ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

32

ಕೋಟಿ ಚೆನ್ನಯ

ಉಡಿಗೆಯಲ್ಲಿ ಹೊರಟು ಬರಬೇಕೆಂದು ಅಪ್ಪಣೆಯಾಗಿದೆ ಎಂದನು. ತಕ್ಷಣವೇ ಚೆಂದುಗಿಡಿಯು ಅಲ್ಲಿಂದ ಎದ್ದು ಕೇಮರನ ಬೀಡಿಗೆ ಹೋದನು,

ಕೇಮರ ಬಲ್ಲಾಳನು ಒಳಗಿನ ಅರೆಯಲ್ಲಿ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದನು. ಚಂದುಗಿಡಿಯು ಬಂದು ಕೈಮುಗಿದು, ಕೈಕಟ್ಟಿ ನಿಂತನು. ಕೇಮರನು ಅವನಿಗೆ ಕುಳಿತುಕೊಳ್ಳಲು ಹೇಳಿ, ಮುಗುಳುನಗೆಯಿಂದ “ರಹಸ್ಯದ ಕಾರ್ಯ- ರಾಯಸ ಬಂದಿದೆ ” ಎಂದನು,

ಚಂದುಗಿಡಿಯು “ಬುದ್ಧಿ" ಎಂದು ಗಂಟಲೊತ್ತಿದಂತೆ ಹೇಳಿ, ಮೊಳಕೈಗಳನ್ನು ಒರಸುತ್ತ, “ಬುದ್ಧಿ” ಎಂದು ಸ್ವರ ಎತ್ತಿದನು. ಕೇಮರ ಬಲ್ಲಾಳನು “ನಮ್ಮ ಪಡುಮಲೆ ರಾಜ್ಯದಿಂದ ಓಲೆ ಉಡುಗೊರೆ ಸಹಿತ ಆಳು ಬಂದಿದೆ. ಭಾರಿ ರಾಯಸ, ಕೋಟಿ ಚೆನ್ನಯರನ್ನು ಕುರಿತು ಬಲ್ಲಾಳರು ಬರಸಿದ್ದಾರೆ ಎಂದು ಹೇಳಿ, ಓಲೆಯನ್ನು ಚಂದುಗಿಡಿಯ ಕೈಯಲ್ಲಿ ಕೊಟ್ಟನು.

ಚೆಂದುಗಿಡಿಯ ಎದೆಯು ಬಡೆಯ ಹತ್ತಿತು. ಅವನು ನಡುಗುವ ಕೈಗಳಲ್ಲಿ ಅದನ್ನು ಹಿಡಿದು ಒಮ್ಮೆ ಓದಿಕೊಂಡನು; ಒಮ್ಮೆ ಒಳಕ್ಕೆ ಸರಿದ ನಾಲಗೆಯು ಈಗ ಹೊರಕ್ಕೆ ಬಂತು. ಅವನು ಅದನ್ನು ಇನ್ನೊಮ್ಮೆ ಚೆನ್ನಾಗಿ ಹಿಂದು ಮುಂದು ಮಗುಚಿ ನೋಡಿ, ಬುದ್ದಿ, ರಾಯಸದ ಒಕ್ಕಣೆ ಸರಿಯಿದೆ. ಬಾಳೆಯಾಗಿ ಬೆಳಿಸಿದ್ದು ತಾಳೆಯಾಗಿ ತಲೆಯನ್ನು ಜಜ್ಜಿತಲ್ಲಾ” ಎಂದನು.

ಕೇಮರ ಬಲ್ಲಾಳನು “ಓಲೆಯನ್ನು ಓದಬೇಕೆಂದಿಲ್ಲ. ಒಟ್ಟೇನು ಹೇಳಿ ಬಿಡು” ಎಂದು ಹೇಳಿ, ತನ್ನ ಬೆಳ್ಳಿಯ ಕರಡಿಗೆಯೊಳಗಿಂದ ಬಂಗಿಯ ಉಂಡೆಯನ್ನು ತೆಗೆದು ಮುಕ್ಕಿದನು.

ಚೆಂದುಗಿಡಿಯು ಇನ್ನೊಮ್ಮೆ ಓಲೆಯನ್ನು ಓದಿದಂತೆ ನಟಿಸಿ, “ಬುದ್ಧಿ, ಪಡುಮಲೆಯ ರಾಜ್ಯದಲ್ಲಿ ಬಿಲ್ಲವರಿಗೆ ಹುಟ್ಟಿದ ಕೋಟಿಚೆನ್ನಯರು ಮಲ್ಲಯ ಬುದ್ಧಿವಂತನನ್ನು ಕೊಂದು, ಭಾರಿ ನರಹತ್ಯಮಾಡಿ, ತಲೆ ಮರೆಸಿಕೊಂಡು ಓಡಿಹೋಗಿದ್ದಾರೆ. ಪಂಜದ ರಾಜ್ಯದಲ್ಲಿ ಕಾಲಿಟ್ಟರೆ ಅವರನ್ನು ಹಿಡಿದು ಕಳುಹಿಸಬೇಕು-

ಕೇಮರ ಬಲ್ಲಾಳ-"ಇಲ್ಲದಿದ್ದರೆ-"