ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಬಯಲಾಟದ ಸಭಾಲಕ್ಷಣ

ನಮ್ಮ ಬಯಲಾಟ ಪ್ರಯೋಗರಂಗದಲ್ಲಿ ಭರತೋಕ್ತಿ ಲಕ್ಷಣಕ್ಕೆ ಅನುಸಾರವಾಗಿ ಇರುವು ದೆಂಬುದನ್ನು ತಿಳಿದುಕೊಂಡವರು ನಮ್ಮಲ್ಲಿ ವಿರಳ, ಬಹುಶಃ ಇಲ್ಲವೇ ಇಲ್ಲ ಏನೋ. ಕಾರಣವೆಂದರೆ, ನಾಟ್ಯಶಾಸ್ತ್ರವನ್ನು ಅಧ್ಯಯನ ಮಾಡಿದಲ್ಲದೆ ಈ ಶಾಸ್ತ್ರಕರ್ಮ ಸಮಯೋಗವನ್ನು ತಿಳಿಯುವುದು ಸಾಧ್ಯವಲ್ಲ, ಸಭಾಲಕ್ಷಣವೆಂಬ ಪೂರ್ವರಂಗ ವಿಚಾರವಾದರೂ ಅಷ್ಟೇ, ನಾಟ್ಯಶಾಸ್ತ್ರದ ಪೂರ್ವರಂಗ ವಿಧಾನಗಳನ್ನು ಚೆನ್ನಾಗಿ ಹೋಲಿಸಿ ನೋಡಿದರೆ ಮಾತ್ರ ಅದು ಶಾಸ್ತ್ರೀಯ ಸಂಪ್ರದಾಯವೆಂಬ ಅರಿವಾಗಬಲ್ಲುದು; ಅದರ ಯೋಗ್ಯತೆ ಅವಶ್ಯಕತೆ ಏನು ಎಂಬುದು ಅರ್ಥವಾಗಬಲ್ಲುದು. ಇಲ್ಲವಾದರೆ ಇವೆಲ್ಲಾ ಅನಾವಶ್ಯಕವಾದ ಆಬದ್ಧ ಪ್ರಯೋಗಗಳು ಹಾಗೂ ಹಳ್ಳಿಯ ಹುಂಬರು ಉಂಟುಮಾಡಿದ ಕಂದಾಚಾರಗಳೆಂದು ಕಾಣಬಹುದು. ಹಾಗೆ ಕಂಡುದರಿಂದಲೇ ಪ್ರಾಯಶಃ ಪಂಡಿತಮನ್ನ ರಾದ, ಕಲೆಗಳಲ್ಲಿ ಸರ್ವಸ್ವತಂತ್ರ ಸ್ವತಂತ್ರರೆಂದು ಭಾವಿಸಿಕೊಳ್ಳುವ (ಹೀಗೆಂದರೆ ಹೆಚ್ಚಾದಿತೇನೋ ಎಂದು ಭಯಪಡುತ್ತೇನೆ) ನಮ್ಮ ಬಯಲಾಟದ ಸುಧಾರಕರು, ಸಂಶೋಧಕರು ಎನಿಸಿಕೊಳ್ಳುವ ಕೆಲವರು ಇದು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿ ಪರಾನುಕರಣೆಯಿಂದ ಹೇಗೋ ರೂಪಗೊಂಡು ಅವ್ಯವಸ್ಥಿತವಾಗಿ ರೂಢಿಗೆ ಬಂದ ಜಾನಪದ ಗೊಂದಲಗೊಟ್ಟಿ ಎಂದು ಭಾವಿಸುವುದಕ್ಕೆ ಏನೆನ್ನಬೇಕೋ ತಿಳಿಯುವುದಿಲ್ಲ. ಅಂತಹವರು ನಾಟ್ಯಶಾಸ್ತ್ರವನ್ನೇ ಜಾನಪದವೆಂದರೂ ಎನ್ನಬಹುದು. ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಆದರೆ ಇಂಥದ್ದೇ ಶಾಸ್ತ್ರೀಯ, ಇಂಥದೇ ಜಾನಪದ ಪರಿಚ್ಛೇದಿಸುವ ಗಡು ಅಥವಾ ಮಾನದಂಡ ಯಾವುದು? ಎಂಬ ಒಂದು ಪ್ರಶ್ನೆಯನ್ನು ಮಾತ್ರ ನಾನು ಕೇಳಬಯಸುತ್ತೇನೆ. ಅದಕ್ಕೆ ಉತ್ತರ ಹೇಳಬಲ್ಲವರಾರು? ಯಾರಾದರೂ ಇದ್ದರೆ ನನ್ನಂತಹ ಯಕಶ್ಚಿತ್‌ ಜನಕ್ಕೆ ಅದನ್ನು ತಿಳಿಸುವ ಕೃಪೆ ಮಾಡುವರೇ?
