ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೯೦ / ಕುಕ್ಕಿಲ ಸಂಪುಟ

ಕೃಷ್ಣ ಭಟ್ಟರು ಮಂಗಳೂರಲ್ಲಿ ಅಧ್ಯಾಪಕರಾಗಿದ್ದಾಗ ರಜೆಯಲ್ಲಿ ನಮ್ಮಲ್ಲಿಗೆ ಬರುತ್ತಿದ್ದು ನಾಲ್ಕಾರು ದಿನವಿರುತ್ತಿದ್ದರು. ಆಗ ಭಾವಂದಿರೊಳಗೆ ಹಗಲು ರಾತ್ರಿ ಸಾಹಿತ್ಯ, ಯಕ್ಷಗಾನ ವಿಚಾರಗಳಲ್ಲಿ ಚರ್ಚೆ ನಡೆಯುತ್ತಲೇ ಇರುವುದು ವಾಡಿಕೆ. ಪ್ರತಿದಿನ ಅವರುಗಳು ಮಲಗುವಾಗ ರಾತ್ರಿ ಒಂದು ಗಂಟೆ, ಪುನಃ ಐದು ಗಂಟೆಗೆ ಎದ್ದು ಕಾಫಿ ತಯಾರಿಸಿ, ಕುಡಿದು ಪುನಃ ಚರ್ಚೆ ಪ್ರಾರಂಭ. ಒಂದು ಶಬ್ದ ಅಕ್ಷರವನ್ನು ಹಿಡಿದು ಗಂಟೆಗಟ್ಟಲೆ ಚರ್ಚೆ ನಡೆಯುತ್ತಿತ್ತು. ಚರ್ಚೆಯಲ್ಲಿ ಕೆಲವೊಂದು ಸಲ ಬಹಳ ಶಾಖವುತ್ಪನ್ನವಾಗಿ ಒಮ್ಮೆಲೆ ನೀನು ಮಾತಾಡ್ಡ” ಎಂದು ಆ ಕಡೆ ಈ ಕಡೆ ಮುಖಮಾಡಿ ಮಲಗುವುದಿತ್ತು. ಸ್ವಲ್ಪ ಸಮಯದ ಅನಂತರ ಪುಟ್ಟೋ' ಎಂದು ಶ್ರೀ ಸೇಡಿಯಾಪು ಕರೆಯುವುದು. ಅಥವಾ “ಪುಟ್ಟ ಭಾವಾ” ಎಂದು ಶ್ರೀ ಕುಕ್ಕಿಲರು ಕರೆಯುವುದು. ಪುನಃ ಚರ್ಚೆ ಬಿಟ್ಟಲ್ಲಿಂದ ಕೈಗೆತ್ತಿಕೊಳ್ಳುವುದು. ಹೀಗೆ ನಡೆಯುತ್ತಿತ್ತು. ಶ್ರೀ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಉಗ್ಗಪ್ಪಕೋಡಿಗೆ ಬಂದಾಗಲೆಲ್ಲ ನಮ್ಮಲ್ಲಿಗೆ ಬರುವುದಿತ್ತು. ಅವರೊಡನೆಯೂ ಗಂಟೆಗಟ್ಟಲೆ ದಿನಗಟ್ಟಲೆ ಸಂಗೀತದ ವಿಚಾರವಿಮರ್ಶೆ ನಡೆಯು ತಿತ್ತು. ಈ ಸಂದರ್ಭಗಳಲ್ಲೆಲ್ಲಾ ನಮಗೆ ಮಕ್ಕಳಿಗೆ ಒಂದು ರೀತಿಯ ಸೊಗಸು, ಅಲ್ಲದೆ ಆ ಸಮಯದಲ್ಲಿ ಶಿಸ್ತಿನ ಬಗ್ಗೆ ಇರುವ 'ರೂಲ್ಸ್' ಸ್ವಲ್ಪ 'ರಿಲಾಕ್ಸ್' ಆಗಿರುತ್ತಿತ್ತು.

ಶ್ರೀ ನೆಡ್ಲೆ ನರಸಿಂಹ ಭಟ್ಟರು ಮತ್ತು ಅವರ ಹಿರಿಯರು ಆಗ ನೆಡ್ಲೆಯಲ್ಲೇ ಇದ್ದರು. ನಾನು ಸಣ್ಣವನಿರುವಾಗ ಪ್ರತಿದಿನವೂ ಶ್ರೀ ನೆಡ್ಲೆ ನರಸಿಂಹ ಭಟ್ಟರು ನಮ್ಮ ಮನೆಗೆ ಬರುತ್ತಿದ್ದರು. ಅವರಿಗೆ ಸಂಗೀತ ಮತ್ತು ಯಕ್ಷಗಾನದಲ್ಲಿ ಪ್ರಾರಂಭದ ಗುರು ನಮ್ಮ ತಂದೆಯವರೇ ಎಂದರೂ ಸಲ್ಲಬಹುದು. ಶ್ರೀ ನೆಡ್ಲೆಯವರು ಮನೆಗೆ ಬಂದಿರು ವಾಗಲೆಲ್ಲ (ತಂದೆಯವರು ಸ್ವರ್ಗಸ್ಥರಾಗುವವರೆಗೂ) ತಂದೆಯವರ ಪಾದ ಮುಟ್ಟಿ ನಮಸ್ಕರಿಸಿಯೇ ಮಾತು ಪ್ರಾರಂಭಿಸುತ್ತಿದ್ದರು.
