ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರ್ಣಾಟಕ ಸಂಗೀತದ ಪರಂಪರೆ / ೨೭೧

ಇಂತಹ ಮಹಾಪ್ರಬಂಧ ಯಕ್ಷಗಾನ, ಇಲ್ಲಿ ಗಾನವೆಂದರೆ ಪ್ರಬಂಧವೇ ಹೊರತು ಗಾನಶೈಲಿ ಎಂಬ ಅರ್ಥವಲ್ಲ ಎಂಬುದು ಸ್ಪಷ್ಟ. ಈ ಮೊದಲು ಲೇಖನಗಳಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದಾಗಿದೆ.

ಸಂಸ್ಕೃತದಲ್ಲಿ 'ಯಕ್ಷಂ' ಎಂದರೆ ವಿಶೇಷ ಮಹತ್ವವುಳ್ಳದ್ದು, ಬಹುಮಾನ್ಯವಾದ್ದು (Anything honoured) ಎಂದು ಅರ್ಥ. ಆದ್ದರಿಂದ ಯಕ್ಷಗಾನವೆಂಬ ಹೆಸರು ಸಾರ್ಥಕವಾಗಿಯೇ ಬಂದಿದೆ- ಯಕ್ಷಕರ್ದಮ, ಯಕ್ಷಗಂಧ, ಯಕ್ಷಧೂಪ, ಯಕ್ಷಾಂದೋಳ- ಎಂಬಂತೆ.

ಈ ಮಹಾಪ್ರಬಂಧವು ಹಿಂದಕ್ಕೆ ಕೇವಲ ಸಂಗೀತಕ್ಕೂ ಸಲ್ಲುತ್ತಿತ್ತೆಂದು ಸಂಗೀತ ಶಾಸ್ತ್ರ ಗ್ರಂಥಗಳಿಂದ ತಿಳಿಯುವುದು. ಸೂತಸ್ಥ ಪ್ರಬಂಧವೆಂದರೆ ಇದುವೇ ಸಂಗೀತ ರತ್ನಾಕರದಲ್ಲಿ ಶಾರ್ಙ್ಗದೇವನು ಹೇಳುತ್ತಾನೆ-

ಕಂದವೃತ್ತಾಧಿಕಃ ಕಶ್ಚಿತ್ ಪ್ರಬಂಧ ಗೀಯತೇ ಮಹಾನ್ |
ಅಲ್ಪ: ಪಶ್ಚಾತ್ ಪ್ರಗಾತವ್ಯಃ ಏಷ ಸೂಡಕ್ರಮೋ ಮತಃ ǁ

