ದೇಶೀಯ ಛಂದಸ್ಸುಗಳ ಮೂಲ - 'ಏಲೆ'
ಸಂಸ್ಕೃತದ ಮತ್ತು ದೇಶಭಾಷೆಯ ಕಾವ್ಯನಾಟಕಾದಿ ಪ್ರಾಚೀನ ಸಾಹಿತ್ಯ ಗ್ರಂಥ
ಗಳಲ್ಲಿ ಪ್ರಯುಕ್ತವಾದ ಛಂದೋಬಂಧಗಳಲ್ಲಿ ಹೆಚ್ಚಿನವು ಪ್ರಾಚೀನ ಕಾಲದ ಮಾರ್ಗ
ಮತ್ತು ದೇಶೀ ಸಂಗೀತ ಪದ್ಧತಿಗಳಲ್ಲಿ ಗೇಯವಸ್ತುಗಳಾಗಿದ್ದುವೆಂದು ಭರತನ
ನಾಟ್ಯಶಾಸ್ತ್ರ, ಮತಂಗನ ಬೃಹದ್ದೇಶಿ ಮೊದಲಾದ ಸಂಗೀತಶಾಸ್ತ್ರ ಗ್ರಂಥಗಳಿಂದ ತಿಳಿಯ
ಬಹುದಾಗಿದೆ. ನಾಟ್ಯಪ್ರಯೋಗಕ್ಕೆ ಸಂಬಂಧಿಸಿದಂತೆ, ಗಾಂಧರ್ವವೆಂದು ಭರತನಿಂದ
ಪ್ರಸಿದ್ಧವಾದ ಧ್ರವಾದಿ ಪ್ರಬಂಧಗಳ ಜಾತಿಗಾನ ಪದ್ಧತಿಯನ್ನು ಮಾರ್ಗವೆಂದೂ,
ಗಾನೈಕದೃಷ್ಟಿಯಿಂದ ಮತಂಗನು ನಿರೂಪಿಸಿರುವಂತೆ ಪ್ರಸಿದ್ಧಿಗೆ ಬಂದ ದೇಶೀಯ
ಭಾಷಾಪ್ರಬಂಧಗಳ ಲೋಕರೂಢಿಯ ಗಾನಪದ್ಧತಿಯನ್ನು ದೇಶೀ ಎಂದೂ ಸಂಗೀತ
ಶಾಸ್ತ್ರದಲ್ಲಿ ವರ್ಗೀಕರಿಸಿ ವ್ಯವಹರಿಸಲಾಗಿದೆ. ಮತಂಗನು ಗೇಯವಸ್ತುಗಳನ್ನು
'ದೇಶಿಕಾರ' ಪ್ರಬಂಧಗಳೆಂದೇ ಕರೆದಿರುತ್ತಾನೆ. 'ಮಾರ್ಗ-ದೇಶೀ' ಎಂಬ ಭೇದವು
ಮೊದಲಾಗಿ ಹುಟ್ಟಿರುವುದು ಪ್ರಾಯಶಃ ಸಂಗೀತ ಪದ್ಧತಿಯಲ್ಲಿ, ಅದೂ ಮತಂಗನ
ಬೃಹದ್ದೇಶಿಯ ಅನಂತರ, ಸಾಹಿತ್ಯಕ್ಕೆ ಇದು ಆಮೇಲೆ ಅನ್ವಯಿಸಲ್ಪಟ್ಟುದಿರಬೇಕೆಂದು
ಊಹಿಸಲು ನ್ಯಾಯವಿದೆ. ಮೂಲತಃ ವೈದಿಕ ಛಂದಸ್ಸುಗಳಿಂದ ವಿಕಾಸಗೊಂಡ ನಾನಾವಿಧ
ವೃತ್ತಜಾತಿಗಳಲ್ಲಿ ಅರ್ಥಕ್ಕೆ ಭಂಗವಾಗುವಷ್ಟು ವಿಕಾರಗೊಳಿಸದ ತಾಳಕ್ಕೆ ಹೊಂದಿಸಿ
ಹಾಡಲು ಯೋಗ್ಯವಾದವುಗಳೆಂದು ಭರತನು ಆಯ್ದುಕೊಂಡಿರುವ ಸಂಸ್ಕೃತ ಹಾಗೂ
ಪ್ರಾಕೃತ ಛಂದಸ್ಸುಗಳೇ ಮಾರ್ಗಸಂಗೀತದ ಗೇಯವಸ್ತುಗಳೆಂದು ಪ್ರಸಿದ್ಧವಾದ ಸಪ್ತ
