ಪುಟ:ಕ್ರಾಂತಿ ಕಲ್ಯಾಣ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೯೧

ಅರಸೊತ್ತಿಗೆಯನ್ನು ಆಕ್ರಮಿಸಿಕೊಂಡಿದ್ದರೂ ಮುಂದೊಂದು ದಿನ ಚಾಲುಕ್ಯ ಅರಸರಿಗೆ ಅದನ್ನು ಬಿಟ್ಟುಕೊಡಬೇಕಾಗುವುದು. ರಾಜ್ಯದ ಸಾಮಂತ ಮನ್ನೆಯರು ಬಿಜ್ಜಳನ ರಾಜ್ಯಾಪಹಾರವನ್ನು ಒಳಗೊಳಗೇ ವಿರೋಧಿಸುತ್ತಿದ್ದಾರೆ. ಚಾಲುಕ್ಯ ಅಧಿಕಾರವನ್ನು ಪುನಃ ಪ್ರತಿಷ್ಠಿಸುವ ಸಂಚು ನಡೆಯುತ್ತಿದೆ. ನಾವು ರಾಜಕೀಯದಿಂದ ದೂರವಿದ್ದರೂ ಈ ಒಳಗುದಿ ವಿಪ್ಲವಗಳು ಶರಣರ ಅಭ್ಯುದಯಕ್ಕೆ ಸಹಾಯಕವಾಗುವಂತೆ ನಡೆದುಕೊಳ್ಳಬೇಕು. ಜಗದೇಕಮಲ್ಲರಸರು ನಡೆಸಲೆಳಸಿರುವ ಈ ಜಂಗಮ ದಾಸೋಹ, ಶರಣಧರ್ಮದ ಬಗೆಗೆ ಅವರಲ್ಲಿ ಅಂಕುರಿಸಿರುವ ಆಸಕ್ತಿ, ಇವು ನಮಗೆ ಶೂಭಸೂಚಕಗಳು. ದಾಸೋಹದ ಪೂರ್ವಸಿದ್ಧತೆಗಾಗಿ ಈ ದಿನವೇ ನೀವು ಮಹಮನೆಯ ಇಬ್ಬರು ಕಾರ್ಯಕರ್ತರನ್ನು ರಾಜಗೃಹಕ್ಕೆ ಕಳುಹಿಸಿದರೆ ಒಳ್ಳೆಯದು."

"ಅದಕ್ಕೆ ಶರಣರ ಅನುಮತಿ ಅಗತ್ಯವಲ್ಲವೆ?"

"ಮೊದಲು ಕಾರ್ಯರಂಭ ಮಾಡಿ ಆಮೇಲೆ ಅನುಮತಿ ಕೇಳಬಹುದು. ಶರಣರ ಒಪ್ಪಿಗೆ ದೊರಕುವಂತೆ ನಾನು ನೋಡಿಕೊಳ್ಳುತ್ತೇನೆ." ಮಾಚಿದೇವರ ಭರವಸೆಯ ನುಡಿಗಳಿಂದ ಚೆನ್ನಬಸವಣ್ಣನವರಿಗೆ ಸಮಾಧಾನ ಮೂಡಿತು.

"ಇನ್ನು ಧರ್ಮೋಪದೇಶಕನ ವಿಚಾರ. ಜಗದೇಕಮಲ್ಲರಸರ ಮನವರಿತು ಸಮಯೋಚಿತವಾಗಿ ನಡೆಯಬಲ್ಲ ತತ್ವದರ್ಶಿ ಜಂಗಮನನ್ನು ನಾವೆಲ್ಲಿ ಹುಡುಕುವುದು? ರಾಜಗೃಹದಲ್ಲಿ ಚಾಲುಕ್ಯ ಅರಸನೊಡನೆ ಬಂಧಿಯಾಗಿರಲು ಶರಣರಾರೂ ಒಪ್ಪುವುದಿಲ್ಲ," -ಎಂದು ಅವರು ಉದ್ಗಾರ ತೆಗೆದರು.

"ಅದಕ್ಕೆ ತಕ್ಕವರಿದ್ದಾರೆ. ಡಣ್ಣಾಯಕರು ಯೋಚಿಸಬೇಕಾಗಿಲ್ಲ."

-ಮಾಚಿದೇವರು ಹೇಳಿದರು.

"ಮಹಮನೆಯ ಶರಣರಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ."

"ಅವರು ಮಹಮನೆಯ ಅತಿಥಿಗೃಹದಲ್ಲಿಯೇ ಬಿಡಾರ ಮಾಡಿದ್ದಾರೆ."

"ಯಾರು ಅವರು?" -ಚೆನ್ನಬಸವಣ್ಣನವರು ಕುತೂಹಲದಿಂದ ಕೇಳಿದರು.

"ಬ್ರಹ್ಮೇಂದ್ರ ಶಿವಯೋಗಿ."

"ಆ ಹೆಸರಿನವರೊಬ್ಬರು ಮಹಮನೆಯಲ್ಲಿದ್ದಾರೆಯೆ?"

"ಕಳೆದ ನಾಲ್ಕು ವಾರಗಳಿಂದ ಪ್ರತಿ ಶನಿವಾರ ಅನುಭವಮಂಟಪದಲ್ಲಿ ಅವರ ಪ್ರವಚನ ನಡೆಯುತ್ತಿದೆ. ಮೊದಲೆರಡು ಪ್ರವಚನಗಳನ್ನು ಕೇಳಿ ನೀವೂ ಅವರನ್ನು ಮೆಚ್ಚಿಕೊಂಡಿರಿ."

ಆಗ ಚೆನ್ನಬಸವಣ್ಣನವರಿಗೆ ನೆನಪಾಯಿತು.