ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ii

ಮುನ್ನುಡಿ

ಹೆಕ್ಕಿಕೊಂಡ ನಂತರ ಇದೇ ಕಥೆಯ ಇಂಗ್ಲಿಷ್ ಭಾಷಾಂತರವನ್ನು 'ಇಂಡಿಯನ್ ಎಂಟಕ್ವೆರಿ ' ಎಂಬ ಇಂಗ್ಲಿಷ್ ಮಾಸಪತ್ರಿಕೆಯ ಹಳೆಯ ಸಂಚಿಕೆಯಲ್ಲಿ ಓದಿ, ಇದರ ಮೂಲವು ಡಾಕ್ಟರ್ ಮೊಗ್ಲಿಂಗ್ ಎಂಬವರಿಂದ ಸಂಗ್ರಹಿಸಲ್ಪಟ್ಟ ಪಾಡ್ದೊನೆಳು' ಎಂಬ ಪುಸ್ತಕದಲ್ಲಿದೆ ಎಂದು ತಿಳಿದು, ಆ ಪುಸ್ತಕವನ್ನು ೧೯೦೯ರಲ್ಲಿ ಸಂಪಾದಿಸಿಕೊಂಡೆನು.

ಡಾಕ್ಟರ್ ಮೊಗ್ಲಿಂಗರ 'ತುಳು ಪಾಡ್ದೊನೆ'ಯಲ್ಲಿಯೂ ನಾನು ಕೇಳಿದ್ದ ಕೋಟಿ ಚೆನ್ನಯರ 'ಸಂಧಿಯಲ್ಲಿಯೂ' ಮುಖ್ಯವಾದ ಕಥಾಭಾಗವು ಒಂದೇಯಾಗಿದ್ದರೂ, ಅಲ್ಲಲ್ಲಿ ಅನೇಕ ವ್ಯತ್ಯಾಸಗಳು ಕಂಡು ಬಂದುದರಿಂದ, ಕಥೆಯ ರಂಗಸ್ಥಳಗಳಾಗಿದ್ದ ಪಂಜಪಡುಮಲೆ ಗ್ರಾಮಗಳನ್ನು ಸಂಚರಿಸಿ, ಅಲ್ಲಿಯ ಭೂತ ಕಟ್ಟು ವವರಿಂದ ಈ ಕಥೆಯ ಬೇರೆ ಬೇರೆ ಪಾಠಾಂತರಗಳನ್ನು ಸಂಗ್ರಹಿಸಿ, ಎಂಟು ವರ್ಷಗಳ ತರುವಾಯ ಎಂದರೆ ೧೯೧೬ರಲ್ಲಿ ಡಾಕ್ಟರ್ ಮೊಗ್ಲಿಂಗರ ತುಳು ಪಾಡ್ದೊನೆಯನ್ನು ನನ್ನ ಸ್ನೇಹಿತರಾದ ರಾ, ರಾ. ಆರ್, ಎಸ್, ಬಾಗಲೋಡಿ ಯವರಿಂದ ಯಥಾವತಿಯಾಗಿ ಕನ್ನಡಿಸಿ, ಕಥೆಯನ್ನು ಪ್ರಕಟಿಸಬೇಕೆಂದು ಯತ್ನಿಸಿದೆನು. “ಇದ್ದದನ್ನು ಇದ್ದ ಹಾಗೆಯೇ ಪ್ರಕಟಿಸಲೋ ಎಂದರೆ, ಕಥಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿರದೆ, ಕಥೆಯ ಸಂವಿಧಾನಕ್ಕೆ ಭಂಗಬರುತ್ತದೆ. ಕಥೆಯನ್ನು ಬೇಕಾದಂತೆ ಪಲ್ಲಟಸಿ ಬರೆಯಲೂ ಎಂದರೆ, ಪುರಾತನ ವಿಗ್ರಹಕ್ಕೆ ಬೊಟ್ಟಿಟ್ಟ ದೋಷವು ಬರುತ್ತದೆ” – ಹೀಗೆಯೇ ಏನು ಮಾಡಬೇಕೆಂದು ನಾನು ಧೃಡಮಾಡಲಾರದೆ, ಎಂಟು ವರ್ಷಗಳ ವರೆಗೆ ಕೈಬರಹದ ನನ್ನ ಪ್ರತಿಗಳನ್ನು ಕಟ್ಟ ಇಟ್ಟಿದ್ದೆನು. ಗೆದ್ದಲ ಬಾಯಿಂದ ತಪ್ಪಿಸಿಕೊಂಡ ಆ ಹಳಯ ಕಾಗದಗಳನ್ನು