ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

30

ಕೋಟಿ ಚೆನ್ನಯ

ಬೈದಿತಿಯ ಗಂಡ ಸಾಯಿನ ಬೈದ್ಯನು ಮಾತ್ರ ಮನೆಯೊಳಕ್ಕೆ ಇದ್ದನು. ಆಳುಗಳು ಅವನನ್ನು ಹಿಡಿದು ತಂದು ಬಲ್ಲಾಳನಿಗೆ ಒಪ್ಪಿಸಿದರು. ತಲೆತಪ್ಪಿಸಿಕೊಂಡವರು ಎಲ್ಲಿ ಓಡಿರಬೇಕೆಂಬುದನ್ನು ಅವನ ಬಾಯಿಂದ ಹೊರಡಿಸುವುದಕ್ಕೆ ಅವನನ್ನು ನಾನಾ ಬಗೆಯಾಗಿ ಹಿಂಸಿಸಿದರು. ಕುಟುಕು ಜೀವದಲ್ಲಿದ್ದ ಆ ಮುದುಕನ ಸಂಕಟವನ್ನು ಕಂಡು ಬೀಡಿನ ರಾಣಿ ಮುದುಕ ನನ್ನು ಬಿಡಿ, ಅವನ ಗೋಳನ್ನು ಕೇಳಲಾರೆ” ಎಂದು ಹೇಳಿ ಅವನನ್ನು ಬಿಡಿಸಿಬಿಟ್ಟಳು. ಅಂದಿನಿಂದ ಮುದುಕನು ಮೊದಲಿನಂತೆಯೇ ಬೀಡಿನ ಒಳಗಿನವರಿಗೆ ಬೇಕಾದ ಕಳ್ಳನ್ನು ಒದಗಿಸಿಕೊಡುತ್ತ ಅವರಲ್ಲಿ ವಿಶ್ವಾಸದಿಂದ ನಡೆಯುತ್ತ ಬೀಡಿನ ಕೋಟೆಯ ಹೊರಹೋಗಲಿಕ್ಕೆ ಅಪ್ಪಣೆ ಇಲ್ಲದೆ ಅಲ್ಲಿಯೇ ಇದ್ದನು,

ಪೆರುಮಾಳ ಬಲ್ಲಾಳನ ಮನಸ್ಸು ಕೋಟಿ ಚೆನ್ನಯರ ಸಂಗತಿಯಿಂದ 'ನೀರು ಸೋಕಿದರೆ ಬಿಸಿ ಗಾಳಿ ಹಾಕಿದರೆ ಉರಿ' ಎಂಬಂತೆ ಹುಣ್ಣು ಹುಣ್ಣಾಗಿ ಹೋಯಿತು, ಗದ್ದಿಗೆಯಲ್ಲಿ ಗಡುವನ್ನು ಇಟ್ಟಿದ್ದು ನೆನಪಿಗೆ ಬರುತ್ತಲೆ ಅವನ ಮುಖವು ಬಾಡುವುದು; ಅವರು ಮರಳಿ ಬರಲಾರರೆಂದು ಯಾರಾದರೂ ಹೇಳಿದರೆ, ಅದು ಅರಳುವುದು, ಬೀಡಿನಲ್ಲಿ ಹುಟ್ಟಿದ ಮಕ್ಕಳು ಬೇಡಿ ತಿನ್ನಬೇಕಾಯಿತೇ ಎಂದು ನೆನೆಸಿ ಮರುಕಿನಿಂದ ಅವರು ಎಲ್ಲಿದ್ದರೂ ಸರಿಯೇ ಅವರನ್ನು ಸಂಧಿಸಾಮಗಳಿಂದ ತಿರಿಗಿ ತರಿಸಿಕೊಳ್ಳಬೇಕು' ಎಂದು ಒಮ್ಮೆ ಹೇಳುವನು. ಮತ್ತೊಮ್ಮೆ 'ದೂರದ ಮಾರಿ ದೂರಕ್ಕಿರಲಿ! ಕಿಚ್ಚಿನ ಕಿಡಿ ಎಂದು ಗೊತ್ತಿದ್ದು ಕಟ್ಟೆಯಲ್ಲಿ ಕಟ್ಟಿಕೊಳ್ಳುವುದೇಕೆ' ಎಂದು ಅಭಿಪ್ರಾಯಪಟ್ಟು ಸುಮ್ಮನಾಗುವನು, ಈ ಪ್ರಕಾರವಾಗಿ ಹೆದರಿಕೆಯ ಒಂದು ದಂಡಿಯು ಕತ್ತಿನಲ್ಲಿ ಕಟ್ಟಲ್ಪಟ್ಟು ಹಗೆಯ ಹಾದಿಯಲ್ಲಿ ಹಾಯ್ದು ಹಾಯ್ದು ಹೋಗಲರಿಯದ ಹೋರಿಯಂತೆ ಅವನ ಮನಸ್ಸು ಕ್ಷುಬ್ದ ವಾಗಿತ್ತು.

ಹೀಗಿರಲು ಕೋಟಿಚೆನ್ನಯರ ಜಾಡು ಹಿಡಿದು ಅವರನ್ನು ಹುಡುಕಲಿಕ್ಕೆ ಹೋದ ಬಲ್ಲಾಳನ ಬೇಹಿನವರಲ್ಲಿ ಒಬ್ಬನು ಹಳ್ಳಿಗಳನ್ನೆಲ್ಲಾ ಸುತ್ತಾಡಿ, ಅವರು ಪಂಜದ ಊರಲ್ಲಿ ಸೇರಿಕೊಂಡಿದ್ದಾರೆಂಬುದನ್ನು ಗೊತ್ತು ಮಾಡಿ, ಪಡುಮಲೆಗೆ ಹಿಂದಿರಳಿ, ಅವರ ಸೋವುಸುಳಿವುಗಳನ್ನು ತಮ್ಮ ಯಜಮಾನನಿಗೆ ತಂದು ಕೊಟ್ಟನು. ಮರುದಿನವೇ ಬಲ್ಲಾಳನು ತನ್ನ ಸೇನಬೇವನನ್ನು ಚಾವಡಿಗೆ ಕರೆಯಿಸಿದನು.