ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಂದು ಮಹಾಭಾರತೀಯ ವ್ಯಕ್ತಿತ್ವ / ೩೮೩

ವುದರ ಮೂಲಕ ತಮ್ಮ ಚಿಂತನೆಗೆ ವಿಶೇಷವಾದ ತೂಕವನ್ನೂ, ಮೆರುಗನ್ನೂ ಪಡೆದು ಕೊಂಡಿದ್ದಾರೆ.
ಸಂಗೀತ ಶಾಸ್ತ್ರ ಮತ್ತು ಛಂದಸ್ಸು ಕುಕ್ಕಿಲದವರ ಅಧ್ಯಯನ-ಸಂಶೋಧನೆ- ಚಿಂತನಗಳ ಪ್ರಮುಖ ಕ್ಷೇತ್ರಗಳು. ಮೇಲಿಂದ ಮೇಲೆ ನೋಡುವವರಿಗೆ ಇವು ವಿಭಿನ್ನ ವಿಷಯಗಳು, ಒಬ್ಬನೇ ವ್ಯಕ್ತಿ ಸಂಗೀತ ಮತ್ತು ಛಂದಸ್ಸು ಎರಡರಲ್ಲೂ ಸಮಾನವಾದ ಆಸಕ್ತಿ ವಹಿಸುವುದು ವಿಚಿತ್ರ ಎನಿಸಬಹುದು. ಆದರೆ ಬಹು ಸೂಕ್ಷ್ಮವಾಗಿ ನೋಡಿದರೆ ಅವೆರಡೂ ಸಂಗೀತ ಮತ್ತು ಛಂದಸ್ಸು ಮೂಲತಃ ಅಭಿನ್ನಗಳು ಎಂಬುದು ಸ್ಪಷ್ಟವಾಗು ಇದೆ. ಇದನ್ನು ಸೇಡಿಯಾಪು ಕೃಷ್ಣಭಟ್ಟರು ಹೀಗೆ ವಿವರಿಸಿದ್ದಾರೆ, ತಾತ್ವಿಕವಾಗಿ ನೋಡಿದಾಗ, ಛಂದಸ್ಸೆಂಬುದು ಗುರುಲಘುರೂಪವಾದ ಕಾಲದ ಗತಿಯೆಂಬುದು ಗೊತ್ತಾಗುತ್ತದೆ. ಈ ಗತಿಯಲ್ಲಿ ಎರಡು ವಿಧಗಳಿವೆ. ಒಂದು ನಿಯತವಾದ ಗತಿ ಇನ್ನೊಂದು ಅನಿಯತವಾಗಿ ಬೇಕಾದಂತೆ ಹರಿಯುವ ಗತಿ, ನಿಯತ ಗತಿಯೂ ಎರಡು ವಿಧವಾಗಿರುತ್ತದೆ; ಅವುಗಳಲ್ಲೊಂದು, 'ಸಮಗತಿ' ಎಂದರೆ ಸಮಾಂತರಗಳಲ್ಲಿ ನಿಲ್ಲುತ್ತಾ ನಡೆಯುವ ಲಯಬದ್ದ ಗತಿ, ಇನ್ನೊಂದು- 'ವಿಷಮಗತಿ' ಎಂದರೆ ವಿಷಮಾಂತರಗಳಲ್ಲಿ ನಿಂತು ನಡೆಯುವ ಲಯಬದ್ಧವಲ್ಲದ ಗತಿ, ಇವಿಷ್ಟೇ ಗತಿಗಳಿಂದ ಸಮಸ್ತ ವಾಙ್ಮ ಯವು ರೂಪಿತವಾಗುತ್ತದೆ. ಅನಿಯತ ಗುರುಲಘುಗತಿಯಿಂದ ಗದ್ಯ ಉಂಟಾಗುತ್ತದೆ. ನಿಯತ ಗತಿಯಿಂದ ಪದ್ಯವುಂಟಾಗುತ್ತದೆ. ನಿಯತಗತಿಯಲ್ಲಿ ಅಂತರ್ಭೂತವಾದ ಸಮಗತಿಯಿಂದ ತಾಳಕ್ಕೆ ಅಳವಡುವ ಛಂದೋಬಂಧಗಳೂ, ಉದ್ದವನ್ನು ಮಾತ್ರ ನಿರ್ಬಂಧಿಸಿದ ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಮೊದಲಾದ ತಾಳಕ್ಕೆ ಸೇರದ ಅಕ್ಷರವೃತ್ತಗಳೂ ನಿರ್ಮಿತ ವಾಗುತ್ತವೆ. ಹೀಗೆ ಪದ್ಯ ವಿಧಾನಕ್ಕೆ ಕಾಲದ ನಿಯತಗತಿಯೇ ಆಧಾರವಾಗಿರುವುದರಿಂದ, ಅದೇ ಆಧಾರದ ಮೇಲೆ ನಡೆಯುವ ಸಂಗೀತಕ್ಕೆ ಮುಖ್ಯವಾಗಿ ತಾಲಬದ್ಧವಾದ ಗಾಯನಕ್ಕೆ ಮತ್ತು ಛಂದಸ್ಸಿಗೆ ಸಂಬಂಧವಿರಲೇಬೇಕಲ್ಲವೆ?.... ನಮ್ಮ ಸಂಗೀತಗಾರರು ನಮ್ಮ ಕಾವ್ಯಗಳಲ್ಲಿರುವ ಛಂದೋಬಂಧಗಳನ್ನು ಹಾಡದೆ, ಬೇಕಾದಲ್ಲಿ ಬೇಕಾದಷ್ಟು ಎಳೆದು ಹಾಡಬೇಕಾಗುವ - ಸಂಗೀತಜ್ಞರಲ್ಲದ ಇತರರು ಓದಿದರೆ ಕೇವಲ ಗದ್ಯವಾಗುವ, ಅರ್ಥಕ್ಕೆ ಮಹತ್ವವಿಲ್ಲದ, ಹಾಡುಗಳನ್ನು ಹಾಡುತ್ತಾರೆ. ಆದಕಾರಣ ಇಂದು ಛಂದಸ್ಸಿಗೂ ಸಂಗೀತಕ್ಕೂ ಸಂಬಂಧವು ಕಡಿದುಹೋಗಿದೆಯೆಂದರೆ ಅಲ್ಲವೆನ್ನಲು ಬಹಳ ಧೈರ್ಯ ಬೇಕು.” (ಕನ್ನಡ ಛಂದಸ್ಸು, ಪುಟ ೨-೪) ಛಂದಸ್ಸು ಮತ್ತು ಸಂಗೀತಗಳ ಸಂಬಂಧವನ್ನು ಸ್ಪುಟಗೊಳಿಸಲು ಇದಕ್ಕಿಂತ ಸೊಗಸಾದ ವಿವರಣೆ ಸಿಗಲಾರದು.
ಛಂದಸ್ಸು-ಸಂಗೀತಗಳ ಸಂಬಂಧವನ್ನು ಕುಕ್ಕಿಲ ಕೃಷ್ಣಭಟ್ಟರು ಅತಿ ಸೂಕ್ಷ್ಮವಾಗಿ ಹೀಗೆ ನಿರೂಪಿಸುತ್ತಾರೆ, ಭಾಷೆಗೆ ವರ್ಣಮಾಲೆ ಇರುವಂತೆ ಸಂಗೀತಕ್ಕೆ ಸ್ವರಗ್ರಾಮ ವಿರುವುದು. ವರ್ಣಗಳ ಸಂಖ್ಯೆಯಿಂದ ಹಾಗೂ ಅವುಗಳ ಉಚ್ಚಾರ ವಿಶೇಷಗಳಿಂದ ಒಂದು ಭಾಷೆಗೆ ತನ್ನದೇ ಆದ ಸ್ವರೂಪವು ಸಿದ್ಧಿಸುವಂತೆ, ಗ್ರಾಮದಲ್ಲಿರುವ ಸ್ವರಗಳ ಸಂಖ್ಯೆ ಹಾಗೂ ಅವುಗಳ ಉಚ್ಚ ನೀಚ ವಿಶೇಷಗಳು ಒಂದು ಸಂಗೀತಪದ್ಧತಿಯ ವಿಶಿಷ್ಟ ವ್ಯಕ್ತಿತ್ವಕ್ಕೆ ಕಾರಣವಾಗಿರುತ್ತವೆ."
ನಾಗವರ್ಮನ ಛಂದೋಂಬುಧಿಯನ್ನು ಸಂಪಾದಿಸಿದ ಕೃಷ್ಣ ಭಟ್ಟರು ಅದರ ಪೀಠಿಕೆ ಯಲ್ಲಿ ಛಂದಃಶಾಸ್ತ್ರದ ಬಗ್ಗೆ ಉದ್ಬೋಧಕವಾದ ನಿರೂಪಣೆಯನ್ನು ಕೊಟ್ಟಿದ್ದಾರೆ. ಇಲ್ಲಿಯೂ ತಮ್ಮ ಗಮನವನ್ನು ಕನ್ನಡಕ್ಕೆ ಮಾತ್ರ ಕೇಂದ್ರೀಕರಿಸದೆ ಸಂಸ್ಕೃತ, ಪ್ರಾಕೃತ,