ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಳ್ಳೆ ಬಿತ್ತು

53

ಚೆನ್ನಯನು ಮುಂದೂಡಿ ಬಂದು ಕೇಳಿದನು, ಕೋಟಿಯು ತನ್ನ ಕೈಬೆರಳಿಂದ ತೋರಿಸಿದನು, ಹುಲ್ಲು ಎಲೆಗಳ ರಾಶಿಯ ಮೇಲೆ ಆನೆಮರಿಯಂತ ಭಯಂಕರವಾಗಿ ಬಿದ್ದಿದ್ದ ದೊಡ್ಡ ಕಾಡುಹಂದಿಯನ್ನು ಚೆನ್ನ ಯನು ತನ್ನ ಎಡಗಾಲಿಂದ ಮೆಟ್ಟಿ ದನು. ಹಂದಿಯು ಮುಚ್ಚಿದ್ದ ಕಣ್ಣನ್ನು ಅರೆತೆರೆದು, ಬಾಲವನ್ನು ಪಟ್ಟನೆ ಅಲುಗಿಸಿ, ಮೈ ಕೊಡಹಿ, ಅರೆನಿಮಿಷದಲ್ಲಿ ಎದ್ದೋಡಿತು, ಚೆನ್ನಯನು ಅದನ್ನು ಬೆನ್ನಟ್ಟಿ ಕೊಂಡು ಹೋದನು. ಅವನ ಹಿಂದುಗಡೆ ಉಳಿದವರೆಲ್ಲರು ಓಡತೊಡಗಿದರು.

ಹಂದಿಯು ಓಡುತ್ತ ಓಡುತ್ತ ತುಪ್ಪೆ ಕಲ್ಲ ಮಲೆಯನ್ನು ದಾಟ, ಪಂಜ ಸೀಮೆಯ ಅಡ್ಕಕ್ಕೆ ಹೋಗಿ, ಫಕ್ಕನೆ ತಿರುಗಿ, ಚೆನ್ನಯನಿಗೆ ಇದಿರಾಗಿ ಬಂತು. ಚೆನ್ನಯನು ತನ್ನ ಉರವಣೆಯನ್ನು ನಿಲ್ಲಿಸಿ, ಕಣ್ಣ ಮುಚ್ಚುವಷ್ಟರಲ್ಲಿ ತನ್ನಎರಡು ಕತ್ತಿಗಳನ್ನು ಮುಂದಕ್ಕೆ ಹಿಡಿದು, ಹಂದಿಗೆ ಮುಖವಾಗಿ ನಿಂತನು. ಹಾಯ್ದು ಬರುವ ಹಂದಿಯ ಎರಡು ಪಕ್ಷಗಳು ಚೆನ್ನಯನು ಒತ್ತಿಹಿಡಿದ ಕೈಗಳಿಂದ ಸಿಳ್ಳನೆ ಸೀಳಲ್ಪಟ್ಟು, ಆ ಹಂದಿಯು ಮುಂದರಿಸಲಾರದೆ ಅವನ ಕೈಬಳಿಯಲ್ಲಿಯೇ ರಕ್ತದ ಹೊನಲಿನಲ್ಲಿ ಹೊರಳಾಡಿ ಪ್ರಾಣಬಿಟ್ಟಿತು. ಚೆನ್ನಯನ ಎರಡು ಕೈಗಳ ಎಲುಬುಗಳು ಮಾತ್ರ ತೂಗುತಿದ್ದುವು; ಹಂದಿಯ ತಿವಿತ ದಿಂದ ಅವುಗಳಲ್ಲಿನ ಮಾಂಸವೂ ರಕ್ತವೂ ಕೈಬಿಟ್ಟು ಹೋಗಿದ್ದುವು.

ಹಂದಿಯು ಪ್ರಾಣಬಿಟ್ಟ ಹೊತ್ತಿಗೆ ಸರಿಯಾಗಿ ಪಂಜದ ಸೀಮೆಯವರು ಅಲ್ಲಿಗೆ ಬಂದು ಮುಟ್ಟಿದರು. ಬೇಟೆಗಾರರ ಬೆಳಗಿನ ಕೋಲಾಹಲವನ್ನು ಕೇಳಿ ಚೆಂದುಗಿಡಿಯು ಅವರನ್ನು ಮೊದಲೇ ಕಳುಹಿಸಿದ್ದರೂ ಎಣ್ಮೂರಿನವರು ಯಾವ ಕಾಡನ್ನು, ಯಾವ ಕುಂಜವನ್ನು ಎಬ್ಬುತ್ತಾರೆಂದು ತಿಳಿಯದೆ, ಅವರು ಸುತ್ತಾಡಿ ಸುತ್ತಾಡಿ ಕಟ್ಟಕಡೆಗೆ ಇಲ್ಲಿಗೆ ಬಂದು ಕೂಡಿದರು,

ಅವರ ಕಡೆಯ ಮುಖ್ಯಸ್ಥನೊಬ್ಬನು “ನಮ್ಮ ಗಡಿಯಲ್ಲಿ ಬಿದ್ದುದನ್ನು ನಾವು ಕೊಡಲಿಕ್ಕಿಲ್ಲ. ಹಂದಿಯ ತಲೆಬಾಲಗಳನ್ನು ಕೊಟ್ಟು ಹೋಗಬೇಕು, ಇಲ್ಲದಿದ್ದರೆ ನಾವು ಹಂದಿಯನ್ನು ಒಯ್ಯುತ್ತೇವೆ” ಎಂದು ಹೇಳಿ, ಗಟ್ಟಿಯಾದ ಬೀಳುಗಳನ್ನು ತರಿಸಿ, ಹಂದಿಯ ಸೊಂಟಕ್ಕೆ ಸಿಕ್ಕಿಸಿ, ತನ್ನ ಕಡೆಯ ಆಳುಗಳಿಂದ ಅದನ್ನು ಎಳೆಯಿಸಿದನು,