ಪುಟ:ಕ್ರಾಂತಿ ಕಲ್ಯಾಣ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೯೩

ಕಟ್ಟಿ ನನ್ನನ್ನು ಕುಣಿಸುತ್ತಿರುವೆ,” ಎಂದು ಬೊಮ್ಮರಸನು ಉತ್ತರ ಕೊಟ್ಟಿದ್ದನು.

“ನಿಮಗೆ ಈ ವೇಷ ಬೇಸರವಾಗಿದ್ದರೆ ಯಾತ್ರೆಯ ನೆವದಿಂದ ಮಹಮನೆಯನ್ನು ಬಿಟ್ಟು ಕಲ್ಯಾಣದ ಸಮೀಪದ ಯಾವುದಾದರೊಂದು ಅರಣ್ಯದಲ್ಲಿ ಕೆಲವು ದಿನಗಳಿದ್ದು ಬರಬಹುದು,” ಎಂದು ಬ್ರಹ್ಮಶಿವನು ಸಲಹೆ ಮಾಡಿದನು.

ಆದರೆ ಸದ್ಯದಲ್ಲಿ ಅವರು ಮಹಮನೆಯ ಆಶ್ರಯವನ್ನು ಬಿಡುವಂತಿರಲಿಲ್ಲ. ಒಂದು ಕಡೆ ಬಿಜ್ಜಳನ ಬೇಹುಗಾರರ ಭೀತಿ, ಇನ್ನೊಂದು ಕಡೆ ದೇವಗಿರಿಯಿಂದ ಮಹಾರಾಣಿ ಕಾಮೇಶ್ವರೀದೇವಿಯ ಆಜ್ಞೆಯ ನಿರೀಕ್ಷಣೆ, ಇವು ಕಬ್ಬಿಣದ ಸರಪಣಿಗಳಂತೆ ಅವರನ್ನು ಮಹಮನೆಗೆ ಬಂಧಿಸಿದ್ದವು.

ಅಗ್ಗಳನು ಕಾಣೆಯಾದ ವಿಚಾರವಾಗಿ ದೇವಗಿರಿಗೆ ವರದಿ ಕಳುಹಿಸಲು ಬೊಮ್ಮರಸನು ತನ್ನಲ್ಲಿ ಉಳಿದಿದ್ದ ಸ್ವಲ್ಪ ಹಣದಲ್ಲಿ ಹತ್ತು ವರಹಗಳನ್ನು ವೆಚ್ಚಮಾಡಿದ್ದನು. ಅವಸರದ ಭಟನನ್ನು ದೇವಗಿರಿಗೆ ಕಳುಹಿಸಿ ಒಂದು ವಾರವಾದರೂ ಇನ್ನೂ ಉತ್ತರ ಬಂದಿರಲಿಲ್ಲ. “ರಾಣಿಯ ಉದ್ದೇಶ ತಿಳಿದ ಮೇಲೆ ಅದಕ್ಕೆ ಸರಿಹೋಗುವಂತೆ ನಾವು ಕಾರ್ಯಕ್ರಮವನ್ನು ನಿರ್ಧರಿಸಬೇಕು,” ಎಂದು ಅವನು ಯೋಚಿಸಿದನು.

ಈ ವಿಚಾರಗಳನ್ನು ಚಿಂತಿಸುತ್ತ ಬ್ರಹ್ಮಶಿವ ಬೊಮ್ಮರಸರು ತಮ್ಮ ಬಿಡಾರದಲ್ಲಿ ಕುಳಿತಿದ್ದಾಗ ಶರಣನೊಬ್ಬನು ಅಲ್ಲಿಗೆ ಬಂದು, “ಮಾಚಿದೇವಯ್ಯನವರು ನಿಮ್ಮನ್ನು ಕರೆಯುತ್ತಾರೆ,” ಎಂದು ಹೇಳಿದನು.

“ಬರುವುದಾಗಿ ತಿಳಿಸು,” ಎಂದು ಹೇಳಿ ಶರಣನನ್ನು ಕಳುಹಿಸಿ ಬೊಮ್ಮರಸನು, “ನನ್ನ ಎಡಗಣ್ಣು ಹಾರುತ್ತಿದೆ, ಬ್ರಹ್ಮಶಿವ. ಇಷ್ಟು ದಿನ ನಮ್ಮನ್ನು ಮರೆತಿದ್ದ ಮಾಚಿದೇವರು ಇಂದೇಕೆ ಹೇಳಿಕಳುಹಿಸಿದ್ದಾರೆ. ನಮ್ಮ ವಂಚನೆ ಅವರಿಗೆ ತಿಳಿದಿರಬಹುದೇ ?” ಎಂದನು.

ಬ್ರಹ್ಮಶಿವನು ನಕ್ಕು, “ನನ್ನ ಬಲಗಿವಿ ಹಾರುತ್ತಿದೆ. ಯಾವುದೋ ಶುಭ ವಾರ್ತೆ ನಮಗಾಗಿ ಕಾದಿರಬೇಕು ಅಲ್ಲಿ,” ಎಂದನು. “ನಿನ್ನ ಉಪಹಾಸ ನಿಲ್ಲಲಿ, ಬ್ರಹ್ಮಶಿವ. ಇಷ್ಟು ದಿನ ನಾವು ಆ ಚಾಣಾಕ್ಷ ಮುದುಕನಿಂದ ತಪ್ಪಿಸಿಕೊಂಡಿದ್ದೆವು. ಈ ದಿನ ಸಿಕ್ಕಿಬೀಳುವುದು ಖಂಡಿತ” — ಎಂದು ಗೊಣಗಿದನು ಬೊಮ್ಮರಸ.

“ಸಿಕ್ಕಿ ಬೀಳುವುದು ನಮ್ಮ ಹಣೆಯಲ್ಲಿ ಬರೆದಿದ್ದರೆ ರೆಕ್ಕೆ ಮುರಿದ ಹಕ್ಕಿಯಂತೆ ಗೂಡಲ್ಲಿ ಕುಳಿತು ಸಾಯಬೇಕೆ? ಗರುಡನಂತೆ ಹಾರಾಡುತ್ತ ಸಿಕ್ಕಿಬೀಳುವುದು ಉತ್ತಮ.”

-ಎಂದು ಬ್ರಹ್ಮಶಿವನೆದ್ದು ಹೊರಡಲು ಸಿದ್ಧನಾದನು. ಗಡ್ಡ ಮೀಸೆ ಜಟೆ