ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ / ೨೭೫

ಕಂಪನಸಂಖ್ಯೆಯಲ್ಲಿ ಹೇಳಿದರೆ ಇದು ಇನ್ನಷ್ಟು ಸ್ಪಷ್ಟವಾಗುವುದು: ಧ್ವನಿ ವೈಲಕ್ಷಣ್ಯವು ಗ್ರಹಣೆಯಾಗದಿರುವ ಗರಿಷ್ಠ ಮಿತಿ ಎಂದರೆ ಒಂದು ಕಂಪನದ ವ್ಯತ್ಯಾಸ ಎಂದಿರಲಿ, ಅಷ್ಟೊಂದು ಕೆಳಮಟ್ಟದಲ್ಲಿ ಆತನ ಮಂದ್ರತಮಧ್ವಾನ ನಾದ ಪ್ರಥಮಶ್ರುತಿ ಇದೆ ಎಂದೂ ಅದು ೪೪ ಕಂಪನಗಳ ನಾದವೆಂದೂ ಇಟ್ಟುಕೊಳ್ಳೋಣ. ಆಗ ಎರಡನೇ ಶ್ರುತಿಯು ೪೬ ಕಂಪನಗಳ ನಾದವೆಂದಾಗುವುದು. ಈಗ ಇವೆರಡರ ಮಧ್ಯದಲ್ಲಿ ೨ ಕಂಪನಗಳ ವ್ಯತ್ಯಾಸವಿರುವುದಾದರೂ ಒಂದು ಕಂಪನಕ್ಕಿಂತ ಅತ್ಯಲ್ಪಾಂಶ ಹೆಚ್ಚಿದ ಮಾತ್ರಕ್ಕೆ ಧ್ವನಿವೈಲಕ್ಷಣ್ಯವು ಗೋಚರವಾಗುವುದಾದರೂ ಇವೆರಡಕ್ಕೂ ಭಿನ್ನವಾದ ಧ್ವನ್ಯಂತರವು ಕೇಳುವುದಕ್ಕೆ ಸಂಭವವಿರುವುದಿಲ್ಲ. ಧ್ವನ್ಯಂತರವೆಂಬುದು ೪೫.೧ರಿಂದ ೪೫.೯ರ ವರೆಗಿನ ಯಾವ ಕಂಪನಾಂಶದಲ್ಲಿರುವ ಧ್ವನಿಯಾದರೂ ಅದು ಎರಡನೇ ಶ್ರುತಿಯಿಂದ ಭಿನ್ನವಾಗಿ ಕೇಳಿಸಲಾರದು. ಶ್ರೀ ಸತ್ಯನಾರಾಯಣನವರು ಹೇಳುವಂತಾದರೆ ಎರಡನೆ ಶ್ರುತಿಯು ೪೫.೧ ಕಂಪನದ್ದೆಂದೆಣಿಸಬೇಕು. ಹಾಗೆ ಎಣಿಸಿದರೆ ೨೨ ಶ್ರುತಿಗಳಿಗೆ ಸ್ಥಾಯಿಯು ಪೂರ್ತಿಯಾಗುವುದಿಲ್ಲ. ಅರ್ಧಕ್ಕೆ ಮೊದಲೇ ೨೨ ಶ್ರುತಿಗಳು ಮುಗಿದು ಹೋಗುವವು.

ಕನಿಷ್ಠತಮ ಧ್ವನಿವೈಲಕ್ಷಣ್ಯವು ಶಾರ್ಙ್ಗದೇವನ ಶ್ರುತಿಲಕ್ಷಣವಾಗಿಲ್ಲ ಎಂಬುದಷ್ಟು ಈ ಉದಾಹರಣದಿಂದ ಸ್ಪಷ್ಟವಾಗುವುದು. ಆದರೆ ಶಾರ್ಙ್ಗದೇವನ ಮಂದ್ರತಮ ಧ್ವಾನವೆಂಬುದು ಇದೇ ೪೪ ಕಂಪನಗಳಲ್ಲಿರುವುದೆಂದು ನಾನು ಹೇಳುತ್ತಿಲ್ಲ. ಅದು ಯಾವ ಮಟ್ಟದ್ದೆಂದು ಅವನಿಗೇ ಗೊತ್ತು ಹೊರತು ಇನ್ನಾರಿಗೂ ತಿಳಿಯುವಂತಿಲ್ಲ ವೆಂಬುದು ನಿಜ. ಏನಿದ್ದರೂ ಅವನ ಶ್ರುತಿನಿದರ್ಶನ ಕ್ರಮವೆಂಬುದು ಅತ್ಯಂತ ಸಂದಿಗ್ಧ ಹಾಗೂ ಭ್ರಾಮಕವಾದುದೇ ಸರಿ.