ನಲವತ್ತರ ದಶಕದಲ್ಲಿ ಮನೆಗೆ ಬರುತ್ತಿದ್ದವರಲ್ಲಿ ಶ್ರೀ ಬಲಿಪ (ದೊಡ್ಡವರು) ನಾರಾಯಣ ಭಾಗವತರು ಒಬ್ಬರು. ಅವರು ಬಂದಿರುವಾಗ ಪಾರ್ತಿಸುಬ್ಬ, ಅವನ ಕೃತಿಗಳ ವಿಚಾರವಾಗಿ ಮಾತುಕತೆಯಾಗುತ್ತಿತ್ತು. ಇಲ್ಲಿ ಶ್ರೀ ಬಲಿಪರು ಪಾರ್ತಿಸುಬ್ಬನ ಪದ್ಯಗಳನ್ನು ಹಾಡುತ್ತಿದ್ದದು ನನಗೆ ಇಂದಿಗೂ ಕೇಳಿಸುತ್ತಿದೆಯೋ ಎಂಬಂತಿದೆ.
ನಲವತ್ತರ ದಶಕದಲ್ಲಿ ನಮ್ಮ ಮನೆ ಸಮೀಪದ ಕೋಡಪದವು ಶಾಲೆಯಲ್ಲಿ ತಂದೆ ಯವರು ಸಂಗೀತದ ಕ್ಲಾಸುಗಳನ್ನು ನಡೆಸುತ್ತಿದ್ದರು. ಹಲವೆಡೆ ಭಾರತ ವಾಚನ ಮಾಡು ತಿದ್ದರು. ಕೆಲವು ಶಾಸ್ತ್ರೀಯ ಸಂಗೀತ ಕಛೇರಿಗಳನ್ನೂ ಕೊಟ್ಟುದುಂಟು. ತಾಳಮದ್ದಳೆ ಗಳಲ್ಲಿ ಭಾಗವತರಾಗಿ ಭಾಗವಹಿಸುತ್ತಿದ್ದರು. ನಮ್ಮಲ್ಲಿ ಆಗಾಗ್ಗೆ ತಾಳಮದ್ದಳೆಗಳಾಗು ತಿದ್ದುವು. ಒಂದು ತಾಳಮದ್ದಳೆಯಲ್ಲಿ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳವರು, ಶ್ರೀ ಪೆರ್ಲ ಕೃಷ್ಣ ಭಟ್ಟರವರು ಭಾಗವಹಿಸಿದುದು ನನಗೆ ಮರೆತು ಹೋಗಿಲ್ಲ. ಆ ಕಾರ್ಯಕ್ರಮದಲ್ಲಿ ಶ್ರೀ ಬಲಿಪರು, ಶ್ರೀ ನೆಡ್ಲೆಯವರು ಮತ್ತು ಶ್ರೀ ದಿವಾಣ ಭೀಮ ಭಟ್ಟರವರು ಹಿಮ್ಮೇಳ ಒದಗಿಸಿದುದು ಇಂದಿಗೂ ನೆನಪಿದೆ. ಆ ಸಮಯದಲ್ಲಿ ಶ್ರೀ ಬಡೆಕ್ಕಿಲ ಸಾಹುಕಾರ ವೆಂಕಟರಮಣ ಭಟ್ಟರವರಲ್ಲಿ (ತಂದೆಯವರ ಸೋದರಮಾವ) ವರ್ಷಕ್ಕೆ ಒಂದೆರಡು ಬಾರಿ ತಂದೆಯವರ ಭಾಗವತಿಕೆಯಲ್ಲಿ ತಾಳಮದ್ದಳೆ ಕೂಟಗಳಾಗು ತಿದ್ದವು. ಬಡೆಕ್ಕಿಲದ ಒಂದು ತಾಳಮದ್ದಳೆಯಲ್ಲಿ, ಶ್ರೀ ಮುಳಿಯ ಮಹಾಬಲ ಭಟ್ಟರವರ ಭೀಮನ ಪಾತ್ರದ ಅರ್ಥಗಾರಿಕೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.