ರೂಪಾಂಗದ ಧ್ರುವಾಗೀತೆಗಳಾಗಿವೆ. ದೇಶಭಾಷೆಯ ಕಾವ್ಯಾದಿಗಳಲ್ಲಿ ಪ್ರರೂಢವಾಗಿದ್ದ
ದೇಶೀಯ ಛಂದೋಬಂಧಗಳು ಮತಂಗಾದಿಗಳ ದೇಶೀ ಸಂಗೀತ ಪದ್ಧತಿಯಲ್ಲಿ ಗೇಯ
ಪ್ರಬಂಧಗಳಾಗಿದ್ದುವು. ನಾಗವರ್ಮ, ಜಯಕೀರ್ತಿಗಳ ಛಂದೋಗ್ರಂಥಗಳ ಕರ್ಣಾಟಕ
ವಿಷಯ ಜಾತಿ ವಿಭಾಗದಲ್ಲಿ ಕಾಣದಿರುವ ಕೆಲವು ಛಂದಸ್ಸುಗಳು (ವರ್ಣ, ವರ್ಣಸರ,
ಶುಕಸಾರಿಕೆ, ಶುಕಚಂಚು ಇತ್ಯಾದಿ) ಮತಂಗ ಶಾರ್ಙ್ಗದೇವಾದಿಗಳ ಸಂಗೀತಶಾಸ್ತ್ರಗ್ರಂಥ
ಗಳಲ್ಲಿ ಲಕ್ಷಣೋಕ್ತವಾಗಿವೆ. ನಾಗವರ್ಮ ಜಯಕೀರ್ತಿಗಳ ಕಾಲಕ್ಕೆ ಸಾಹಿತ್ಯದ ಲಕ್ಷ್ಯ
ಮಾರ್ಗದಲ್ಲಿ ಅವು ಪ್ರಾಕ್ಪ್ರಸಿದ್ಧವೋ ನಾಮಾವಶಿಷ್ಟವೋ ಆಗಿರಬೇಕು. ಕರ್ಣಾಟಕ
ವಿಷಯ ಜಾತ್ಯಾಧಿಕಾರದ ಕೊನೆಯಲ್ಲಿ
ಕಿಮೇತಾವಂತಿ ಪದ್ಯಾನಿ ಚೇಹಾನುಕಾನ್ಯನೇಕದಾ |
ಸಂತಿ ಷಟ್ನತ್ಯಯೇ ತಾನಿ ದೃಶ್ಯಂತೇ ಸೂಚಿತಾನಿ ಚ ||
ಎಂದಿರುವ ಜಯಕೀರ್ತಿಯ ಮಾತಿನಿಂದ ಪ್ರಾಕ್ಪ್ರಸಿದ್ಧವಾದ ಛಂದೋಬಂಧಗಳು ಕೆಲವಿದ್ದು
ವೆಂದು ವ್ಯಕ್ತವಾಗುವುದಷ್ಟೆ ? ನಾಗವರ್ಮ, ಜಯಕೀರ್ತಿಗಳು ಕೊಟ್ಟಿರುವ ಕೆಲವೇ ಕನ್ನಡ
ಛಂದಸ್ಸುಗಳಲ್ಲಿಯಾದರೂ ಎಲ್ಲವೂ ನಮ್ಮ ಪಂಪಾದಿಗಳ ಕಾವ್ಯಗಳಲ್ಲಿ ಕಾಣುವುದಿಲ್ಲ.
ಹೀಗೆ ಹೆಸರು ಮಾಸಿದ ಛಂದಸ್ಸುಗಳಲ್ಲಿ ಏಲೆಯೂ ಒಂದು. ನಾಗವರ್ಮ ಜಯ
ಕೀರ್ತಿಗಳಿಬ್ಬರೂ ಇದರ ಲಕ್ಷಣವನ್ನು ಹೇಳಿರುತ್ತಾರೆ. ಈ ಲಕ್ಷಣಗಳು ಒಂದರಿಂದೊಂದು
ಭಿನ್ನವಾಗಿವೆ, ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಜಯಕೀರ್ತಿಯು ತ್ರಿಪದಿಯ