೨೩೬ / ಕುಕ್ಕಿಲ ಸಂಪುಟ
ಪಾರಸೀಕಾಂಸ್ಕತೋ ಜೇತುಂ ಪ್ರತಸ್ಥೆ ಸ್ಮಲವರ್ತನಾ
ಜಲಮಾರ್ಗವಿದ್ದರೂ ರಘುವು, ದಿಗ್ವಿಜಯದ ಚೈತ್ರ ಯಾತ್ರೆಯಲ್ಲಿ ಸಮುದ್ರಯಾನವು
ಅಪ್ರಶಸ್ತವೆಂಬುದರಿಂದ ಸ್ಥಲಮಾರ್ಗದಲ್ಲೇ ಮುಂದುವರಿದನೆಂಬುದು ಈ ಶ್ಲೋಕದ
ಆಶಯವಾಗಿದೆ.
ಹೀಗೆ ಮೊದಲಿನಿಂದಲೇ ಪರ್ಶಿಯ, ಅರೇಬಿಯ ದೇಶಗಳ ಜನಾಂಗಕ್ಕೆ ಯವನ ರೆಂಬ ಹೆಸರಿದ್ದುದರಿಂದಲೇ ಮಹಮ್ಮದೀಯ ಧರ್ಮವು ಅಲ್ಲಿ ಹುಟ್ಟಿ ವ್ಯಾಪಿಸಿದ ಮೇಲಿನ ಚರಿತ್ರೆಯಲ್ಲಿ ಆ ಧರ್ಮದವರನ್ನೇ ಯವನರು ಎಂದು ಕರೆಯುವ ಸಾಮಾನ್ಯ ವ್ಯವಹಾರವು ನಮ್ಮಲ್ಲಿ ರೂಢಿಯಲ್ಲಿ ಬಂದಿರುವುದು ಸಹಜವೇ ಸರಿ. ಅರೇಬಿಯನ್ ನೈಟ್ಸ್' ಎಂಬ ಇಂಗ್ಲಿಷ್ ಕಥಾಸಂಕಲನದ ಕನ್ನಡ ಭಾಷಾಂತರಕ್ಕೆ 'ಯವನ ಯಾಮಿನೀ ವಿನೋದ'ವೆಂಬ ಹೆಸರು ಕೊಟ್ಟಿರುವುದನ್ನು ಲಕ್ಷಿಸಬಹುದು.
ಹೀಗೆ ನಮ್ಮ ಪುರಾಣಾದಿಗಳಲ್ಲಿ ಯವನರೆಂದು ಕರೆದಿರುವುದು ಅಶ್ವಸಮೃದ್ಧಿ ಯುಳ್ಳ ನಮ್ಮ ನೆರೆಯ ಪಾಶ್ಚಾತ್ಯ ದೇಶಗಳಾದ ಟರ್ಕಿ, ಪರ್ಶಿಯ, ಅರೇಬಿಯಗಳ ಜನಾಂಗವನ್ನೇ ಹೊರತು ಬಹುದೂರದ ಗ್ರೀಕರನ್ನಲ್ಲವೆಂಬುದು ನಮ್ಮ ಪುರಾತನ ಗ್ರಂಥಗಳಿಂದಲೇ ವ್ಯಕ್ತವಾಗುವುದು. ಅದೂ ಅಲ್ಲದೆ ಸಂಸ್ಕೃತ ಗ್ರಂಥಗಳಲ್ಲಿ ನಾನು ತಿಳಿದಂತೆ, ಸರ್ವತ್ರ 'ಯವನ' (ಯವನೀ-ಸ್ತ್ರೀಲಿಂಗ) ಎಂಬ ರೂಪವೇ ಇರುವುದು ಹೊರತು, ಆಶೋಕನ ಶಾಸನದಲ್ಲಿರುವಂತೆ 'ಯೋಣ' ಎಂಬ ರೂಪವು ಎಲ್ಲಿಯೂ ಕಂಡುಬರುವುದಿಲ್ಲ. ಪಾಶ್ಚಾತ್ಯ ವಿದ್ವಾಂಸರು ಹೇಳುವಂತೆ ಶಾಸನದಲ್ಲಿರುವ 'ಯೋಣ ಎಂಬುದೇ ಮೂಲರೂಪವೆಂದಾಗಿದ್ದರೆ ಸಂಸ್ಕೃತದಲ್ಲಿ ಅದು 'ಯವನ' ಎಂದು ಏಕೆ ರೂಪಾಂತರಗೊಳ್ಳಬೇಕು? ಹಾಗಾಗುವುದೆಂಬುದಕ್ಕೆ ವ್ಯಾಕರಣದ ನಿಯಮವಾಗಲಿ, ಬೇರೆ ಉದಾಹರಣೆಯಾಗಲಿ ಇರುವುದಿಲ್ಲ. ವಿಭಾಷಾ ಪದವೊಂದರ ಉಚ್ಚಾರ ಹಾಗೂ ವರ್ಣ ಸಂಯೋಗವು ಸಂಸ್ಕೃತಕ್ಕೆ ಸಹಜವಾದ್ದೇ ಇರುವುದೆಂದಾದರೆ ಸಂಸ್ಕೃತದಲ್ಲಿ ಅದು ಹಾಗೆಯೇ ಪ್ರಯೋಗಿಸಲ್ಪಡುತ್ತದಲ್ಲದೆ ಬೇರೆ ರೂಪವನ್ನು ಪಡೆಯುವಂತಿಲ್ಲ. ಮೂಲ ರೂಪವಾಗಿ ಪ್ರಾಕೃತದಲ್ಲಿ 'ಯೋಣ' ಎಂದಿದ್ದರೆ ಸಂಸ್ಕೃತದಲ್ಲಿ ಅದು 'ಯೋನ ಎಂದಾಗಬೇಕೇ ಹೊರತು 'ಯವನ' ಎಂದಾಗುವಂತಿಲ್ಲ. ರೋಮ್ ದೇಶದ ಹೆಸರು ಸಂಸ್ಕೃತದಲ್ಲಿ 'ರೋಮ' ಎಂದೇ ಪ್ರಯೋಗಿಸಲ್ಪಡುವುದಲ್ಲದೆ 'ರವಮ' ಎಂದಲ್ಲ. ಹಾಗೆಯೇ 'ಯೂರೋಪ್' ದೇಶವನ್ನು ಸಂಸ್ಕೃತದಲ್ಲಿ 'ಯೂರೋಪ' ಎಂದೇ ಕರೆಯುವುದಾಗಿದೆ. ಅಷ್ಟೇ ಅಲ್ಲ, ಸಂಸ್ಕೃತದ ಪ್ರಕೃತಿರೂಪವು 'ಯವನ' ಎಂದಿದ್ದರೆ, ಪ್ರಾಕೃತದಲ್ಲಿ ಅದು ಯೋಣ' ಎಂದಾಗುವುದೂ ಸಹಜ, ಸಂಸ್ಕೃತದ 'ಭವತಿ' ಎಂಬುದು ಪ್ರಾಕೃತದಲ್ಲಿ 'ಬೋಧಿ', 'ಗವಲ' ಎಂಬುದು 'ಗೋಣ' ಎಂದಾಗುವ ಹಾಗೆ. ಆದುದರಿಂದ ಅಶೋಕನ ಶಾಸನದ 'ಯೋಣ' ಪದವೇ ಸಂಸ್ಕೃತದಲ್ಲಿ ಯವನ ಎಂದಾಯಿತೆಂಬುದು ಒಪ್ಪತಕ್ಕ ಮಾತಲ್ಲ. ಅದಕ್ಕೆ ಬದಲು ಶಾಸನದಲ್ಲಿ ಪ್ರಯೋಗಿಸಿರುವ 'ಯೋಣ' ಪದವೇ ಸಂಸ್ಕೃತ 'ಯವನ' ಪದದ ಪ್ರಾಕೃತರೂಪವಾಗಿರುವುದು ಸಂಭವನೀಯ ಎನ್ನಬೇಕು. ಸಂಸ್ಕೃತದ 'ಶ್ರಾವಣ'ವು (ಮಾಸ) ದೇಶಿಯಲ್ಲಿ 'ಸೋಣ' ಎಂದಾಗಿರುವುದು ಹೊರತು ದೇಶೀಯ 'ಸೋಣ'ವು ಸಂಸ್ಕೃತೀಕೃತವಾಗಿ 'ಶ್ರಾವಣ ಎಂದಾಗಿರುವುದಿಲ್ಲವಷ್ಟೆ?
ಅಶೋಕನ ಶಾಸನದಲ್ಲಿ ಹೇಳಿದ ಅಂತಿಯೋಕನೆಂಬ ಗ್ರೀಕ್ ರಾಜನಾದರೂ ಪರ್ಶಿಯದ ಪೂರ್ವಭಾಗವನ್ನು (ಬ್ಯಾಕ್ಸಿಯ) ಗೆದ್ದು, ಅಲಿ ಪ್ರತಿಷ್ಠಿತನಾಗಿ