ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ಕೋಟಿ ಚೆನ್ನಯ

ಮಕ್ಕಳಿಗೆ ನಾಮಕರಣವಾದ ತರುವಾಯ ದೇಯಿ ಬೈದಿತಿಯು ಬಹಳ ಕಾಲ ಬದುಕಲಿಲ್ಲ. ಅವಳು ಸಹಜವಾಗಿ ಕಾಲವಾದಳೊ, ಇಲ್ಲವೆ ಅಮ್ಮಣ್ಣ ಬೈದ್ಯನೂ ಮಲ್ಲಯ ಬುದ್ಧಿವಂತನೂ ಕೂಡಿ ಮಾಡಿಸಿದರೆಂಬುದಾಗಿ ಹೇಳುವ ಮಾಟದಿಂದ ಸತ್ತು ಹೋದಳೋ ಎಂಬುದು ಈ ತನಕ ತಿಳಿಯ ಲಿಲ್ಲ. ಆದರೆ ಆ ಪಡುಮಲೆ ಬಲ್ಲಾಳನು ಮಾತ್ರ ಆ ತಾಯಿತಂದೆಗಳಿಲ್ಲದ ಮಕ್ಕಳನ್ನು ಬಿಟ್ಟು ಹಾಕಲಿಲ್ಲ. ಆತನು ಅವರ ದೂರದ ಸೋದರ ಮಾವನಾದ ಸಾಯಿನ ಬೈದ್ಯನೆಂಬ ಬಿಲ್ಲವನನ್ನು ಕರೆಯಿಸಿ, ಆ ಅನಾಥ ಮಕ್ಕಳನ್ನು ಅವನ ಸೆರಗಿನಲ್ಲಿ ಹಾಕಿ, ಮಕ್ಕಳ ಸಾಕಣೆಗಾಗಿ ಬಿಂದಿಗೆ ತುಂಬ ಹಾಲು, ಹಾಲಿಗಾಗಿ ಹಸು, ಹಸು ಬತ್ತಿದರೆ ಎಮ್ಮೆ, ಮಕ್ಕಳಿಗೆ ಮಲಗಲಿಕ್ಕೆ ಮಂದರಿ, ಮಂದರಿ ಹರಿದರೆ ಹಚ್ಚಡ, ಹಚ್ಚಡ ಹರಿದರೆ ಮಂದರಿ ಕೊಡಿಸಿ, ಅವನನ್ನು ಕಳುಹಿಸಿದನು. ಸಾಯನ ಬೈದ್ಯನ ಮನೆಯಲ್ಲಿ ಕೋಟಿ ಚೆನ್ನಯರು ಸಾಯನ ಬೈದಿತಿಯ ಆರೈಕೆಯಿಂದ ಬೆಳೆದು ದೊಡ್ಡವರಾದರು.

ಪಡುಮಲೆಯಲ್ಲಿ ಒಂದು ವಿಸ್ತಾರವಾದ ಆಟದ ಬೈಲು ಇದೆ. ಹಳ್ಳಿಯ ಮಕ್ಕಳು ಸಂಜೆಯಲ್ಲಿ ಚೆಂಡಾಟವನ್ನೊ ಬಿಲ್ಲಾಟವನ್ನೊ ಆ ಬೈಲಿನಲ್ಲಿ ಆಡುತಿದ್ದರು, ಬಡವರು ಮತ್ತು ಬಲ್ಲಿದರು, ಬೈದ್ಯರು ಮತ್ತು ಒಕ್ಕಲಿಗರು ಎಂಬ ಯಾವ ಭೇದವಿಲ್ಲದೆ ಎಲ್ಲರೂ ಆಟವಾಡುತಿದ್ದರು, ಆಟದಲ್ಲಿ ಮಾತಿಗೆ ಮಾತು ಬರುತ್ತದಷ್ಟೆ. ಹೀಗೆ ಒಂದು ದಿನ ಆಡುವಾಗ ಮಾತಿಗೆಮಾತು ಬಂದು, ಅಂದಿನ ಆಟವೆಲ್ಲ ಜಗಳಾಟವಾಯಿತು. ಬಿಲ್ಲವರ ಮಕ್ಕಳು ಆ ದಿವಸ ಗೆದ್ದಿದ್ದರು; ಒಕ್ಕಲಿಗರ ಮಕ್ಕಳು ಸೋತಿದ್ದರು. ಸೋತವರು ಜಗಳಕ್ಕೆ ನೆಪವನ್ನು ತೆಗೆದರು. 'ಕಳದ ಬಾಡಿಗೆ ಕೊಡಬೇಕು' ಎಂದು ಬುದ್ಧಿವಂತನ ಮಕ್ಕಳು 'ಕಳದ ಬಾಡಿಗೆ ಉಂಟೆಂದು ಆಟದ ಮೊದಲು ಕಟ್ಟು ಮಾಡಿಲ್ಲ' ಎಂದು ಚೆನ್ನಯನು ಕಚ್ಚಾಡಿ ಕಚ್ಚಾಡಿ, ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು. ಚೆಂಡು ಮಾತ್ರ ಬೈದಿತಿಯ ಮಕ್ಕಳ ಕೈಯಲ್ಲಿ ಬಿತ್ತು; ಬುದ್ದಿವಂತನ ಮಕ್ಕಳು ಬರಿಯ ಕೈಯಿಂದ ಅಳುತ್ತ ಮನೆಗೆ ಹೋದರು.

ಮನೆಗೆ ಬಂದ ಮಕ್ಕಳ ಮೋರೆಯನ್ನು ಕಂಡು, ಅವರ ದೂರು ಕೇಳಿ, ಮಲ್ಲಯ ಬುದ್ದಿವಂತನು ಕೋಟಿ ಚೆನ್ನಯರನ್ನು ಹುಡುಕಿ ಹೋದನು.