ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
'ಯವನ' - 'ಯವನಿಕಾ' / ೨೩೫

ಕರೆಯುತ್ತಿದ್ದವು. ಇವೆರಡು ದೇಶಗಳೂ ಉತ್ತಮ ಜಾತಿಯ ಕುದುರೆಗಳಿಗೆ ಹೆಸರಾದು ವೆಂಬುದು ಲೋಕಪ್ರಸಿದ್ಧವಾದ ವಿಷಯವಷ್ಟೆ? ವನಾಯುದೇಶವೆಂಬ ಹೆಸರಿದ್ದ, ಅರೇಬಿಯಾ ದೇಶದ ಒಂದು ಪ್ರಾಂತ್ಯದ ಕುದುರೆಗಳು ಅತ್ಯುತ್ತಮವಾದುವೆಂದೂ, ಬಹು ಪುರಾತನ ಕಾಲದಲ್ಲಿ ಆ ಕುದುರೆಗಳನ್ನು ನಮ್ಮಲ್ಲಿಗೆ ತರುತ್ತಿದ್ದರೆಂದೂ ಚಿರಪ್ರಸಿದ್ಧ ವಾಗಿಯೇ ಇದೆ. ಬೇರೆ ಬೇರೆ ದೇಶದ ನಾನಾ ಜಾತಿಯ ಕುದುರೆಗಳ ವಿವರವನ್ನು ಅಮರಕೋಶದಲ್ಲಿ ಹೀಗೆ ಕೊಡಲಾಗಿದೆ-

ವನಾಯುಜಾಃ ಪಾರಸೀಕಾಃ ಕಾಂಭೋಜಾ ಬಾಹ್ ಕಾಸ್ತಥಾ
ಯಯುರಜ್ಯೋಶ್ವಮೇಧೀ ಯೋ ಜವನಸ್ತು ಜವಾಧಿಕ:-ಇತ್ಯಾದಿ

ಅರೇಬಿಯ, ಪರ್ಶಿಯ (ಇರಾನ್), ತುರ್ಕಿಸ್ತಾನ್, ಗಾಂಧಾರ (ಅಫ್‌ಘಾನಿಸ್ತಾನ್) ಮೊದಲಾದ ಪಶ್ಚಿಮೋತ್ತರಕ್ಕಿರುವ ಅಶ್ವಸಮೃದ್ಧ ದೇಶಗಳು ನಾನಾ ವಿಧದ ಸುಗಂಧ ದ್ರವ್ಯಗಳಿಗೂ ಹೆಸರಾಗಿವೆಯೆಂಬುದು ಲೋಕಪ್ರಸಿದ್ಧವಾಗಿ ತಿಳಿದಿರುವ ವಿಚಾರ. ಅವುಗಳಲ್ಲಿ ಅತ್ಯುತ್ತಮವಾದ ಸುಗಂಧದ್ರವ್ಯವೆಂಬುದು 'ಜಾವನ', 'ತುರುಷ್ಯ' ಎಂಬ ಹೆಸರುಗಳಿಂದ ನಮ್ಮ ದೇಶದಲ್ಲಿಯೂ, ದೇಶಾಂತರಗಳಲ್ಲಿಯೂ ಬಹು ಪುರಾತನ ಕಾಲದಿಂದಲೇ ಪ್ರಖ್ಯಾತವಾಗಿದೆ. (ತುರುಷಃ ಪಿಂಡಕಃ ಸಿಸ್ಕೋ ಯಾವನೋಪ್ಯಥ ಪಾಯಸಃ ಅಮರ) ಇದಲ್ಲದೆ ನಮ್ಮ ಪ್ರಾಚೀನ ವೈದ್ಯ ಗ್ರಂಥಗಳಲ್ಲಿ ಹೇಳಿರುವ 'ಯವಾನಿಕಾ' ಎಂಬ ಔಷಧ ಸಂಭಾರವೂ ನಮ್ಮಲ್ಲಿಗೆ ಪರ್ಶಿಯಾದಿಂದ ಬಂದು ಕೊಂಡಿದ್ದುದೆಂಬುದು ಚರಕಸಂಹಿತಾದಿ ಆಯುರ್ವೇದ ಗ್ರಂಥಗಳಲ್ಲಿ ಅವಕ್ಕಿರುವ ಹೆಸರುಗಳಿಂದ ತಿಳಿಯುವುದು. ಯವಾನಿಕವು "ಖುರಾಸಾನಿ ಓಮ (ವೋದಕ್ಕಿ)” ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವುದರಿಂದ ಅದು ಪರ್ಶಿಯದ ವಸ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಖುರಾಸಾನ್" ಎಂಬುದು ಪರ್ಶಿಯ (ಇರಾನ್)ದ ಪ್ರಾಂತ ಪ್ರದೇಶವೇ ಆಗಿದೆಯಷ್ಟೆ.

