ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

44

ಕೋಟಿ ಚೆನ್ನಯ

ಪ್ರಶ್ನೆ – “ಅವಳು ಎಲ್ಲಿರುವಳು?”

ಉತ್ತರ- “ಅಯ್ಯನೂರು ಬೈಲಿನ ತಿಮ್ಮಣ್ಣ ಬೈದ್ಯನಲ್ಲಿ”

ಪ್ರಶ್ನೆ – “ಅವಳು ಆರೋಗ್ಯದಲ್ಲಿ ಇದ್ದಾಳೇ ?

ಉತ್ತರ- “ಮೂರು ದಿವಸಗಳ ಹಿಂದೆ ಅವಳ ಜೀವದಾಸ ಬಿಟ್ಟು ಬಾಯಿಗೆ ಹಾಲೆರೆದಿದ್ದರು, ನಿನ್ನೆ ಮೊನ್ನೆಯ ಸ್ಥಿತಿ ನನಗೆ ಗೊತ್ತಿಲ್ಲ, ಬುದ್ಧಿ !”

ಇಷ್ಟು ಮಾತುಕಥೆಯಾದನಂತರ ಕೋಟಿಚೆನ್ನಯರು ಬಂದವರ ಜತೆಯಲ್ಲಿ ಹೊರಟು ಸಂಜೆಗೆ ಮುಂಚಿತವಾಗಿ ಎಣ್ಮೂರಿಗೆ ಬಂದು, ತಿಮ್ಮಣ್ಣ ಬೈದ್ಯನ ಮನೆಯೊಳಕ್ಕೆ ಹೋದರು.

ಮನೆಯ ಚಾವಡಿಯ ಮೇಲೆ ಒಂದು ಹರಳೆಣ್ಣೆಯ ದೀಪವು ಮಿಣಮಿಣನೆ ಉರಿಯುತ್ತಲಿತ್ತು, ಅದರ ಒತ್ತಿನಲ್ಲಿ ಒಂದು ಕೋಣೆಯೊಳಗೆ ಸುಮಾರು ೬೦ ವರ್ಷ ವಯಸ್ಸು ದಾಟಿದ ಹೆಂಗಸೊಬ್ಬಳು ಒಂದು ಚಾಪೆಯ ಮೇಲೆ ಮಲಗಿದ್ದಳು, ಅವಳ ಮೈಯೆಲ್ಲಾ ಜ್ವರದಿಂದ ಬೆಂದು, ಕೆಮ್ಮಿನಿಂದ ಜಜ್ಜಿ ಹೋಗಿ, ಗರಿಯಂತೆ ಹಗುರವಾಗಿತ್ತು, ಕಿನ್ನಿಚೆನ್ನಯನು ಆ ಚಾಪೆಯ ಹತ್ತಿರ ಬಂದು ಕುಳಿತುಕೊಂಡು, “ಅಮ್ಮಾ, ಈ ಹೊತ್ತು ಹೇಗಿದೆ? ನಿನ್ನ ಮಕ್ಕಳು ಕೋಟಿಚೆನ್ನಯರು ಬಂದಿದ್ದಾರೆ, ನೋಡು” ಎಂದು ಹೇಳಿದನು.

ಆ ಎರಡು ಹೆಸರುಗಳನ್ನು ಕೇಳುತ್ತಲೇ ಅವಳ ಮುಚ್ಚಿದ ಕಣ್ಣು ಕೊಂಚ ತೆರೆಯಿತು; ಬಿಗಿದ ತುಟಿ ಅಲ್ಲಾಡಿತು, “ಓ ನನ್ನ ಬಾಲ” ಮಾತುಗಳು ಅಸ್ಪಷ್ಟವಾಗಿ ಬಾಯಿಂದ ಹೊರಟುವು.

ಆಗ ಕೋಟಿಯು ಮುದುಕಿಯ ತಲೆಯನ್ನು ತನ್ನ ಎಡ ತೊಡೆಯ ಮೇಲೆ ಇಟ್ಟು ಕುಳಿತುಕೊಂಡನು; ಚೆನ್ನಯನು ಅವಳ ಕಾಲುಗಳನ್ನು ಒತ್ತಲು ತೊಡಗಿದನು.

ಚೆನ್ನಯನು “ಅಮ್ಮಾ, ಸಾಯಿನ ಬೈದ್ಯರು ಎಲ್ಲಿದ್ದಾರೆ ?” ಎಂದು ಕೇಳಿದನು.

ಅದಕ್ಕೆ ಕೋಟೆಯು “ಮಾತಾಡಿಸಬೇಡ; ಮಾತಾಡಿದರೆ ದಣುವಾಗುತ್ತದೆ” ಎಂದು ತಮ್ಮನಿಗೆ ಸೂಚಿಸಿದನು.