ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
'ಬೆದಂಡೆ - ಚತ್ತಾಣ'

ಅದರ ಗಾತ್ರ ವಿಸ್ತಾರವನ್ನು ಹೊಂದಿಕೊಂಡಿರುವುದೆಂಬುದಕ್ಕೆ ಪ್ರಮಾಣವಿಲ್ಲ. ಮಾತ್ರವಲ್ಲ, ಮೆಲ್ಬಾಡೂ ಹಾಡುಗಬ್ಬವೆಂದಾಗುವುದು ಎಂಬ ಅಭಿಪ್ರಾಯವು ಆ ಸೂತ್ರದ ಉತ್ತರಾರ್ಧದಲ್ಲೇ ಕಾಣುವುದಷ್ಟೆ? ಆದುದರಿಂದ ಅಲ್ಲಿ 'ಪಾಡುಗಳಿಂದಂ' ಎಂದಿರು ವುದಕ್ಕೆ ಹಾಡತಕ್ಕ ಪದಗಳಿಂದ ಎಂಬ ಸಾಮಾನ್ಯಾರ್ಥವೇ ಸಾಧೀಯವಾಗಿ ಕಾಣುವುದು ಇರಲಿ.

ನಾಗವರ್ಮನು ಹೇಳುವ ಪ್ರಕಾರ, ಬೆದಂಡೆಗಬ್ಬದಲ್ಲಿ ಒಂದೊಂದಾಗಿ ಬರುವ ಅಲ್ಪಸಂಖ್ಯೆಯ ಕಂದವೃತ್ತಗಳನ್ನು ಬಿಟ್ಟರೆ ಉಳಿದುವೆಲ್ಲವೂ ಪದಗಳು, ಎಂದರೆ ಹಾಡುಗಳು ಎಂದು ಸ್ಪಷ್ಟವಾಗುವುದು. ಪೂರ್ವದ ನಮ್ಮ ಕವಿಗಳೂ ಬೆದಂಡೆಯೆಂಬುದು ಹಾಡುಗಳ ರಚನೆ, ಎಂದಿರುವುದನ್ನೂ ಲಕ್ಷಿಸಬಹುದು. ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ 'ಆ ಮಂಜುವೆಟ್ಟಿನ ಗೊರವಂ... ಬೆದಂಡೆಯೊಳಾದೊಡಂ ಪಾಡೆಂಬುದಂ, ಕೇರಿಯೊಳಾದೊಡಂ ನರ ಎಂಬುದಂ ಸೈರಿಸಂ' (೧೪೮) ಎಂದಿದೆ.