ಅರೇಬಿಯಾದ ಹಾಗೂ ಪರ್ಶಿಯದ ಈ ಯವನರು ನಮ್ಮ ಕೊಂಕಣ ಕರಾವಳಿಯುದ್ದಕ್ಕೆ ಸಮುದ್ರ ಮಾರ್ಗವಾಗಿ ಬಂದು ಪುರಾತನ ಕಾಲದಿಂದಲೇ ವ್ಯಾಪಾಠ ವಹಿವಾಟುಗಳನ್ನು ನಡೆಸುತ್ತಿದ್ದರೆಂಬುದಕ್ಕೂ ಬೇಕಷ್ಟು ಆಧಾರಗಳು ದೊರೆಯುತ್ತವೆ.

ತಮಿಳರ ಪ್ರಾಚೀನ ಕಾವ್ಯವಾದ 'ಶಿಲಪ್ಪದಿಕಾರಂ'ನಲ್ಲಿ ಪಾಂಡ್ಯರಾಜನ ಪುರದ್ವಾರ ಗಳನ್ನು ಹಾಗೂ ದುರ್ಗಗಳನ್ನು ಭೀಮಕಾಯರಾದ, ಅರಿಭಯಂಕರರಾದ ಯವನರು ಖಡ್ಗಪಾಣಿಗಳಾಗಿ ಕಾಯುತ್ತಿದ್ದರು ಎಂಬ ವರ್ಣನೆ ಇದೆ :

ಕಡಿಮದಿಲ್ ವಾಯಿಲ್‌ ಕಾವಿಲ‌, ಕಿರಂದ
ಅಡಾಳ್ ಯವನರ್‌ನ್ನು ಐರಾದುಪುಕ್ಕು-ಅಂಕು
ಆಯಿರಂ ಕಣೋನ್ ಅರುಂಗಲಕ್ಷ್ಮಿಪು
ವಾಯ್ದಿರಂತನ್ನ ಮದಿಲಕ ವರೈಪ್ಪಿಲ್

ಹೀಗೆ ಆ ಕಾಲದಲ್ಲಿ ಪಾಂಡ್ಯರಾಜನಿಂದ ದುರ್ಗರಕ್ಷಣೆಯಲ್ಲಿ ನಿಯೋಜಿತರಾಗಿದ್ದ ಯವನವೀರರೆಂದರೆ ಜಲಮಾರ್ಗವಾಗಿ ಬಂದ ಪರ್ಶಿಯನರೋ, ಅರೇಬಿಯನರೋ ಆಗಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಕೊಂಕಣತೀರದಲ್ಲಿ ಪರ್ಶಿಯಾಕ್ಕೆ ಜಲಮಾರ್ಗವಿತ್ತೆಂಬುದು ಹಿಂದ ಕೊಟ್ಟಿರುವ ಕಾಳಿದಾಸನ ಶ್ಲೋಕದಿಂದಲೇ ವ್ಯಕ್ತವಾಗುವುದು.