ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಬಯಲಾಟದ ಸಭಾಲಕ್ಷಣ / ೧೩

ನಾಟ್ಯಶಾಸ್ತ್ರದಲ್ಲಿ ಕೊಟ್ಟಿರುವಂತೆ ಅದೇ ೧೬ ಮಾತ್ರೆಯ ಆವರ್ತನೆಯುಳ್ಳ ತಾಳಗತಿಯ ಪಾಠಾಕ್ಷರಗಳಿಗೆ ಉದಾಹರಣೆ ಹೀಗಿದೆ :

ಝಂಟುಂ ಜನಗತಿಯ ವಲಿತಕ ಜಂಬುಕ ರಂಟುಂ ತಿತಿಚಲ ಘಚತಿತಿಚಾ
ದಿಂಗ್ಲೀ ಗಣಪತಿ ಪಶುಪತಿ ಜಂಬುಕ ದಿಂಗ್ಲೀವೆಂಬುದ ದಿಗನಿಗಿಚಾ
ತಿತಿಚಾ ದಿಗಿನಿಗಿಚಾ ಪಶುಪತಿ ನಿತಿಚಾ ಧೀಂ ಧೀಂ ಧೀಂ

ಹೀಗೆ ಬಯಲಾಟದ ರಂಗಸ್ಥಳದಲ್ಲಿ ದೇವತಾಸ್ತುತಿಪರವಾದ ಪೂಜಾವಿಧಿ ನಡೆದ
ಮೇಲೆ ರಂಗಸ್ಥಳದಲ್ಲಿ ಮೊದಲು ಕಾಣಿಸಿಕೊಳ್ಳುವುದು, ಡವರಂಗಿ ಹಾಕಿ, ಮುಖಕ್ಕೆ ಬಿಳಿ
ಬಣ್ಣ ಬಳಿದುಕೊಂಡ ಇಬ್ಬರು ಕೋಡಂಗಿಗಳು. ನಾಟ್ಯಶಾಸ್ತ್ರಗಳಲ್ಲಿ ಇದೇ ಕ್ರಮದ ಆ
ಇಬ್ಬರಿಗೆ ಪಾರಿಪಾರ್ಶ್ವಕರೆಂದು ಹೆಸರು. ನಾಟ್ಯಶಾಸ್ತ್ರ ಲಕ್ಷಣದಂತೆ, ಸೂತ್ರಧಾರನಿಗೂ,
ಆ ಪಾರಿಪಾರ್ಶ್ವಕರಿಗೂ ಸಭಾವಂದನೆಯ ಕುರಿತು ಸಂಭಾಷಣೆ ನಡೆಯುವುದಾದರೆ,
ಬಯಲಾಟದಲ್ಲಿ ಸೂತ್ರಧಾರನ ಸ್ಥಾನದಲ್ಲಿ ಆ ಸಂಗೀತಗಾರ ಭಾಗವತನೇ ಕೋಡಂಗಿ
ಗಳೊಡನೆ ಸಂಭಾಷಣೆಯ ಮೂಲಕ ಸಭಾವಂದನೆಯನ್ನು ನಡೆಸುವುದಾಗಿದೆ.
ಪ್ರತಿಯೊಂದು ದೇವರ ಸ್ತುತಿ, ಕೀರ್ತನೆ ಹಾಡುವ ಸಂದರ್ಭದಲ್ಲೂ ಕೋಡಂಗಿ
ಗಳು ಹೂ ಹು ಎನ್ನುವುದಿದೆಯಲ್ಲ ಭಾಗವತನೂ ಗೀತಾರಂಭದಲ್ಲಿ ಆ ಹೂ ಹು ಎನ್ನುತ್ತಿರುತ್ತಾನೆ.
ಈ 'ಆ ಹೂ ಹೂ' ಎಂಬ ಉದ್ಘಾರವೂ ತಮಾಷೆಯ ಕೂಗಾಟವಲ್ಲ, ಅದು ದೇವರನ್ನು
ಆಮಂತ್ರಿಸುವ ವೈದಿಕ ಶಬ್ದವಾಗಿದೆ. ಆಪಟೆಯವರ ಸಂಸ್ಕೃತದ ನಿಘಂಟುವಿನಲ್ಲಿ
ನೋಡಿ, ಇದೇ ಅರ್ಥ ಕೊಡಲಾಗಿದೆ. (ಆ ಹೂ : Vedic word, calling,
invoking Gods dieties etc.)

