜ.

ಇದಲ್ಲದೆ ಸಂಸ್ಕೃತ ನಾಟಕಗಳನ್ನು ಹೇಗೆ ರಂಗಕ್ಕೆ ತರುತ್ತಿದ್ದರೆಂಬುದನ್ನು ನಾಟ್ಯಶಾಸ್ತ್ರದಿಂದ ನಾವು ತಿಳಿಯಲಾರೆವು ಎಂದು ಒಂದೇ ಮಾತಿನಲ್ಲಿ ತೀರ್ಮಾನಿಸುವ ಸುಲಭದ ಪಂಡಿತರೂ ನಮ್ಮಲ್ಲಿದ್ದಾರೆ!

ಇಂಥ ಊಹನೆಗಳಿಗೆ ಬೆಂಬಲವಾಗಿ ಇನ್ನೂ ಒಂದಂಶವನ್ನು ಹೇಳಬಹುದು. ನಾಟಕಾರಂಭಕ್ಕೆ ಮೊದಲು ನಡೆಯತಕ್ಕ ನಾಂದೀವಿಧಿಯಲ್ಲಿ ನೃತ್ಯಗೀತಾತ್ಮಕವಾದ ಪೂರ್ವರಂಗಪ್ರಯೋಗವು ಬಹಳ ವಿಸ್ತಾರವಾಗಿ ನಡೆಯತಕ್ಕದ್ದಿದೆ ಎಂದು ನಾಟ್ಯಶಾಸ್ತ್ರದ ಆ ಲಕ್ಷಣದಿಂದ ತಿಳಿಯುವುದು. ಅಲ್ಲಿಯೂ ಅನೇಕ ವಿಧದ ಗೀತೆಗಳಿವೆ. ಲಾಸ್ಯ ಪ್ರಯೋಗದಲ್ಲಿ ಗ್ರಾಮ್ಯಹಾಸ್ಯ ಹಾಗೂ ಅಶ್ಲೀಲ ಶೃಂಗಾರದ ವಿಕಟ ಸಂಭಾಷಣೆಯ ಪ್ರಸಂಗಗಳಿವೆ. ಇವುಗಳ ಪ್ರಸ್ತಾವವೂ ನಮ್ಮ ನಾಟಕಗಳಲ್ಲಿ ಕಾಣುವುದಿಲ್ಲವಷ್ಟೆ. ಸಂಗೀತನೃತ್ಯಗಳೇ ಪ್ರಧಾನವಾಗಿರುವುದಿರಿಂದ ಆ ಭಾಗವನ್ನೂ ನಮ್ಮ ನಾಟಕಕವಿಗಳು ತೆಗೆದುಹಾಕಿ ಆ ಸ್ಥಾನದಲ್ಲಿ ಆಚಾರಮಾತ್ರಕ್ಕಾಗಿ ಒಂದೋ ಎರಡೋ ಮಂಗಳಶ್ಲೋಕ ಗಳನ್ನು 'ನಾಂದಿ' ಎಂದು ರಚಿಸಿದ್ದಿರಬೇಕು ಎಂದೂ ಎಣಿಸಬಹುದು. ಇದಕ್ಕೆ ಸಾಧಕ ವೆಂಬಂತೆ, ಮತ್ತೆ ಹುಟ್ಟಿದ ದಶರೂಪಕಾದಿ ನಾಟಕಲಕ್ಷಣ ಗ್ರಂಥಗಳಲ್ಲಿಯೂ ನೃತ್ಯಗೀತಗಳ ಹಾಗೂ ಪೂರ್ವರಂಗದ ವಿಚಾರವಿರುವುದೂ ಇಲ್ಲ.

ಆದರೆ, ನಾಟ್ಯಶಾಸ್ತ್ರದ ಗೀತಲಕ್ಷಣಗಳನ್ನು ಚೆನ್ನಾಗಿ ಪರಿಶೀಲಿಸಿದಲ್ಲಿ ಇದು ಹೀಗಾಗಿರುವುದಕ್ಕೆ ಸಂಭವವಿಲ್ಲವೆಂದೇ ತೋರುವುದು. ನಮ್ಮಲ್ಲಿ ಈಗ ಸುಮಾರು ಒಂದು ಸಾವಿರ ವರ್ಷಗಳಿಂದ ಸಂಸ್ಕೃತನಾಟಕ ಪ್ರಯೋಗವಾಗಲಿ, ರಚನೆಯಾಗಲಿ ಇಲ್ಲದಿರುವುದರಿಂದ ನಾಟ್ಯಶಾಸ್ತ್ರದ ಅಭ್ಯಾಸವೇ ಬಿಟ್ಟುಹೋಗಿದೆ. ಸಂಗೀತವೂ ಭರತ ಮಾರ್ಗವನ್ನು ಬಿಟ್ಟು ಬೇರೆ ದಾರಿ ಹಿಡಿದಿದ್ದು, ಲಕ್ಷಾನುರೋಧವಾದ ಸಂಗೀತಶಾಸ್ತ್ರ ಗ್ರಂಥಗಳು ಕಾಲಕಾಲಕ್ಕೆ ಬೇರೆ ಬೇರೆ ಹುಟ್ಟಿಕೊಂಡಿರುವುದರಿಂದ ಆ ಬಗೆಯಲ್ಲಿಯೂ ನಾಟ್ಯಶಾಸ್ತ್ರವನ್ನು ನೋಡುವ ಆವಶ್ಯಕತೆ ಎಷ್ಟೋ ವರ್ಷಗಳಿಂದ ಬಂದಿರುವುದಿಲ್ಲ. ಆದ್ದರಿಂದ ಸರ್ವಸಾಮಾನ್ಯವಾಗಿ ವಿದ್ವಾಂಸರಲ್ಲಿಯೂ ಅದರ ಒಳಹೊಕ್ಕು ನೋಡುವ