ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಯ್ಯನೂರು ಗುತ್ತು

47

ಮರುದಿನ ಮಧ್ಯಾಹ್ನದಲ್ಲಿ ಕೋಟಿ ಚೆನ್ನಯರು ಎಣ್ಮೂರಿನ ಕಿನ್ನಿಚೆನ್ನಯನನ್ನು ಅನುಸರಿಸಿ, ತಾಯಿಯ ಸಂಗಾತದ ಮಕ್ಕಳಂತೆಯೂ, ಹೇಟೆಯ ಮಗ್ಗುಲಲ್ಲಿನ ಕೋಳಿ ಮರಿಗಳಂತೆಯೂ, ಸೂಜಿಯ ಹಿಂದುಗಡೆಯ ನೂಲೆಳೆಗಳಂತೆಯೂ ಬೀಡಿಗೆ ಹೋದರು. ಎಣ್ಮೂರು ಬಲ್ಲಾಳನು ಅವರನ್ನು ಸಕಲ ಸಂಭ್ರಮದಿಂದ ಕಂಡು, ಓಲಗಶಾಲೆಗೆ ಕರೆದುಕೊಂಡು ಬಂದು, ಯೋಗಕ್ಷೇಮವನ್ನು ವಿಚಾರಿಸಿ, ಅವರ ಪೂರ್ವ ವೃತ್ತಾಂತವನ್ನು ಕೇಳಿ, ತನ್ನ ರಾಜ್ಯದಲ್ಲಿ ಅವರು ಸುಖವಾಗಿ ಸಹಸ್ರಕಾಲ ಇರಬೇಕೆಂಬದಾಗಿ ಸೂಚಿಸಿದನು.

ಆಗ ಕಿನ್ನಿಚೆನ್ನಯನು “ಬುದ್ದಿ, ನಮಗೆ ಬೇಕಾದವರು ಬೀಡಿನಿಂದ ದೂರವಾಗಿ ಇರಬಾರದಷ್ಟೆ. ಇಂಥ ಜಾಗವನ್ನೇ ಇವರಿಗೆ ಕೊಡಿಸಬೇಕೆಂಬುದಕ್ಕೆ ನನಗೆ ಅಪ್ಪಣೆಯಾಗಲಿ!”

ದೇವಬಲ್ಲಾಳನು “ಬಂಟರೇ, ನಿಮಗೆ ನಮ್ಮ ರಾಜ್ಯದಲ್ಲಿ ಯಾವ ಸ್ಥಳ ಬೇಕು? ಬಿಲ್ಲರ ನಟ್ಟಿಲ್ಲು ಆದೀತೇ?!” ಎಂದು ಕೇಳಿದನು.

ಕೋಟಿ- ಬುದ್ಧಿ, ಅದನ್ನು ಕೊಟ್ಟರೆ ಜಾತಿಗೆ ಜಾತಿ ಹಗೆ ಎಂಬಂತೆ ನಮ್ಮವರ ವಿರೋಧವೇ ನಮಗೆ ಬರಬಹುದು.”

ದೇವಬಲ್ಲಾಳ- ಒಕ್ಕಲಿಗನ ಗುತ್ತು ಬಾಳಿಕೆ ಕೊಟ್ಟರೆ-

ಕೋಟಿ – “ನಾಯಿಗೂ ಬೆಕ್ಕಿಗೂ ಇದ್ದ ವೈರದಂತೆ”

ದೇವಬಲ್ಲಾಳ- “ಬ್ರಾಹ್ಮಣರ ಬೆರಂಪಳ್ಳಿ ಕೊಡುತ್ತೇನೆ, ಆಗದೋ?”

ಕೋಟಿ- “ಆಗಲಿಕ್ಕೆ ಆಗಬಹುದು,

ಅದನ್ನು ತೆಗೆದುಕೊಂಡರೆ ನಾಗರ ಹಾವಿಗೂ ಕನ್ನಡಿ ಹಾವಿಗೂ ಒಂದೇ ಬಿಲದಲ್ಲಿ ಇಟ್ಟಂತಾದೀತು.”

ದೇವ ಬಲ್ಲಾಳ– “ಹಾಗಾದರೆ, ನೀವೇ ಒಂದನ್ನು ಆಯ್ದು ಕೊಳ್ಳಿ”

ತತ್ಕ್ಷಣವೇ ಚೆನ್ನಯನು “ಅಣ್ಣಾ, ಪಡುಮಲೆಯ ಜೋಯಿಸರು ಹೇಳಿದ್ದು ನನಗೆ ನೆನಪಿದೆ. ಆ ಐನೂರು ಬೈಲು ಇಲ್ಲೇ ಅಲ್ಲವೇ ? ” ಎಂದನು.

ಕೋಟಿಯು ಆ ಮಾತನ್ನು ಕೇಳಿ “ಬುದ್ಧಿ, ಐನೂರು ಗುತ್ತನ್ನು ಕರುಣಿಸಿರಿ” ಎಂದನು.