ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೦ / ಕುಕ್ಕಿಲ ಸಂಪುಟ

ಪಾಡುಗಬ್ಬದಲ್ಲಿ ಮೆಲ್ಪಾಡು, ಪಾಡು ಎಂಬ ಎರಡು ವಿಭಾಗವನ್ನು ಕಲ್ಪಿಸುತ್ತಾನೆ. ಮೆಲ್ವಾಡೆಂಬುದು ಆ ಹೆಸರೇ ಸೂಚಿಸುವಂತೆ ಕೆಲವೇ ಹಾಡುಗಳುಳ್ಳ ಸಣ್ಣ ರಚನೆ ಅಥವಾ ಕ್ಷುದ್ರ ಪ್ರಬಂಧವಾದರೆ 'ಪಾಡು' ಎಂಬುದು ಹೆಚ್ಚು ಹಾಡುಗಳಿರುವ ದೊಡ್ಡ ರಚನೆ. ಅವುಗಳ ಲಕ್ಷಣ ಹೀಗಿದೆ:

ಸೂ. ೨೪೧

ಸಂದಿಸಿರೆ ಕಂದಮುಂ ಪೆರ
ತೊಂದರಿಕೆಯ ವೃತ್ತಜಾತಿಯುಂ ಪದಮವು ತ
ಳ್ತೊಂದಿರೆ ಪನ್ನೆರಡುವರಂ

ಸಂದುದು ಮೆಲ್ಬಾಡೆನಿಕ್ಕುಮದು ಕನ್ನಡದೊಳ್ ॥
left ॥ ೯೫೨ ॥

ಕಂದಪದ್ಯ ಯಾವುದಾದರೊಂದು ವಿಧದ ವೃತ್ತ ಮತ್ತು ಪದಗಳು ಪದಂ ಎಂದು ಜಾತ್ಯೇಕವಚನ ಪ್ರಯೋಗ- ಈ ಪದಗಳು ಹನ್ನೆರಡಕ್ಕಿಂತ ಹೆಚ್ಚಿಲ್ಲದ ಚಿಕ್ಕ ಪ್ರಬಂಧವಾದರೆ ಕನ್ನಡದಲ್ಲಿ ಅದು ಮೆಲ್ಬಾಡು ಎಂದು ಕರೆಯಲ್ಪಡುತ್ತದೆ, ಎಂದು ಈ ಲಕ್ಷಣದಿಂದ ವ್ಯಕ್ತವಾಗುವುದು. ಇಲ್ಲಿ ಪದಗಳು ಎಂದಿರುವುದು ಹಾಡುಗಳನ್ನೇ ಎಂಬುದರಲ್ಲಿ ಸಂದೇಹವಿಲ್ಲ. 'ಮಾಡು' ಎಂಬ ಹೆಸರಿನಿಂದಲೇ ಇದು ಸ್ಪಷ್ಟವಾಗುವುದಷ್ಟೆ?

ಈ ಪದಗಳು ಅಥವಾ ಹಾಡುಗಳು ಹನ್ನೆರಡಕ್ಕಿಂತ ಹೆಚ್ಚಿದ್ದರೆ ಆ ಪ್ರಬಂಧವು, ಮೆಲ್ಬಾಡಲ್ಲ, ಅದು 'ಪಾಡು' ಎಂದು ಕರೆಯಲ್ಪಡುತ್ತದೆ ಎನ್ನುತ್ತಾನೆ. ಆ ಲಕ್ಷಣಹೀಗಿದೆ:

ಸೂ. ೨೪೨

ಪದಿನೈದುಮಿರ್ಪತೈದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯೊಳ್ ।
ಪುದಿದೊದವಿ ನೆಗಳ್ವೋಡಂತದು
ಸದಲಂಕಾರಂ ರಸಾಸ್ಪದಂ ಪಾಡಕ್ಕುಂ ॥
॥ ೯೫೩ ॥

