ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

2

ಕೋಟಿ ಚೆನ್ನಯ


"ಎಲಾ! ನನ್ನನ್ನು ಏನು ನೋಡುತ್ತೀರಿ? ಇಲ್ಲಿಯೇ ಹತ್ತಿರ ಬೂದಿ ಬೊಮ್ಮಯ ಎಂಬವ................” ಎಂಬೀ ಮಾತುಗಳು ಬಲ್ಲಾಳನ ಬಾಯಿಂದ ಬಿದ್ದವೋ ಇಲ್ಲವೋ ಎನ್ನುವಷ್ಟರಲ್ಲಿ ಅವನಿಗೆ ಕಣ್ಣು ಕತ್ತಲೆ ಬಂದು, ಅವನು ಅಲ್ಲಿಯೇ ಒರಗಿದನು. ಆಗ ಅವನ ಆಳುಗಳು ಮಲೆಗೆ ಇಳಿದು, ಗಳ ಕಡಿದು, ಚಟ್ಟೆ ಕಟ್ಟಿ, ಅದರ ಮೇಲೆ ಬಲ್ಲಾಳನನ್ನು ಮೆಲ್ಲಗೆ ಇರಿಸಿ, ಬೂದಿ ಬೊಮ್ಮಯ್ಯನ ಚಾವಡಿಗೆ ಹೊತ್ತುಕೊಂಡು ಹೋಗಿ ಇಳಿಸಿದರು.

ಇಷ್ಟರಲ್ಲಿ ಪೆರುಮಾಳು ಬಲ್ಲಾಳನಿಗೆ ಮುಳ್ಳು ತಗಲಿದ ಸುದ್ದಿ ಪಡುಮಲೆಯಲ್ಲೆಲ್ಲಾ ಹಬ್ಬಿತು. ಮುಳ್ಳು ಕೀಳುವವರು ಬೇಗಬೇಗನೆ ಬಂದು ನೋಡಿದ್ದಾಯಿತು; ಮಂತ್ರ ಮಾಡುವವರು ಮಾಡಿದ್ದಾಯಿತು; ಮದ್ದು ಕೊಡುವವರು ಕೊಟ್ಟಿದ್ದಾಯಿತು. ಬೊಮ್ಮಯ್ಯ ಬಲ್ಲಾಯನ ಬಲಿಯಾಯಿತು; ಅಮ್ಮಣ್ಣ ಬೈದ್ಯನ ಮದ್ದಾಯಿತು. ಆದರೆ ಮಾಡುವುದೇನು? ಬಲ್ಲಾಳನಿಗೆ ದಿನದಿಂದ ದಿನಕ್ಕೆ ಉರಿ ನೋವು, ಬೀಗು ಬಾವು, ಕೆಂಪು ಕೀವು ಹೆಚ್ಚು ಹೆಚ್ಚಾಯಿತು. ಅನ್ನದಲ್ಲಿ ರುಚಿ, ಹಾಸಿನಲ್ಲಿ ನಿದ್ದೆ, ಮನಸ್ಸಿನಲ್ಲಿ ಗೆಲವು, ಯಾವುದೊಂದೂ ಇಲ್ಲದೆ ಬಲ್ಲಾಳನು ನೋವಿನಿಂದ ಸಂಕಟಗೊಂಡನು; ಕಡ್ಡಿಯಂತೆ ಕಂಗಾಲಾದನು. ಮಾಗಣೆಯ ಜನರೆಲ್ಲಾ ಪಡುಮಲೆಯ ಬೀಡಿಗೆ ಹೋಗಿ, ಬಲ್ಲಾಳನ ಸ್ಥಿತಿಯನ್ನು ಕಂಡು, ಕಣ್ಣೀರು ತುಂಬಿ, ಹಿಂದೆರಳುತಿದ್ದರು.

ಹೀಗೆ ಅವನನ್ನು ನೋಡಬಂದವರಲ್ಲಿ ಒಬ್ಬನು ಒಂದು ದಿನ ಇಂಥ ಮುಳ್ಳು ಹುಣ್ಣಿಗೆ ನಮ್ಮ ಸಾಯನ ಬೈದ್ಯನು ಮುಂಚೆ ಮದ್ದು ಮಾಡುತ್ತಿದ್ದನು. ಈಗ ಅವನಿಗೆ ಚಾಳೀಸು, ಕಣ್ಣು ಕಾಣದು. ಅವನ ತಂಗಿ ದೇಯಿಗೂ ಆ ಮದ್ದು ಗೊತ್ತಿದೆ ಅಂತೆ” ಎಂದು ಮೆಲ್ಲನೆ ಹೇಳಿದನು.

ಅದಕ್ಕೆ ಮತ್ತೊಬ್ಬನು "ಅದು ಹೌದು! ದೇಯಿಯ ಮದ್ದು ಒಳ್ಳೆಯದು, ಆದರೆ ಅವಳು ಈಗ ಬರುವುದು ಹೇಗೆ? ತುಂಬಿದ ಬಸುರಿ ಎಂದು ಸಂಶಯಪಟ್ಟನು. “ಗಂಡ ಕಾಂತಣ್ಣ ಬೈದ್ಯನು ಸತ್ತು ಮೂರು ತಿಂಗಳಾಗಲಿಲ್ಲ” ಎಂದು ಇನ್ನೊಬ್ಬನು ಹೇಳಿದನು.