ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓಲೆ

55

ಕಳೆದರೂ ಯುದ್ಧಸಿದ್ಧತೆಯು ಆಗಲಿಲ್ಲ. ಅದಕ್ಕಾಗಿ ಪೆರುಮಾಳು ಬಲ್ಲಾಳನು ಇರುಳು ನಿದ್ದೆಯಿಂದ ಎದ್ದೆದ್ದು ತವಕಿಸುತ್ತಿದ್ದನು. ಆತನು ಪಂಜದ ಮುನ್ನೂರು ಆಳುಗಳ ಮೋರೆಗೆ ಮಸಿಯಾದ ವಾರ್ತೆಯನ್ನು ಕೇಳಿ, ಅದಕ್ಕೆ ತಕ್ಕದಾದ ಪ್ರತಿಕಾರವನ್ನು ಎಣ್ಮೂರು ಬಲ್ಲಾಳನಿಗೆ ಮಾಡಬೇಕೆಂದು ಚೆಂದುಗಿಡಿಗೆ ಸೂಚಿಸಿದನು. ಹೀಗೆ ಪೆರುಮಾಳು ಬಲ್ಲಾಳನು ಕೊಟ್ಟ ಧೈರ್ಯದಿಂದ ಉಬ್ಬಿ ಚಂದುಗಿಡಿಯು ಪರಿಹಾಸ್ಯಕರವಾದ ಒಂದು ಬಗೆಯ ಒಕ್ಕಣೆಯ ಓಲೆಯನ್ನು ಎಣ್ಮೂರಿಗೆ ಕಳುಹಿಸಿದನು.

ತುಲಾಸಂಕ್ರಾಂತಿಯು ಕಳೆದ ಏಳನೆಯ ದಿನ ಈ ಪತ್ರವು ಎಣ್ಮೂರಿಗೆ ಬಂದು ಮುಟ್ಟಿತು. ದೇವಬಲ್ಲಾಳನು ಬೀಡಿನಲ್ಲಿ ಓಲಗವಾಗಿದ್ದನು ಎಡದ ಮೈಯಲ್ಲಿ ಕಿನ್ನಿಚೆನ್ನಯ, ಬಲದಮೈಯಲ್ಲಿ ಕೋಟಿಚೆನ್ನಯ, ಮುಂದುಗಡೆಯಲ್ಲಿ ಹದಿನೆಂಟು ಪೇಟೆಯವರು, ಹಿಂದುಗಡೆಯಲ್ಲಿ ಚಾಮರಗಳನ್ನು ಬೀಸುವ ಕನ್ನೆಯರು, ಹೀಗೆ ಸಕಲ ವಿಲಾಸವೈಭವಗಳ ಒಡ್ಡೋಲಗದಲ್ಲಿ ಒಪ್ಪುತ್ತಿರುವ ಎಲ್ಲೂರು ದೇವಬಲ್ಲಾಳನ ಸಮಕ್ಷದಲ್ಲಿ ಪಂಜದ ಹರಿಕಾರನು ತಂದಿದ್ದ ಓಲೆಯನ್ನು ಬೀಡಿನ ಸೇನಬೊವನು ಓದಿದನು, ಅದೆಂತಂದರೆ--

ಶ್ರೀಮತ್ತು ಪಂಜ ಬೀಡಿನ ಬಲ್ಲಾಳ ಪಟ್ಟದಲ್ಲಿ ಅಭಿಷಿಕ್ತರಾದ ಪಂಜ ಸಂಸ್ಥಾನದ ಶ್ರೀ ಕೇಮರ ಬಲ್ಲಾಳರು ಎಣ್ಮೂರು ಬೀಡಿನ ದೇವಬಲ್ಲಾಳರಿಗೆ ಬರೆಯಿಸಿದ ಪತ್ರವೇನೆಂದರೆ - ಸ್ವಸ್ತಿ ಶ್ರೀ:ಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬೧೭ನೆಯ ಶ್ರೀಮುಖ ಸಂವತ್ಸರದ ತುಲಾ ಮಾಸ ದಿನ ೨೫ರ ವರೆಗೆ ಉಭಯ ಕುಶಲೋಪರಿ, ತರುವಾಯ ನಮ್ಮ ನಿಮ್ಮ ಉಭಯ ರಾಜ್ಯಗಳನ್ನು ವಿಂಗಡಿಸಲಿಕ್ಕಾಗಿ ಪ್ರಾಕಾರಭ್ಯ ಹಾಕಿದ್ದ ಗಡಿಕಲ್ಲುಗಳನ್ನು ನಿಮ್ಮ ಕಡೆಯ ದುರ್ಮನುಷ್ಯರು ಕಿತ್ತು ಹಾಕಿ ನಮ್ಮ ಸಂಸ್ಥಾನದ ಸರಹದ್ದುಗಳನ್ನು ಬೇರ್ಪಡಿಸಿದ್ದಾರೆಂಬದಾಗಿಯೂ, ನಮ್ಮ ಅಪ್ಪಣೆ ಇಲ್ಲದೆ ನಮ್ಮ ಸಂಸ್ತಾನಕ್ಕೆ ಸೇರಿದ್ದ ಬೈಲುಭೂಮಿಯನ್ನು ಬಲಕಾಯಿಸಿದ್ದಾರೆಂಬುದಾಗಿಯೂ ಇತ್ತಲಾಗೆ ನಮ್ಮ ಕಾಡನ್ನು ಒಳನುಗ್ಗಿ ನನ್ನೊಡನೆ ಹೇಳದೆ ಕೇಳದೆ ಹಂದಿಯನ್ನು ಬೇಟೆಯಾಡಿ ನಮ್ಮ ಕಡೆಯವರ ಮಾತನ್ನು ಮೀರಿ ಅದನ್ನು ಎಳೆದುಕೊಂಡು ಹೋಗಿದ್ದಾರೆಂಬದಾಗಿಯೂ ನಮ್ಮ ಚಿತ್ತಕ್ಕೆ ಬಂದುದರಿಂದ, ಈ ವಿವಾದಾಂಶಗಳು ಸರಿಯಾಗಿ ಇತ್ಯರ್ಥವಾಗುವುದಕ್ಕೆ ಮುಂಚಿತವಾಗಿ ನಮ್ಮ ಕಾಡಿನಲ್ಲಿ ಕೊಂದಿದ್ದ ಹಂದಿಯ ತಲೆ ಬಾಲಗಳನ್ನು ಈ ಓಲೆ ತರುವವರ ಕೈಯಲ್ಲಿ ನಮ್ಮ ಸಮಾಧಾನಕ್ಕಾಗಿ ಕೂಡಲೆ ಕಳುಹಿಸಿಕೊಡತಕ್ಕದ್ದು; ಅದನ್ನು ಕಳುಹಿಸದ ಕಾಲಕ್ಕೆ ಆ ಹಂದಿಯನ್ನು ಕೊಂದವರನ್ನು ನಮಗೆ ಒಪ್ಪಿಸಿಕೊಡತಕ್ಕದ್ದು; ಅದು ಆಗದಿದ್ದರೆ ನೀವು ಗಂಡುಗಲಿಯಂತೆ