ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇಯಿ ಬೈದಿತಿಯ ಮರಣ

45

ಸಾಯನ ಬೈದಿತಿಯು ಬಹಳ ಪ್ರಯತ್ನ ಪಟ್ಟು, “ಮಕ್ಕಳೇ ! ನನ್ನ ಕಡೆಗಾಲಕ್ಕೆ ನನಗೆ ಒದಗಿದಿರಿ! ಜಯಸಿರಿ ನಿಮ್ಮ ಭುಜದಲ್ಲಿ ನೆಲಸಲಿ ! ನಿಮ್ಮ ಹೆಸರು ನಮ್ಮ ರಾಜ್ಯದಲ್ಲಿ ಉಳಿಯಲಿ !” ಎಂದು ಹೇಳಿ ಬಾಯಿ ತೆರೆದಳು.

ಅಲ್ಲಿ ಇದ್ದವರೆಲ್ಲರು ಅವಳ ಬಾಯಿಗೆ ಒಂದೊಂದು ತಳುಕು ಹಾಲು ಎರೆದರು. ಕೊನೆಗೆ ಕೋಟಿ ಚೆನ್ನಯರು ತುಳಸಿ ಎಲೆಯನ್ನೂ ಗಂಗೋದಕವನ್ನೂ ಅವಳ ಬಾಯಲ್ಲಿ ಇಟ್ಟು, ಅವಳಿಗೆ ನಮಸ್ಕರಿಸಿದರು. ಬೈದಿತಿಯು ಲೋಕಯಾತ್ರೆಯನ್ನು ಮುಗಿಸಿದಳು, ಅನಂತರ ಜಾತಿವಿಧಿಗೆ ಆನುಸಾರವಾಗಿ ನಡೆಯ ತಕ್ಕ ಸಾವುಸೂತಕಗಳು ನಡೆದುವು.

ಇದಾದ ಕೆಲವು ದಿವಸಗಳ ತರುವಾಯ ಕಿನ್ನಿಚೆನ್ನಯನು ಎಣ್ಮೂರು ಬಲ್ಲಾಳನ ಓಲಗಕ್ಕೆ ಹೋದನು. ಬಲ್ಲಾಳನು ಅವನನ್ನು ಕಂಡು “ಬಾ, ಇಲ್ಲೇ ಮಣೆ ಇದೆ. ನಿನ್ನನ್ನು ಕಾಣದೆ ಹಲವು ದಿನಗಳಾದುವು, ಅಲ್ಲವೆ ?” ಎಂದನು.

ಅದಕ್ಕೆ ಕಿನ್ನಿಚೆನ್ನಯನು “ಹೌದು, ಬುದ್ದಿ, ಕೋಟಿಚೆನ್ನಯರ ಸಾಕಣೆ ತಾಯಿಯು ತೀರಿ ಹೋದುದರಿಂದ, ಅವರನ್ನು ತಮ್ಮ ದರ್ಶನಕ್ಕೆ ಕರೆದುಕೊಂಡು ಬರಲು ಇದುವರೆಗೆ ಸಾಧ್ಯವಾಗಲಿಲ್ಲ” ಎಂದನು,

ಬಲ್ಲಾಳನು “ಹಾಗಾದರೆ, ನಾಳೆ ಮಧ್ಯಾಹ್ನದ ಓಲಗಕ್ಕೆ ಅವರನ್ನು ಕರೆದುಕೊಂಡು ಬಾ”ಎಂದು ಹೇಳಿ, ಅವರಿಬ್ಬರು ಹೇಗೆ ಇದ್ದಾರೆ? ಎಂದು ಕೇಳಿದನು,

ಕಿನ್ನಿಚೆನ್ನಯನು “ನಾನು ಏನು ಎನ್ನಲಿ, ಬುದ್ದಿ? ಕಣ್ಣಿಗೆ ಚೆಲುವರು, ಜನರಿಗೆ ಮರುಳರು ಜನಿಸಿದವರಲ್ಲಿ ಇಲ್ಲ, ಇನ್ನು ಜನಿಸಲಿಕ್ಕಿಲ್ಲ, ಅವರಿದ್ದ ರಾಜ್ಯದಲ್ಲಿ ಒಂದು ಊರು ಉಳಿಸಬಹುದು, ಒಂದು ಊರು ಅಳಿಸಬಹುದು” ಎಂದು ಅವರನ್ನು ಕೊಂಡಾಡಿದನು,

“ಹಾಗಾದರೆ ಅವರನ್ನು ನಾಳೆ ನಡುಹಗಲ ಓಲಗಕ್ಕೆ ಕರೆದುಕೊಂಡು ಬಾ” ಎಂದು ಹೇಳಿ, ಬಲ್ಲಾಳನು ಒಳಕ್ಕೆ ಹೋದನು.

ಕಿನ್ನಿಚೆನ್ನಯನು ಬೀಡಿನಿಂದ ಇಳಿದು ಕೋಟಿಚೆನ್ನಯರಿದ್ದಲ್ಲಿಗೆ ಹೋಗಿ, ಮರುದಿನ ಬಲ್ಲಾಳರ ಓಲಗಕ್ಕೆ ಹೋಗುವುದಾಗಿ ನಿಶ್ಚಯ ಮಾಡಿದನು,