ಹದಿನೈದೋ ಇಪ್ಪತೈದೋ ಅಥವಾ ವಿಷಯಗೌರವಕ್ಕೆ ತಕ್ಕಂತೆ ಇನ್ನೆಷ್ಟಾದರೋ ಸಂಖ್ಯೆಯ ಪದಗಳಿರಬಹುದಾದ ಪ್ರಬಂಧಕ್ಕೆ 'ಪಾಡು' ಎಂಬ ಹೆಸರೆಂದು ಈ ಪದ್ಯಕ್ಕೆ ಅರ್ಥ ಕಾಣುವುದು. ಕೆಲವರು ಇದಕ್ಕೆ ಹದಿನೈದರಿಂದ ಇಪ್ಪತ್ತೈದರವರೆಗೆ ಮಾತ್ರ ಪದಗಳಿರುವ ಪ್ರಬಂಧ ಎಂದು ಅರ್ಥಮಾಡುತ್ತಾರೆ. ಅದು ಸರಿಯಲ್ಲವೆಂದು ನನಗೆ ತೋರುವುದು. ಏಕೆಂದರೆ, ಹಾಗಿದ್ದರೆ ಇಪ್ಪತ್ತೈದಕ್ಕಿಂತ ಹೆಚ್ಚು ಪದಗಳಿರುವ ಪ್ರಬಂಧಕ್ಕೆ ಹೆಸರೇನು ಎಂಬ ಪ್ರಶ್ನೆ ಉಳಿಯುತ್ತದೆ. ಅದಕ್ಕಿಂತ ಹೆಚ್ಚು ಪದಗಳಿರಲೇಬಾರದೆಂದರೆ ಅದೂ ನ್ಯಾಯವಲ್ಲ. ಈ ಆಕ್ಷೇಪಕ್ಕೆ ಹೀಗೂ ಸಮಾಧಾನವನ್ನು ಹೇಳುತ್ತಾರೆ- ಎಂದರೆ, ಹಿಂದೆ ಹೇಳಿದ 'ಪಾಡುಗಳಿಂದಂ ತ ಱಸಲೆ ಮಾಡಿದುದಂ ಪಾಡುಗಬ್ಬಮೆಂಬರ್' ಎಂಬ ಲಕ್ಷಣವಿದೆಯಷ್ಟೆ? ಅಲ್ಲಿ ಪಾಡುಗಳಿಂದ ಎಂದರೆ ಇಪ್ಪತ್ತೈದಕ್ಕೆ ಮೀರದ ಪದಗಳಿರುವ ಈ ಪಾಡು' ಎಂಬ ಪ್ರಬಂಧಗಳೇ ಹಲವು ಒಂದಾಗಿ ಸೇರುವುದರಿಂದ ಪಾಡುಗಬ್ಬ ಎಂದಾಗುವುದು ಎಂದೆಣಿಸುತ್ತಾರೆ. ಇದೂ ಸಮಂಜಸವಾಗಿ ಕಾಣುವುದಿಲ್ಲ. ಏಕೆಂದರೆ, 'ಪಾಡು' ಎಂಬುದಕ್ಕೆ ಲಕ್ಷಣದಲ್ಲಿ 'ಸದಲಂಕಾರಂ ರಸಾಸ್ಪದಂ' ಎಂಬ ವಿಶೇಷಣಗಳನ್ನು ಕೊಟ್ಟಿರುತ್ತಾನೆ; ಮತ್ತು ಅದರಲ್ಲಿರಬಹುದಾದ ಕಂದವೃತ್ತಗಳಿಗೆ ಇಂತಿಷ್ಟೇ ಎಂಬ ಪರಿಮಿತಿಯನ್ನು ಹೇಳಿರುವುದಿಲ್ಲ, ಆದುದರಿಂದ ಇದೂ ಪಾಡುಗಬ್ಬವೇಕಲ್ಲ? ಎಂಬ ಪ್ರಶ್ನೆಗೆ ಇಲ್ಲಿ ಸಮಾಧಾನ ಕಾಣುವುದಿಲ್ಲ. ಅದೂ ಅಲ್ಲದೆ, ಕಬ್ಬ (ಕಾವ್ಯ)ವೆಂಬುದು ಕವಿತಾ ಸಾಮಾನ್ಯವಾಚಕವಾದ ಪದ ಯಾವುದೇ ಕವಿರಚನೆಗೆ ಕಾವ್ಯ ಎಂಬ ವ್ಯಪದೇಶವು