ನಮಗಿರುವ ಸಾಮಾನ್ಯ ತಿಳುವಳಿಕೆಯಂತೆ ನಾವು ಹೇಳುವುದಾದರೆ ಯಾವುದಕ್ಕೆ ಶಾಸ್ತ್ರಾಧಾರವಿದೆಯೋ ಅದು ಶಾಸ್ತ್ರೀಯ. ಯಾವುದಕ್ಕೆ ಇಲ್ಲವೋ ಅದು ಅಶಾಸ್ತ್ರೀಯ ಅಥವಾ ಜಾನಪದ ಎಂದಲ್ಲವೇ ಹೇಳಬೇಕಾಗಿರುವುದು? ಆ ಮಾನ ದಂಡದಿಂದ ಪರಿಚ್ಛೇದಿಸುವುದಾದಲ್ಲಿ ಬಯಲಾಟವಾಗಲಿ, ಅದರ 'ಸಭಾಲಕ್ಷಣ'ವೆಂಬ ಪೂರ್ವರಂಗ ವಾಗಲಿ ವಿರುದ್ಧ ಶಾಸ್ತ್ರೀಯವೆಂದೇ ಹೇಳಬೇಕು. ಕಳೆದ ೫೦ ವರ್ಷಗಳಿಂದ ಈ ಮಾತನ್ನು ನಾನು ಹೇಳುತ್ತ ಬಂದಿದ್ದೇನೆ. ಅನೇಕ ಲೇಖನ, ಭಾಷಣಗಳಲ್ಲಿ ಸೋಪಪಕವಾಗಿ ಪ್ರತಿಪಾದಿಸಿದ್ದೇನೆ. ಆ ಶಾಸ್ತ್ರೀಯತೆಯನ್ನು ಕಂಡುಕೊಳ್ಳುವುದಕ್ಕಾಗಿಯೇ ಭರತನ ನಾಟ್ಯ ಶಾಸ್ತ್ರವನ್ನೂ, ನಾಟ್ಯದರ್ಪಣ, ಭರತ ಭಾಷ್ಯ, ಸಂಗೀತ ರತ್ನಾಕರ, ಭರತಕಲ್ಪಲತಾ ಮಂಜರಿ, ಭಾವಪ್ರಕಾಶನ, ಮತಂಗ ಮುನಿಯ ಬೃಹದ್ದೇಶಿ, ನಾಟ್ಯಲಕ್ಷಣ ರತ್ನಕೋಶ ಮುಂತಾದ ಅನೇಕ ನಾಟ್ಯ ಸಂಗೀತ ಲಕ್ಷಣಗ್ರಂಥಗಳನ್ನು ಯಥಾಮತಿಯಾಗಿ ಅಧ್ಯಯನ ಮಾಡಿದ್ದೇನೆ. ಹಾಗೆ ನನಗುಂಟಾದ ಅನುಭವದಿಂದ ಈಗಲೂ, ಇನ್ನು ಮುಂದೆಯೂ, ನಾನು ಒಂದೇ ಮಾತಿನಲ್ಲಿ ಹೇಳುವುದೇನೆಂದರೆ, ನಾಟ್ಯಶಾಸ್ರೋಕ್ತ ಸಂಪ್ರದಾಯವನ್ನು ಬಹಳ ಮಟ್ಟಿಗೆ ಯಥಾವತ್ತಾಗಿ ಉಳಿಸಿಕೊಂಡಿರುವ ಪೂರ್ವರಂಗ ಸಮೇತವಾದ ಚತುರ್ವಿಧಾಭಿನಯಗಳುಳ್ಳ ಭರತೋಕ್ತ ನಾಟ್ಯಪ್ರಯೋಗವೆಂಬುದು ದಕ್ಷಿಣ ಕನ್ನಡದಲ್ಲಿ ತೆಂಕುಮಟ್ಟು (ತಿಟ್ಟು) ಎಂದು ಕರೆಯಲಾಗುವ ನಮ್ಮ ಬಯಲಾಟ ಒಂದೇ ಹೊರತು ಇನ್ನೊಂದಿಲ್ಲ. ಅದನ್ನು ಊರ್ಜಿತಕ್ಕೆ ತಂದವನು ಕಾಸರಗೋಡು ತಾಲೂಕಿನ ಕುಂಬಳೆಯ ಕವಿ ಪಾರ್ತಿಸುಬ್ಬನೆಂಬ ಹೇಳಿಕೆಯೂ ಯಥಾರ್ಥವಾದದ್ದೆಂದೇ ನನ್ನ ಅಭಿಮತ. ಇದೀಗ ನಿಮ್ಮ ಮುಂದಿಟ್ಟಿರುವ ಸಭಾಲಕ್ಷಣದ ಓಲೆ ಪ್ರತಿಯಿಂದಲೇ ಅದು ವ್ಯಕ್ತವಾಗುವುದು. ಇದರಲ್ಲಿಯ ಮುಖ್ಯ ಅಂಶಗಳನ್ನು ಸಂಕ್ಷೇಪವಾಗಿ, ನಾನು ಸಂಶೋಧಿಸಿ ಸಂಪಾದಿಸಿದ