ಶ್ರೀ ಸತ್ಯನಾರಾಯಣನವರು, ಶಾರ್ಙ್ಗದೇವನ ಮಂದ್ರತಮಧ್ವಾನವನ್ನು ೬೬ ಕಂಪನಗಳಲ್ಲಿರುವುದೆಂದು ತಿಳಿಯಬೇಕಾಗುತ್ತದೆ ಎಂದೂ ಹೇಳುತ್ತಾರೆ (ಸಂ. ರಾ. ವ್ಯಾ. ೪೭೭) ಹಾಗೂ ಅವನು ವಿಧಿಸುವ ಮಂದ್ರತಮಧ್ವಾನಕ್ಕೂ ವೀಣಾತಂತಿಯು ಧ್ವನಿ ವರ್ಧನವಿಲ್ಲದೆ ಉತ್ಪಾದಿಸಬಲ್ಲ ಆವೇಗಕ್ಕೂ ಪರಸ್ಪರವಾಗಿ ಸುಮಾರು ಇಪ್ಪತ್ತೆರಡು ಧ್ವನಿವೈಲಕ್ಷಣ್ಯಗಳೇ ಈ ಪ್ರಯೋಗಗಳಿಂದಲೂ ಸಿದ್ಧಿಸುತ್ತವೆಂಬುದು ಆಶ್ಚರ್ಯಕರವೂ, ಅಭಿಮಾನಾಸ್ಪದವೂ ಆಗಿದೆ. ಈ ಪ್ರದೇಶದಲ್ಲಿ ಧ್ವನಿವೈಲಕ್ಷಣ್ಯವಿವೇಚನಾ ಶಕ್ತಿಯು ಕಡಿಮೆಯಾಗಿದ್ದರೂ ಸುಮಾರು ೦.೫ ಕಂಪನಸಂಖ್ಯೆಯ ಅಂತರವನ್ನು ಗುರುತಿಸ ಬಹುದು.' ಎಂದು ಸಹ ಇವರೇ ಹೇಳುವುದು ಅಭಿಮಾನಾಸ್ಪದವಲ್ಲದಿದ್ದರೂ ಬಹಳ ಆಶ್ಚರ್ಯಕರವಾಗಿದೆ. ಇದೆಷ್ಟು ಸಂಬದ್ಧ ಎಂಬುದನ್ನು ವಾಚಕರೇ ಊಹಿಸಿಕೊಳ್ಳ ಬಹುದು.

'ಅಧರಾಧರತೀವ್ರಾಸ್ತಾಃ' ಎಂಬುದಕ್ಕೆ ಶ್ರೀ ರಾ. ಸತ್ಯನಾರಾಯಣನವರು “(ಹೀಗೆಯೇ) ಅವುಗಳು ಪ್ರತಿಯೊಂದೂ ತನ್ನ ಕೆಳಗಿನದಕ್ಕಿಂತ ತೀವ್ರವಾಗಿರುತ್ತವೆ” ಎಂದು ವ್ಯಾಖ್ಯಾನಿಸಿದ್ದಾರೆ; ಇದೂ ಶಾರ್ಙ್ಗದೇವನು ಹೇಳುವುದಕ್ಕೆ ತೀರ ವಿರುದ್ಧವಾಗಿದೆ.

'ಅಧರಾಧರ' ಎಂದರೆ ಕೆಳಗಿಂದ ಕೆಳಗೆ ಎಂದೇ ಅರ್ಥವಿರುವುದು ಹೊರತು ಅನ್ಯಥಾ ಅರ್ಥವಾಗಲಾರದೆಂಬುದು ಸಂಸ್ಕೃತದ ಸಾಮಾನ್ಯ ಪರಿಚಯವಷ್ಟೆ ಇರುವವರಿ ಗಾದರೂ ತಿಳಿಯದಿರುವ ವಿಚಾರವಲ್ಲವಷ್ಟೆ? ಶಾರ್ಙ್ಗದೇವನ ಶ್ರುತಿನಿದರ್ಶನದ ವೀಣೆಯು ಒಂದರ ಕೆಳಗೆ ಇನ್ನೊಂದರಂತೆ ತಂತಿಗಳಿರುವ 'ಹಾರ್ಪ್'ನಂತಹ ವಾದ್ಯ ವೆಂದು (Harp) ಶ್ರೀಯುತರು ತಮ್ಮ ಅದೇ ಗ್ರಂಥ ಪುಟ ೨೧೩ರಲ್ಲಿ ಹೇಳುತ್ತಾರೆ.