ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮೪ / ಕುಕ್ಕಿಲ ಸಂಪುಟ

ತಮಿಳು ಭಾಷೆಗಳ ಛಂದಸ್ಸುಗಳನ್ನೂ ತೌಲನಿಕವಾಗಿ ವಿಮರ್ಶಿಸಿದ್ದಾರೆ. ಅದಲ್ಲದೆ ಜೊತೆಜೊತೆಗೇ ಸಂಗೀತಶಾಸ್ತ್ರದ ತತ್ವಗಳನ್ನೂ ವಿವೇಚಿಸಿದ್ದಾರೆ.
ಛಂದಸ್ತತ್ವವನ್ನು ಅತ್ಯಂತ ವಿಶಾಲವಾದ ದೃಷ್ಟಿಕೋನದಿಂದ ಪರಿಗ್ರಹಿಸುವ ಕುಕ್ಕಿಲ ದವರು ಪದ್ಯ-ಪದ ಎಂಬವುಗಳು ಪಾಠ್ಯವಸ್ತು-ಗೇಯವಸ್ತುಗಳೆಂದೂ, ಓದುವ ಪದ್ಯ, ಹಾಡುವ ಹಾಡು ಎಂದೂ ವಿವರಿಸುತ್ತಾರೆ. ಲಯ, ಗತಿ, ಗಣ ಎಂಬ ಪಾರಿಭಾಷಿಕ ಪದಗಳನ್ನು ವಿವೇಚಿಸುತ್ತ ಇವುಗಳನ್ನು ಛಂದಸ್ಸಿನ ಮತ್ತು ಸಂಗೀತದ ದೃಷ್ಟಿಗಳಿಂದ ಅರ್ಥವಿಸುವುದಲ್ಲದೆ, ಲಯ ಎಂಬ ಪದಕ್ಕೆ ನಮ್ಮ ಅನೇಕ ವಿದ್ವಾಂಸರು ಅದು ಇಂಗ್ಲಿಷಿನ 'ರಿದಮ್' (Rythem) ಎಂಬ ಪದಕ್ಕೆ ಸಮಾನವೆಂದು ತಪ್ಪಾಗಿ ಭಾವಿಸಿ ಹಲವು ಗೊಂದಲಗಳನ್ನು ಸೃಷ್ಟಿಸಿರುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. (ಇದೇ ವಿಷಯವನ್ನು ಸೇಡಿಯಾಪು ಕೃಷ್ಣಭಟ್ಟರು ತಮ್ಮ ಛಂದೋಗತಿ ಎಂಬ ಮಹತ್ವಪೂರ್ಣವಾದ ಗ್ರಂಥದಲ್ಲಿ ಅತ್ಯಂತ ಕರಾರುವಾಕ್ಕಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ). ವಾಲ್ಮೀಕಿ ರಾಮಾಯಣದ ಆದಿಯ ಒಂದು ಶ್ಲೋಕದಲ್ಲಿ ಬರುವ 'ತಂತ್ರ್ಯಲಯ' ಎಂಬ ಪದಕ್ಕೆ ಕುಕ್ಕಿಲರು ವಿಶಿಷ್ಟವಾದೊಂದು ವ್ಯಾಖ್ಯೆಯನ್ನು ಕೊಟ್ಟಿದ್ದಾರೆ. ವೀಣೆಯಲ್ಲಿ ತಂತಿಯನ್ನು ಮಿಡಿಯುವ ಕ್ರಿಯೆಗಳಿಗೆ 'ಊರ್ಧ್ವಾಧರ ಪ್ರಹಾರ' ಮತ್ತು 'ಅಧರೋತ್ತರಘಾತ'ವೆಂದು ಹೆಸರು. ಈ ಕ್ರಿಯೆಗಳಿಂದ ಕ್ರಮವಾಗಿ ತನಾತನಾ ಮತ್ತು ತಾನ ತಾನ ಎಂಬ ಲಘುಗುರು ಮತ್ತು ಗುರುಲಘ್ನಾತ್ಮಕವಾದ ಲಯಗಳು ಹೊರಹೊಮ್ಮುತ್ತವೆ. ಇವು ಪ್ರಮಾಣ ಮತ್ತು ಸಮಾನ ಎಂಬ ಸಂಜ್ಞೆಗಳಿಂದ ಸೂಚಿಸಲ್ಪಡುತ್ತವೆ. ವೀಣಾವಾದನದಲ್ಲಿ ತಾಳನಿರೂಪಣೆಗೆ ಈ ಕಾಲಮಾನಗಳನ್ನೇ ಪ್ರಮಾಣವಾಗಿಟ್ಟುಕೊಳ್ಳುವುದಾದ್ದರಿಂದ ಈ ಲಯಗಳಿಗೆ ಅನ್ವರ್ಥ ವಾಗಿ ಆ ಹೆಸರುಗಳು ಬಂದಿವೆ ಎಂದು ಅವರ ಪ್ರತಿಪಾದನೆಯ ಸಾರಾಂಶ. ಆದರೆ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಛಂದೋಂಬುಧಿಯಲ್ಲಿ ಈ ವಾದವನ್ನು ನಿರಾಕರಿ ಸಿದ್ದಾರೆ. ಅವರನ್ನುವಂತೆ ತಂತ್ರೀಲಯ' ಎಂಬ ಸಮಾಸಪದವನ್ನು ದ್ವಂದ್ವ ಸಮಾಸವಾಗಿ ಗ್ರಹಿಸದ ತತ್ಪುರುಷವಾಗಿ ಗ್ರಹಿಸಬೇಕು. ಆಗ 'ತಂತ್ರಿಯಲ್ಲಿ ಲೀನವಾಗುವಿಕೆ' ಎಂದರೆ 'ತಂತ್ರೀವಾದದಲ್ಲಿ ಲೀನವಾಗುವಿಕೆ' ಎಂಬ ಸಮುಚಿತವಾದ ಅರ್ಥವು ಅಲ್ಲಿ ಕಾಣಿಸಿ ಕೊಳ್ಳುತ್ತದೆ. ಆಗ ರಾಮಾಯಣದಲ್ಲಿ ಪ್ರಯೋಗಿಸಲ್ಪಟ್ಟಿರುವ 'ತಂತ್ರಿಲಯ' ಎಂಬುದ ರಲ್ಲಿರುವ ಲಯ ಶಬ್ದದ ಅರ್ಥವೂ, ಗಾಯಕ ಸಂಪ್ರದಾಯದಲ್ಲಿ ವಿವಕ್ಷಿತವಾಗುವ ಲಯ ಶಬ್ದದ ಅರ್ಥವೂ ಒಂದೇ ಎಂದು ತಿಳಿಯುವುದು. ಮುಂದುವರಿಸುತ್ತ ತಂತ್ರೀಲಯ ಸಮನ್ವಿತವಾಗಿ ಎಂದರೆ ತಂತ್ರಿ ನಾದಕ್ಕೂ ಕಂಠಸ್ವರಕ್ಕೂ ಐಕ್ಯವಿರುವ ರೀತಿಯಲ್ಲಿ ಕುಶಲವರು ರಾಮಾಯಣವನ್ನು ಹಾಡಿದರು ಎಂದು ವರ್ಣಿಸುವ ಸಂದರ್ಭ ದಲ್ಲಿ ತಂತ್ರಿಲಯ ಎಂಬುದಕ್ಕೆ ಶ್ರುತಿಲಯ ಅಥವಾ ಸ್ವರಲಯ ಎಂದರೆ ನಾದಗಳ ಐಕ್ಯ ಎಂಬರ್ಥವು ಎಷ್ಟು ಸಮಂಜಸವಾಗಿ ಕೂಡಿಬರುವುದೋ ಅಷ್ಟು ಸಮಂಜಸವಾಗಿ ದ್ವಿತೀಯ ಸರ್ಗದ ಸಂದರ್ಭದಲ್ಲಿ ಕೂಡಿಬರುವಂತಿಲ್ಲ. ಏಕೆಂದರೆ ಅದು ಗಾನದ ವರ್ಣನೆ ಯಲ್ಲ. ಅಲ್ಲಿರುವುದು 'ಶ್ಲೋಕ'ದ ಛಂದೋಗುಣಲಕ್ಷಣಗಳ ನಿರೂಪಣೆ. ಆದುದರಿಂದ ಅಲ್ಲಿರುವ ತಂತ್ರಿಲಯವೆಂಬುದು ಯಾವುದೋ ಒಂದು ಛಂದೋವೈಶಿಷ್ಟ್ಯವನ್ನು ಹೇಳುವುದಾಗಿರಬೇಕೆಂಬ ಭಾವನೆಯಿಂದ ಛಂದೋಂಬುಧಿಯ ಪೀಠಿಕೆಯಲ್ಲಿ ಆ ಗ್ರಂಥ ಸಂಪಾದಕರು (ಕುಕ್ಕಿಲ ಕೃಷ್ಣಭಟ್ಟರು) ಆ ಪದಪ್ರಯೋಗಕ್ಕೆ ಅಪೂರ್ವವಾದೊಂದು ಅರ್ಥ ವನ್ನು ಹುಡುಕಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅನುಷ್ಟುಪ್ ಶ್ಲೋಕದ ಸಮಪಾದಗಳ ಉತ್ತರಾರ್ಧಸ್ವರೂಪ (ಲಗಂ ಲಗಂ)ವನ್ನು 'ತಂತ್ರ್ಯಲಯ' ಎಂಬ ಪದಪ್ರಯೋಗವು ತಿಳಿಸುತ್ತದೆಂಬುದು ಅವರ ಪ್ರತಿಪಾದನೆಯ ಲಕ್ಷ, ತಮ್ಮ ಈ ಅಭಿಪ್ರಾಯವನ್ನು