ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

42

ಕೋಟಿ ಚೆನ್ನಯ

ಹಣಕಾಸೆಲ್ಲಾ ಎಣ್ಮೂರಿಗೆ ಹೋಗುತಿತ್ತು. ಈಗಿನ ಕಾಲದಲ್ಲಿ ಎಣ್ಮೂರು ಪಂಜದವರು ಜಗಿದು ಬಿಟ್ಟ ಕಬ್ಬಿನ ಸಿವುಡಿಯಂತಾಗಿದೆ. ಇಲ್ಲದಿದ್ದರೆ ಕಾಡಿನ ಆಚೆಗೆ ನೆಟ್ಟಿದ್ದ ಈ ಗಡಿಕಲ್ಲು ಈಚೆಗೆ ಬಂದು ಬೀಳುತ್ತಿತ್ತೇ” ಎಂದನು.

ಅದಕ್ಕೆ ಚೆನ್ನಯನು- “ಅದು ಮೊದಲಿದ್ದಲ್ಲೇ ಏಕೆ ಇರಬಾರದು?” ಎಂದು ಹೇಳಿ, ತನ್ನ ಎರಡು ಕೈಗಳಿಂದ ಅಲುಗಾಡಿಸಿ, ನಾಲ್ವರು ಹೊರಲಾರದಷ್ಟು ತೂಕವಾದ ಆ ಗಡಿಕಲ್ಲಿಗೆ ಬೆನ್ನು ಕೊಟ್ಟು, ಅದನ್ನು ಒಯ್ಯುತ್ತಿದ್ದನು'

ಅಷ್ಟರಲ್ಲಿ ಎಣ್ಮೂರಿಂದ ಪಂಜಕ್ಕಾಗಿ ನಾಲ್ಕು ಮಂದಿ ಆಳುಗಳೊಡನೆ ಆ ದಾರಿಯಾಗಿ ಹೋಗುತ್ತಿದ್ದ ಕಿನ್ನಿ ಚೆನ್ನಯನು ಕೋಟಿಯ ತಮ್ಮನ ಕೆಲಸವನ್ನು ಕಂಡು, ಅವರಿಬ್ಬರನ್ನು ಆಶ್ಚರ್ಯದಿಂದ ದೃಷ್ಟಿಸುತ್ತ ಅಲ್ಲಿಯೇ ನಿಂತುಬಿಟ್ಟನು. ಅವನ ಆಳುಗಳು ಅವನ ಹಿಂದೆಯೇ ತಡೆದರು.

ಕೋಟೆಯು ಗಡಿಯ ಕಲ್ಲನ್ನು ಹೊತ್ತು ಕೊಂಡು ಹೋಗುವ ಚೆನ್ನಯನೊಡನೆ “ತಮ್ಮಾ, ಅಳುಕಬೇಡ, ತುಳುಕಬೇಡ ” ಎಂದು ಸೂಚಿಸಿದನು,

ಕಿನ್ನಿಚೆನ್ನಯನು ಕೋಟೆಯೊಡನೆ “ಆತನು ನಿನ್ನ ತಮ್ಮನೊ ? ಗಡಿಕಲ್ಲನ್ನು ಅವನು ಏತಕ್ಕೆ ಕಿತ್ತು ಬಿಟ್ಟನು? ” ಎಂದು ಕೇಳಿದನು.

ಆ ಮಾತಿಗೆ ಕೋಟಿಯು ತನ್ನ ಕೈ ಬೆರಳಿನಿಂದ ಆ ಕಾಡಿನ ಆಚೆ ಕಡೆಯ ಗಡಿಯನ್ನು ತೋರಿಸಿ, “ಆಯ್ಯಾ ಈ ಗಡಿಕಲ್ಲಿನ ಪೂರ್ವಸ್ಥಳವು ಕಾಡಿನ ಆಚೆಗಿದೆ. ನಾವು ಕಣ್ಣಾರೆ ಕಂಡಿದ್ದೇವೆ. ಪಂಜಕ್ಕೆ ಬಲವು ಬರುತ್ತಲೇ ಈ ಕಲ್ಲು ಅಲ್ಲಿಂದ ಇಲ್ಲಿ ಹಾರಬೇಕೇ ? ಎಂದು ಹೇಳಿದನು.

ಇಷ್ಟರೊಳಗೆ ಚೆನ್ನಯನು ಕಲ್ಲನ್ನು ಮೊದಲಿದ್ದಲ್ಲಿ ನಿಲ್ಲಿಸಿ ಜಾಗ್ರತೆಯಾಗಿ ಬಂದು, “ಮತ್ತು ಈ ಕಲ್ಲು ಎಣ್ಮೂರಿನ ಜಾಗವನ್ನು ಕಿತ್ತು ತೆಗೆಯಬೇಕೇ ? ಮುಂಚಿನ ರೀತಿರಿವಾಜು ಈಗಲೂ ನಡೆಯಲಿ!, ಎಂದು ಮುಗಿಸಿದನು.

ಅವರಿಬ್ಬರ ನಿಲುವು ಚೆಲುವುಗಳಿಂದ ಬೆರಗಾಗಿ, ಅವರ ನಡೆನುಡಿಗಳಿಂದ ಮರುಳಾಗಿ, ಮಾತಾಡುವುದಕ್ಕೆ ನಾಲಗೆ ಬಾರದೆ ದುರದುರನೆ ಅವರ ಮುಖವನ್ನೇ ನೋಡುತ್ತಿದ್ದ ಕಿನ್ನಿಚೆನ್ನಯನು ಅರೆಗಳಿಗೆಯ ಮೇಲೆ ಸ್ವಲ್ಪ ಧೈರ್ಯಗೊಂಡು, “ಬುದ್ದಿ, ತಮ್ಮನ್ನು ನೋಡಿದರೆ ತಾವು ಯಾರೋ ಮೇಲಿಂದ