ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಂದುಗಿಡಿ

33

ಚೆಂದುಗಿಡಿ “ ಇಲ್ಲದಿದ್ದರೆ, ಇಲ್ಲದಿದ್ದರೆ ಅವರನ್ನು ಇಲ್ಲೇ ಕೊಲ್ಲಿಸಬೇಕು” ಎಂದು ನಾಲಗೆ ಕಚ್ಚಿ ಹೇಳಿದನು. ಆ ಕಡೆಯ ವಾಕ್ಯವು ರಾಯಸದಲ್ಲಿ ಇರಲಿಲ್ಲ.

ಕೇಮರ ಬಲ್ಲಾಳ- ಕಳುಹಿಸದಿದ್ದರೆ ಅವನು ಏನು ಮಾಡುತ್ತಾನಂತೆ?"

ಚೆಂದುಗಿಡಿ-"ಅವರನ್ನು ಹಿಂದಕ್ಕೆ ಕಳುಹಿಸಿ ಇಲ್ಲವೆ ಕೊಂದು ಹಾಕಿ, ನಮ್ಮೊಳಗಿನ ಪೂರ್ವ ಸ್ನೇಹವನ್ನು ಬೆಳೆಸುವುದು; ನಮ್ಮ ಪಡುಮಲೆ ಬೀಡಿನ ಮಾನಮರ್ಯಾದೆಯನ್ನು ಕಾಪಾಡುವುದು ಹೀಗೆ ಸಾಷ್ಟಾಂಗ ನಮಸ್ಕಾರ ಪೂರ್ವಕವಾಗಿ ಬರೆಯಿಸಿರುತ್ತಾರೆ.

ಕೇಮರ ಬಲ್ಲಾಳ- “ಸರಿ! ಬೀಡಿನ ಗೌರವವು ನಮಗೂ ಒಂದೇ, ಅವರಿಗೂ ಒಂದೇ. ಹಾಗಾದರೆ ಅವರ ಬೀಡಿನ ಮರ್ಯಾದೆಯನ್ನು ನಾವು ಕಾಯಬೇಕಷ್ಟೆ - "

ಚೆಂದುಗಿಡಿ- “ಬುದ್ಧಿ! ಅಪ್ಪಣೆಯಾದರೆ ನಾನು ಮಾಡುತ್ತೇನೆ.”

ಹೀಗೆ ಹೇಳಿ ಚೆಂದುಗಿಡಿಯು ಪಡುಮಲೆಯಿಂದ ಬಂದ ಓಲೆಯ ಒಕ್ಕಣೆಯಂತೆ ನಡಿಸತಕ್ಕ ಉಪಾಯಗಳನ್ನು ಸೂಚಿಸಿ, ಬೀಡಿನಿಂದ ಹೊತ್ತು ಮುಳುಗುವಷ್ಟರೊಳಗೆ ತನ್ನ ಮನೆಗೆ ಹಿಂದೆ ಹೋಗುತಿದ್ದನು.

ಆ ಹೊತ್ತಿಗೆ ಚೆಂದುಗಿಡಿಯ ಮನೆಯ ದಾರಿ ಹಿಡಿದು ಕೋಟಿ ಚೆನ್ನಯರೊಟ್ಟಿಗೆ ಈಚೆಗೆ ಬರುತಿದ್ದ ಪಯ್ಯಬೈದ್ಯನು ಚೆಂದುಗಿಡಿಯನ್ನುಕಂಡು, “ಅಯ್ಯಾ! ನಾವು ನಿಮ್ಮಲ್ಲಿಗೆ ಹೋಗುತಿದ್ದೆವು. ನಿಮ್ಮನ್ನು ಬೀಡಿಗೆ ಕರೆಯಿಸಿದ್ದಾರೆಂದು ಕೇಳಿ ಈ ದಾರಿಯಾಗಿ . . . "

ಚೆಂದುಗಿಡಿಯು ಅವನನ್ನು ಮಾತು ಮುಗಿಸಲಿಕ್ಕೆ ಬಿಡದೆ, ಅವನ ಕೈ ಹಿಡಿದು, ಮೂವರನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಕೂಡಲೆ ಒಳಗಿನಿಂದ ಬಂದ ಹಾಲಿನ ಗಿಂಡಿ, ಸಕ್ಕರೆಯ ತಟಕು, ಕೆಂದಾಳೆ ಸೀಯಾಳ- ಇವುಗಳ ಉಪಚಾರ ಮಾತ್ರವಾಯಿತು, ಅವನ್ನು ಯಾರೂ ಮುಟ್ಟಲಿಲ್ಲ. ತರುವಾಯ ವೀಳ್ಯದ ತಟ್ಟಿ ಬಂತು- ಪಂಚವಳ್ಳಿಯೆಲೆ, ಇಬ್ಬಾಗದ ಅಡಕೆಯ ಹೋಳು, ಬೆಣ್ಣೆಯಂಥ ಬಿಳಿಸುಣ್ಣ, ಸೂರತಿ ಹೊಗೆಸೊಪ್ಪು, ಪಯ್ಯನು ಎಲೆಯನ್ನು ಒರಸಿ, ಉಗುರಿಂದ ಕುಡಿಯನ್ನು

3