ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

52

ಕೋಟಿ ಚೆನ್ನಯ

ನಾನಾ ಜಾತಿಯ ಬೇಟೆನಾಯಿಗಳನ್ನು ಒದಗಿಸಿಕೊಂಡದ್ದಾಯಿತು, ತರುವಾಯ ಒಂದು ದಿನ ಬೆಳಗ್ಗೆ ಜನಗಳ ಗುಂಪೊಂದು ಬಿಲ್ಲು ಬಾಣ ಗಳನ್ನೂ ಕತ್ತಿ ಈಟಿಗಳನ್ನೂ ಕೊಂಬುಕಹಳೆಗಳನ್ನೂ ಹಿಡಿದುಕೊಂಡು, ನಾಯಿಗಳ ಸಮೇತ ತುಪ್ಪೆ ಕಲ್ಲು ಕಾಡನ್ನು ನುಗ್ಗಿ ತು.

ಆ ಬೇಟೆಗಾರರು ಬಹಳ ಹೊತ್ತಿನ ತನಕ ಕಾಡು ಎಬ್ಬಿದರೂ ಬೂದುಗಣ್ಣಿನ ಮೊಲ, ಪಚ್ಚೆ ಕಾಲಿನ ಜಿಂಕೆ, ಕೊಬ್ಬಿದ ಹಂದಿ, ಕುಟುರುವ ಕುಡುಮುಲು ಹಕ್ಕಿ- ಯಾವುದೊಂದೂ ಏಳಲಿಲ್ಲ , ತರುವಾಯ ಅವರು ಬಲ್ಲೆ ಇದ್ದಲ್ಲಿ ಕಲ್ಲು, ಕಂಡಿ ಇದ್ದಲ್ಲಿ ಜನ, ಮೈದಾನು ಇದ್ದಲ್ಲಿ ನಾಯಿ- ಹೀಗೆ ಎಳ್ಳೆಸಿಕೊಂಡು ಕಾಡಿಗೆ ಮುತ್ತಿಗೆ ಹಾಕಿದರು. ಸುಮಾರು ಎರಡು ತಾಸುಗಳ ವರೆಗೆ ಸುಮ್ಮನೆ ಕಾದು ನಿಂತರು. ಯಾವುದೊಂದಾದರೂ ನೆಲದ ಮೇಲೆ ಓಡಿದಂತೆ, ಇಲ್ಲವೆ ಮರದ ಮೇಲೆ ಹರಿದಂತೆ, ಇಲ್ಲವೆ ಆಕಾಶದಲ್ಲಿ ಹಾರಿದಂತೆ ತೋರಲಿಲ್ಲ. ಅನಂತರ ಒಂದು ಕಡೆಯಲ್ಲಿ ನೆಲಹಿಡಿದು ಎಲೆಯವರೆಗೆ ಎಬ್ಬುವಾಗ ಆಳುದ್ದ ಕಪ್ಪು ತೋರಿತು. 'ಆನೆಗೆ ಕಿರಿದು, ಕುದುರೆಗೆ ಹಿರಿದು' ಎಂದು ಒಬ್ಬನು ಮರಗಳ ಹಿಂದಿನಿಂದ ಮತ್ತೊಬ್ಬನಿಗೆ ಕೈಸನ್ನೆ ಮಾಡಿದನು. ಒಡನೆ ಅದು ದಡಕ್ಕೆಂದು ಎದ್ದು, ಡುರುಂಕ್ಕಂದು ಕೂಗಿ, ಮುಸುಡು ಆಡಿಸಿದ್ದನ್ನು ಕಂಡು ಚೆನ್ನಯನು 'ಇದಿರಿಗೆ ಬಂದದ್ದು ಎಂಥಾದ್ದು, ಕೋಟಿ ?” ಎಂದು ಕೇಳಿದನು.

ಅಷ್ಟರಲ್ಲಿ ಆ ಕಾಡುಹಂದಿಯು ನವಿರುಗಳನ್ನು ನಿಗುರಿಸಿ, ಮಳೆಗಾಲದ ಗುಡುಗಿನಂತೆ ಮೊರೆಯುತ್ತ, ಮಿಂಚಿನಂತೆ ತನ್ನ ಕೋರೆ ಹಲ್ಲುಗಳನ್ನು ಜಳಪಿಸುತ್ತ ಗಾಳಿಯ ವೇಗದಿಂದ ಕೋಟಿಗೆ ಎದುರಾಗಿ ಬರುತಿತ್ತು. “ಓಡೋಣವೇ ಬಂಟರ ಮಾನದ ಮೇಲೆ ಬರುತ್ತದೆ, ನಿಲ್ಲೋಣವೇ ಪ್ರಾಣದ ಮೇಲೆ ಬರುತ್ತದೆ” – ಈ ಪ್ರಕಾರವಾಗಿ ಕೋಟಿಯ ಮನಸ್ಸು ತೂಗುತ್ತಲಿತ್ತು, ಅರೆನಿಮಿಷದಲ್ಲಿ ಅವನ ಬಲಗೈಯ ಬಾಣವು ಎಡಗೈಯ ಬಿಲ್ಲನ್ನು ಬಿಟ್ಟು ಹಾರಿ, ಹಂದಿಯ ಮುಖದಲ್ಲಿ ಮುರುಟಿಕೊಂಡು ತಿಕದಲ್ಲಿ ಹೊರಟಿತು. ಹಂದಿಯ ಒರಳಾಟವು ನಾಕಲೋಕಕ್ಕೆ ಮುಟ್ಟಿತು; ಹೊರಳಾಟವು ನಾಗಲೋಕಕ್ಕೆ ಹೋಯಿತು. 'ಹಂದಿಯನ್ನು ಅಣ್ಣನು ಕೊಂದನೊ, ಅಣ್ಣನನ್ನು ಹಂದಿ ಕೊಂದಿತೆ' ಎಂಬ ಅನುಮಾನದಿಂದ