ಆದುದರಿ೦ದ 'ಕಂದಮುಮಮಳಿನ ವೃತ್ತಮುತೊಂದೊಂದೆಡೆಗೊಂಡು ಜಾತಿ ಜಾಣೆಸೆಯೆ...' ಎಂಬ ಕವಿರಾಜಮಾರ್ಗಕಾರನ ಬೆದಂಡೆಯ ಲಕ್ಷಣದಲ್ಲಿರುವ ಆ 'ಜಾತಿ' ಎಂದರೆ ಹಾಡುಗಳೇ ಎಂಬುದರಲ್ಲಿ ಸಂದೇಹವಿಲ್ಲ. ಹಾಡು, ಪದ, ಜಾತಿ, ಈ ಮೂರು ಸಂಜ್ಞೆಗಳಿಗೂ ಅರ್ಥ ಒಂದೇ, ಫಲಿತಾಂಶವೆಂದರೆ, ಬೆದಂಡೆ ಎಂಬುದು ವಸ್ತುತಃ ಸಂಗೀತರೂಪದಲ್ಲಿ ಹಾಡತಕ್ಕ ಗೇಯ ಕಾವ್ಯವೆಂದು ಸಿದ್ಧವಾಗುವುದು. ಈ ಜಾತಿಗಳು ನಮ್ಮ ಛಂದೋಗ್ರಂಥಗಳಲ್ಲಿ ಹೇಳುವ ಏಲೆಯೇ ಮೊದಲಾದ ಕರ್ಣಾಟಕ ಭಾಷಾಜಾತಿ ಗಳಾಗಿರಬೇಕೆಂಬುದನ್ನು ಹಿಂದೆ ನೋಡಿದೆವು. ಇವೇ ನಮ್ಮ ಸಂಗೀತದಲ್ಲಿ ಬಹಳ ಪ್ರಸಿದ್ಧವಾದ ಗೇಯವಸ್ತುಗಳಾಗಿದ್ದುವೆಂಬುದನ್ನು ಸಂಗೀತಶಾಸ್ತ್ರಗ್ರಂಥಗಳಿಂದ ತಿಳಿಯ ಬಹುದು. ಇವಕ್ಕೆ 'ಪದ' ಎಂಬ ವ್ಯವಹಾರವೂ ಸಂಗೀತಶಾಸ್ತ್ರದಲ್ಲಿ ಸಾಮಾನ್ಯವಾಗಿರು ವುದೇ ಆಗಿದೆ. ಅವುಗಳಲ್ಲಿ ಏಲೆಯನ್ನು (ಏಲಾಪದ) ಸರ್ವೋತ್ತಮವಾದ ಗೇಯವಸ್ತು ಎಂದು ವರ್ಣಿಸಲಾಗಿದೆ. ಈ ಕುರಿತು ಈ ಮೊದಲಿನ ನನ್ನ ಲೇಖನಗಳಲ್ಲಿ ಸವಿಸ್ತರವಾಗಿ ನಿರೂಪಿಸಿರುತ್ತೇನೆ. (ಮಾನವಿಕ ಕರ್ಣಾಟಕ ಸಂ. ೩- ದೇಶೀಯ ಛಂದಸ್ಸುಗಳ ಮೂಲ). ಸಂಗೀತರೂಪದಲ್ಲಿ ಹಾಡತಕ್ಕ ಗೇಯ ಪ್ರಬಂಧಗಳಾದುದರಿಂದಲೇ ಈ ಕನ್ನಡ ಛಂದಸ್ಸು ಗಳು 'ಜಾತಿ' ಎಂದು ಕರೆಯಲ್ಪಟ್ಟಿದೆ. ಇವೆಲ್ಲವೂ ಸಂಗೀತಶಾಸ್ತ್ರಗ್ರಂಥಗಳಲ್ಲಿ ಗೇಯ ವಸ್ತುಗಳೆಂದು ನಿರೂಪಿಸಲ್ಪಟ್ಟಿರುತ್ತವೆ. ಗಾನಕ್ಕೆ ಪ್ರಶಸ್ತವಾದ ಛಂದೋರಚನೆಯನ್ನು ಪಾರಿಭಾಷಿಕವಾಗಿ 'ಜಾತಿ' ಎಂದೂ 'ಪದ' ಎಂದೂ, 'ಅಕ್ಷರ' ಎಂದೂ ನಾಟ್ಯಶಾಸ್ತ್ರ ದಲ್ಲಿಯೇ ಕರೆಯಲಾಗಿದೆ. ಎಂದರೆ ಇವು ಮೂರೂ ಪಾರಿಭಾಷಿಕ ಪರ್ಯಾಯ ಪದಗಳಾಗಿವೆ. ಆದುದರಿಂದಲೇ ಕನ್ನಡ ಛಂದಸ್ಸಿನ ಜಾತಿಗೆ 'ಅಕ್ಕರ' ಎಂದು ಹೆಸರು. ಅದು ಗೇಯವಸ್ತುವಾದ್ದರಿಂದ, ಸಾರ್ಥಕವಾಗಿಯೇ ಬಂದುದಿರಬೇಕೆಂದು ನ್ಯಾಯವಾಗಿ ಊಹಿಸಬಹುದು. ಈ ಜಾತಿಗಳಿಗೆ, ಛಂದಸ್ಸಿನ ಗುರು ಲಘುನಿಯಮಕ್ಕಾಗಲಿ, ತಾಳದ ಮಾತ್ರಾನಿಯಮಕ್ಕಾಗಲಿ, ಅಕ್ಷರ ನಿಯಮಕ್ಕಾಗಲಿ ಒಳಪಡದ ವಿಶಿಷ್ಟ ರೀತಿಯ ಗಣ ವಿಭಾಗವನ್ನು ಕಲ್ಪಿಸಿರುವುದಾದರೂ, ಇವುಗಳ ರಚನೆಯಲ್ಲಿ ಸ್ವಭಾವತಃ ಗೇಯಾನುಗುಣ ವಾದ ಶೈಥಿಲ್ಯವಿರುವುದರಿಂದಲೇ ಎಂಬುದನ್ನೂ ಊಹಿಸಿಕೊಳ್ಳಬಹುದು. ಆ ಗೇಯಾಂಶ ವನ್ನು ಲಕ್ಷಿಸಿಕೊಂಡಲ್ಲದೆ ಈ ತ್ರಿಮೂರ್ತಿಗಣಗಳ (ಅಂಶಗಣಗಳ) ವರ್ಗೀಕರಣದ ಔಚಿತ್ಯವನ್ನೂ, ಛಂದೋಲಯದ ಕಾಲಮರ್ಯಾದೆಯನ್ನೂ, ಬಂಧಗಳಲ್ಲಿ ಅವುಗಳ ಬಾಂಧವ್ಯವನ್ನೂ ಕಂಡುಕೊಳ್ಳುವುದು ಸಾಧ್ಯವಿಲ್ಲ. ಈ ಗಣಗಳ ಕುರಿತು ವಿಸ್ತಾರ