ಇರಲಿ. ಇದುವರೆಗೆ ಹೇಳಿದ್ದನ್ನು ಸಿಂಹಾವಲೋಕನದಿಂದ ಇನ್ನೊಮ್ಮೆ ನೋಡೋಣ. ಈಗ ಸಾರಾಂಶವೆಂದರೆ- ನಮ್ಮ ಕರ್ಣಾಟಕ ಸಂಗೀತ ಸಂಪ್ರದಾಯ ವೆಂಬುದು ನಾಟ್ಯಶಾಸ್ತ್ರ ಪರಂಪರೆಯಿಂದಲೇ ನಡೆದು ಬಂದುದು. ಮೂಲತಃ ಇದು ನಾಟ್ಯಸಂಗೀತ, ರಾಗಾಲಾಪ ಸಹಿತವಾದ ಕೇವಲ ಸಂಗೀತ ಮತ್ತೆ ಉಂಟಾಯಿತು. ನಾಟ್ಯಸಂಗೀತದ ಪ್ರಬಂಧಗಳೇ ಅದರಲ್ಲಿ ಹಾಡಲ್ಪಡುತ್ತಿದ್ದುದು. ದೇಶಭಾಷೆಯ ರಚನೆಗಳೇ ದೇಶಿ, ಅನುಬದ್ಧ ರಚನೆಯೇ ಸೂಡ, ಆಂಧ್ರದಲ್ಲಿ ಸಂಸ್ಕೃತ ನಾಟಕಗಳು ಯಕ್ಷಗಾನಕ್ಕೆ ಪರಿವರ್ತಿಸಲ್ಪಟ್ಟವು. ಜಯದೇವ ಕವಿಯ 'ಗೀತಗೋವಿಂದ'ದ ಪ್ರಭಾವವೂ ನಮ್ಮ ಸರ್ವತ್ರ ದೇಶೀ ನಾಟ್ಯ ಪದ್ಧತಿಗಳ ಮೇಲೆ ಬಿದ್ದಿದೆ. ಬಹುಮಾನ್ಯವಾದ ಮಹಾಪ್ರಬಂಧವೇ ಯಕ್ಷಗಾನ. ಪೂರ್ವದ ಸೂಡಪ್ರಬಂಧವೇ ಅದು. ಅದೇ ರಚನೆಯ ಸ್ತುತಿಪದ್ಯಗಳು ಕೇವಲ ಸಂಗೀತದ ಕೀರ್ತನೆಗಳಾಗಿ ಕಚೇರಿಗೆ ಬಂದವು. ತಿರುಪತಿ ಅಣ್ಣಮಾಚಾರ್ಯರು, ಪುರಂದರದಾಸರು, ತ್ಯಾಗರಾಜರೇ ಮೊದಲಾಗಿ ಕೀರ್ತನ ಪರಂಪರೆಗಳ ಸಾಗರವನ್ನೇ ನಿರ್ಮಿಸಿದರು.

ಪೂರ್ವದ ಗಾಂಧರ್ವ ಸ್ವರಗಳು ಕ್ರಮೇಣ ಅಸ್ತವ್ಯಸ್ತವಾಗುತ್ತ ರಾಗವ್ಯವಸ್ಥೆ ಕೆಟ್ಟು ಹೋಗಿತ್ತು. ಶಾರ್ಙ್ಗದೇವನ ಮಾರ್ಗದರ್ಶನದಂತೆ ಸ್ವರಗಳು ಸಮವಿಭಾಗದಲ್ಲಿ ನಿಂತವು. ಅದಕ್ಕನುಗುಣವಾಗಿ ಹೊಸ ಸಂವಿಧಾನ ಹಾಕಿಕೊಟ್ಟವರೇ ಕರ್ಣಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯ ಸ್ವಾಮಿಗಳು. ನಮ್ಮ ಮೇಳರಾಗಪದ್ಧತಿ ಅವರಿಂದ ಮೊದಲಾಯಿತು. ದಕ್ಷಿಣದ ಎಲ್ಲ ದೇಶಗಳೂ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟವು. ಕರ್ಣಾಟಕದ ಸಿಂಹಾಸನದ ಆಶ್ರಯದಲ್ಲಿ ವೃದ್ಧಿಗೆ ಬಂದಿದೆ ದಾಕ್ಷಿಣಾತ್ಯ ಸಂಗೀತ, ಆದ್ದರಿಂದ ಕರ್ಣಾಟಕ ಸಂಗೀತವೆಂಬ ಹೆಸರು ಸಾರ್ಥಕ. ಕೈಯ ಐದು ಬೆರಳುಗಳಂತೆ ನಮ್ಮ ಐದೂ ಭಾಷಾ ರಾಜ್ಯಗಳೂ ಒಂದೇ ಮುಷ್ಟಿಯಾಗಿ ಉಳಿಸಿ ಬೆಳೆಸಿದ ಸಂಪ್ರದಾಯವಿದು. ಹೆಚ್ಚು ಕಡಮೆ ಎಂಬ ದಾಯವಾದ ಸಲ್ಲದ ಮಾತು. ಮತ್ಸರವಿಲ್ಲದೆ ಹೇಳುವುದಾದರೆ ಹಿರಿಯ ಹೆಬ್ಬೆರಳಿನ ಸ್ಥಾನ ಆಂಧ್ರಕ್ಕೆ ಸಲ್ಲಬೇಕು.