ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೃಶ್ಚಿಕಮಾಸ

57

ನಾವು ಹಗೆಗಳನ್ನು ಎದುರ್ಗೊಂಡು ರಣರಂಗದಲ್ಲಿ ಅವರ ತಲೆಗಳನ್ನು ಚೆಂಡಾಡಿ, ಇಲ್ಲವೆ ನಮ್ಮ ಮೈ ರಕ್ತವನ್ನು ಚೆಲ್ಲಾಡಿ, ತಮ್ಮ ಋಣವನ್ನು ತೀರಿಸಬೇಕೆಂದು ಇದ್ದೇವೆ' ಎಂದು ಗಟ್ಟಿಯಾಗಿ ಹೇಳಿದನು.

ಈ ಮಾತುಗಳ ಗಾಳಿಯು ಬೀಸುತ್ತಲೇ ಅಲ್ಲಿದ್ದವರ ಗರ್ವೋದ್ರೇಕದಿಂದಲೂ ಭುಜಗಳ ಚಪ್ಪಾಳೆಯಿಂದಲೂ ಆ ಆಸ್ಥಾನವು ಕದಡಿದಂತಾಯಿತು. “ಸಿಟ್ಟಿ ಬೀಸುವ ಓಲೆ !' 'ಸುಡುಗಾಡು ಓಲೆ!' 'ಸೊಕ್ಕಿನ ಓಲೆ ! ಬಿರುನುಡಿಗಳು ಬಾಯಿಂದ ಬಾಯಿಗೆ ಹಾರಿದುವು. ಒಬ್ಬಿಬ್ಬರು ಆ ಓಲೆಕಾರನ ಮೇಲೆ ಕೈ ಮಾಡುವುದಕ್ಕೆ ಹೋದರು. ಕೋಟಿಯು ಬೇಡಬೇಡವೆಂದು ತಡಿಸಿದರೂ, ಬೀಡಿನ ಮಂಜುಪೆರ್ಗಡೆ ಎಂಬವನು ಆ ಓಲೆಯ ಕಡೆ ಕುಡಿ ಕತ್ತರಿಸಿ ಅದನ್ನು ಓಲೆಕಾರನ ಕೊರಳಿಗೆ ಕಟ್ಟಿ, ಅವನನ್ನು ಬೈದು ಭಂಗಿಸಿ, ಚಾವಡಿಯಿಂದ ಹೊರಕ್ಕೆ ದೊಬ್ಬಿ, ಅವಮಾನ ಮಾಡಿ ಕಳುಹಿಸಿಬಿಟ್ಟನು,

ಹೀಗೆ ಮೋರೆಗೆ ಮಂಗಳಾರತಿಯಾಗಿ ಪಂಜಕ್ಕೆ ಹಿಂದಿರಳಿದ ತನ್ನ ಕಡೆಯ ಹರಿಕಾರನನ್ನು ಕಂಡು ಚೆ೦ದುಗಿಡಿಯು ಅತ್ಯಂತ ಕೋಪಾಟೋಪದಿಂದ ಕೇಮರಬಲ್ಲಾಳನ ಬಳಿಗೆ ಹೋಗಿ, ಎಣ್ಮೂರಿನ ಮೇಲೆ ದಾಳಿವರಿದು ಹೊರಡುವುದಕ್ಕೆ ಎಲ್ಲವು ಸಿದ್ದವಾಗಿರಬೇಕೆಂದು ಅಪ್ಪಣೆ ಕೊಡಿಸಿ, ತಾನು ಸ್ವತಃ ಪಡುಮಲೆಯವರೆಗೆ ತೀವ್ರಗತಿಯಿಂದ ಹೋಗಿ, ತೂಕಡಿಸುತ್ತಲಿದ್ದ ಪೆರುಮಾಳು ಬಲ್ಲಾಳನನ್ನು ಎಚ್ಚರಿಸಿ, ಸೇನಾಸಮೇತನಾಗಿ ಪಂಜದವರ ಪಕ್ಷವನ್ನು ಸೇರಿಕೊಳ್ಳುವಂತೆ ಆತನ ಸಹಾಯವನ್ನು ಅಪೇಕ್ಷಿಸಿದನು,

ತುಲಾಮಾಸವು ಕಳೆದು ವೃಶ್ಚಿಕಮಾಸವು ತಲೆದೋರಿ ಹತ್ತು ದಿನಗಳು ದಾಟಿ ಹೋದುವು. ಗದ್ದೆಗಳಲ್ಲಿದ್ದ ಪೈರು ಒಕ್ಕಲಿಗನ ಅಂಗಳದಲ್ಲಿ ಮೊದಲೇ ಭದ್ರವಾಗಿ ಸೇರಿಕೊಂಡಿತ್ತು. ನೀರಿದ್ದಲ್ಲಿ ಸುಗ್ಗಿಯ ಬೆಳೆಯು ಒಂದೂವರೆ ಗೇಣು ಮೇಲೆ ಬಂದಿತ್ತು. ಹಿಂಗಾರು ಮಳೆಯು ಬಾರದೆ ಆಕಾಶವು ಶುಭ್ರವಾಗಿತ್ತು. ಮಳೆಗಾಲದಲ್ಲಿ ಸ್ತಬ್ದವಾಗಿ ಹೋಗುವ ಜನರ ಕ್ರಿಯಾಕಲಾಪಗಳು ಈ ಮೊದಲೇ ಸರಾಗವಾಗಿ ನಡೆಯ ತೊಡಗಿದ್ದು ವು. ಬೆಟ್ಟದ ತೊರೆಗಳಲ್ಲಿ ನೀರು ಇಳಿದಿದ್ದುದರಿಂದ, ಹೇರಾಟದ ಎತ್ತುಗಳು ಗಟ್ಟದ ಸರಕನ್ನು ತುಳುನಾಡಿಗೆ ಹೊತ್ತುಕೊಂಡು ಬರುವುದಕ್ಕೆ