ಪಾರಿಪಾರ್ಶ್ವಕರು ದೇವರನಾಮಗಳನ್ನು ಉಚ್ಚರಿಸುತ್ತಾ ಭಾಗವತರ ಎರಡು
ಬದಿಗಳಲ್ಲಿ ಇದ್ದುಕೊಂಡು, ಆತನು ಹಾಡುತ್ತಾ ಇರುವಾಗ ಮಧ್ಯಮಧ್ಯದಲ್ಲಿ, ಅವರು
ಕುಣಿಯದ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡಿಕೊಂಡು, "ರಾಜನಿಗೆ ಜಯವಾಗಲಿ, ಶತ್ರು
ಗಳು ನಾಶವಾಗಲಿ, ಆಟ ಆಡುವ ಮೇಳದವರಿಗೂ, ಆಡಿಸುವಂಥ ಧರ್ಮಾತ್ಮರಿಗೂ
ಶುಭವಾಗಲಿ' ಎಂದು ಜಯಕಾರ ಹಾಕುತ್ತಾ 'ವಿಜಯೀಭವ! ದಿಗ್ವಿಜಯೀಭವ! ಆ ಹೂ
ಹೂ ಬರಾಬರಿ, ಸರಾಸರಿ, ಆಟ ಆಡಿಸುವಂತಹ ಮಹಾನುಭಾವರಿಗೂ, ನೋಡುವಂಥ
ಮಹಾಜನರಿಗೂ, ಕೇಳುವಂಥ ಪುಣ್ಯವಂತರಿಗೂ, ಕೇಳುವಂಥ ಪುಣ್ಯವಂತರಿಗೂ, ಕೇಳಿಸುವಂಥ ಭಾಗವತರಿಗೂ
ಇಷ್ಟಾರ್ಥ ವರಂಗಳಂ ಕೊಡುವಂಥವರಾದ, ಸಿದ್ದಿವಿನಾಯಕ ದೇವರುಗಳನ್ನೇ
ಕೊಂಡಾಡಿ, ನಮ್ಮ ಆಟ ಚಂದಾಗಿ ನಡೆಸಿ ಕೊಡಪ್ಪಾ ಇಗ್ರೇಸರಾ ಅಂತ ಹೇಳಿ ಇಚ್ಚಾ
ವರಗಳಂ ಬೇಡಿಕೊಳ್ಳುವಂಥವರಾಗಿ, ಸಭಾಸಪ್ತಾಂಗವಂದನೆ ಮಾಡಬೇಕಲ್ಲಯ್ಯ
ಭಾಗೋತ್ರೆ, ಆ ಹೂ ಹೂ ಹರೇ ರಮಣಾ ಗೋವಿಂದ,
ಕೇಶವ ಮಾಧವ ಗೋವಿಂದ, ಮುಕುಂದ ಮಾಧವ ಅಚ್ಯುತ ಕೃಷ್ಣಾ ಹರಿನಾರಾಯಣ ಗೋವಿಂದ' ಎನ್ನುವ ವಾಕ್ಯ
ವಿಲಾಸಗಳನ್ನೆಲ್ಲ ಸಭಾಲಕ್ಷಣಗ್ರಂಥದಲ್ಲಿ ನೋಡಿಕೊಳ್ಳಬಹುದು. ನಾಟ್ಯಶಾಸ್ತ್ರದಲ್ಲಿಯೂ
ಇದೇ ಪ್ರಕಾರ ಪಾರಿಪಾರ್ಶ್ವಕರು ಹೇಳಬೇಕೆಂಬ ಲಕ್ಷಣವಿರುತ್ತದೆ.
ಉದಾ:
ಜಿತಂ ಸೋಮೇನ ವೈ ರಾಜ್ ಶಿವಂ ಗೋಬ್ರಾಹ್ಮಣಾಯಚ ।
ಬ್ರಹ್ಮಕ್ಕಂ ಚ ಥೈವಾಸ್ತು ಪತಾ: ಬ್ರಹ್ಮದ್ವಿಷತಃ ।
ಪ್ರಶಾಸ್ಮಿಮಾಂ ಮಹಾರಾಜೋ ಪೃಥಿವೀಂಚ ಸಸಾಗರಾಂ ।
ರಾಜ್ಯಂ ಪ್ರವರ್ಧತಾಂ ಚೈವ ರಂಗಶ್ಚಾಯಂ ಸಮೃಧ್ಯತಾಂ ।