ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

46

ಕೋಟಿ ಚೆನ್ನಯ

ಎಣ್ಮೂರಿನ ದೇವಬಲ್ಲಾಳನು ಪಡುಮಲೆಯ ಪೆರುಮಾಳ ಬಲ್ಲಾಳನಷ್ಟು ರಣಶೂರನೂ ಅಲ್ಲ, ಪಂಜದ ಕೇಮರ ಬಲ್ಲಾಳನಷ್ಟು ರಣಭೀರುವೂ ಅಲ್ಲ , ಆತನು ಪೆರುಮಾಳನಿಗಿಂತ ಸಾಧುವಾಗಿದ್ದನು, ಕೇಮರನಿಗಿಂತ ಬುದ್ದಿವಂತನಾಗಿದ್ದನು, ಈ ಮೂವರಲ್ಲಿ ಅತ್ಯಧಿಕ ಧರ್ಮಬುದ್ದಿಯು ಇವನಲ್ಲಿ ಇತ್ತು, ಆತನು ಅಧರ್ಮ, ದಾರಿದ್ರ್ಯ, ರೋಗ, ಅಂತಃಕಲಹ ಇವೇ ಒಂದು ರಾಜ್ಯದ ತಿರುಳನ್ನು ತಿನ್ನುವ ಹುಳುಗಳೆಂದು ಆಗಾಗ ಹೇಳುತಿದ್ದನು. ಆತನ ಹೆಸರು ತುಳುದೇಶದ ಚೌಟ ಬಂಗರು ಮನೆತನಗಳಲ್ಲಿ ಮಾತ್ರವಲ್ಲ, ಇಕ್ಕೇರಿಯ ಅರಮನೆಯ ವರೆಗೆ ಹೋಗಿತ್ತು. ಎಂದಿನಿಂದ ಇಕ್ಕೇರಿಯವರು ಇವನ ಹೆಸರನ್ನು ಕೊಂಡಾಡಹತ್ತಿದರೋ ಅಂದಿನಿಂದ ಇವನ ನೆರೆಕರೆಯ ಬಲ್ಲಾಳರು ಇವನನ್ನು ಹಳಿದು, ಹೀಯಾಳಿಸಿ, ಹಗೆಮಾಡತೊಡಗಿದರು. ಹೀಗೆ ಹಗೆಮಾಡಿ ಇವನಿಗೆ ಹಾಳು ಬಗೆದವರಲ್ಲಿ ಕೇಮರ ಬಲ್ಲಾಳನೇ ಮೊದಲನೆಯವನು,

ಕೇಮರಬಲ್ಲಾಳನಿಗೆ ದೇವಬಲ್ಲಾಳನಲ್ಲಿದ್ದ ಹೊಟ್ಟೆಕಿಚ್ಚು ಆ ಚೆಂದುಗಿಡಿಯ ದುರಾಲೋಚನೆಯ ಗಾಳಿಯಿಂದ ಭುಗಿಲೆಂದು ಹೊತ್ತಿತು, ಅವನು ತನಗೆ ಪಂಜದ ಪಟ್ಟವಾದ ಕೆಲವು ವರ್ಷಗಳಲ್ಲಿಯೇ ದೇವಬಲ್ಲಾಳನ ಸೀಮೆಯ ಎಲ್ಲೆಯಲ್ಲಿದ್ದ ಜನಗಳನ್ನು ಕಾಡತೊಡಗಿದನು. ಕೇಮರಬಲ್ಲಾಳನ ಉದ್ಧಟತನದ ಮುಂದೆ ದೇವಬಲ್ಲಾಳನ ಸಂಧಿಸಾಮಗಳು ನಡೆಯಲಿಲ್ಲ. ಬರಬರುತ್ತಾ ದೇವಬಲ್ಲಾಳನ ಸೀಮೆಯು ಮುಂಜಾನೆಯ ನೆರಳಂತೆ ಗಿಡ್ಡವಾಗುತ್ತ ಬಂತು, ಕೇಮರಬಲ್ಲಾಳನ ಸೀಮೆಯು ಸಂಜೆಯ ನೆರಳಂತೆ ಉದ್ದವಾಗುತ್ತ ಹೋಯಿತು, ತನ್ನ ಕೈಯಿಂದ ಅನ್ಯಾಯವಾಗಿ ಕಿತ್ತು ಬಿಟ್ಟ ತನ್ನ ಸೀಮೆಯ ಭಾಗವನ್ನು ಪರಸಹಾಯದಿಂದಲಾದರೂ ವಶಮಾಡಿಕೊಳ್ಳಬೇಕೆಂದು ದೇವಬಲ್ಲಾಳನು ಸಮಯ ಕಾಯುತಿದ್ದನು. ಆ ಲೋಕೈಕ ವೀರರಾದ ಕೋಟಿಚೆನ್ನಯರ ಭುಜಬಲದಿಂದ ತನ್ನ ರಾಜ್ಯವು ಮರಳಿ ತಲೆ ಎತ್ತುವಂತೆ ಮಾಡಬೇಕೆಂದು ಬಗೆದು ಅವರನ್ನು ಸತ್ಕಾರಪೂರ್ವಕವಾಗಿ ಓಲಗದಲ್ಲಿ ಕಾಣುವುದಕ್ಕೆ ಆತನು ಎಲ್ಲವನ್ನು ಅಣಿ ಮಾಡಿದ್ದನು.