ಪುಟ:ಕ್ರಾಂತಿ ಕಲ್ಯಾಣ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೧೦೫

ಮಾತಾಡದಂತೆ, ಸಂಪರ್ಕ ಬೆಳಸದಂತೆ ನೋಡಿಕೊಳ್ಳುವ ಹೊಣೆ ಮನೆ ಹೆಗ್ಗಡೆಯಾದ ನನ್ನ ಮೇಲೆ ಬಿದ್ದಿದೆ. ಅದನ್ನು ನಿರ್ವಹಿಸಲು ನಿಮ್ಮಂಥವರ ಸಹಾಯ ಅಗತ್ಯ." ಎಂದನು.

"ಸಹಾಯ ಮಾಡುವುದಾಗಿ ಹೇಳಿದ್ದೇನೆ, ಹೆಗ್ಗಡೆಗಳೆ. ನನ್ನ ಮಾತಲ್ಲಿ ನಿಮಗೆ ವಿಶ್ವಾಸವಿಲ್ಲವೆ?"

"ವಿಶ್ವಾಸವಿರುವುದರಿಂದಲೆ ರಾಜಗೃಹದ ರಹಸ್ಯವನ್ನೆಲ್ಲ ನಿಮಗೆ ಹೇಳುತ್ತಿದ್ದೇನೆ, ಹರೀಶರುದ್ರಯ್ಯನವರೆ. ನಾನು ಎದುರಿಗಿಲ್ಲದಿರುವಾಗ ಪ್ರಭುಗಳು ನಿಮ್ಮಿಂದ ಹೊರಗಿನ ಸುದ್ದಿ ತಿಳಿದುಕೊಳ್ಳಲು ಪ್ರಯತ್ನಿಸಬಹುದು. ನೆನಪಿರಲಿ, ಅವರ ಎಲ್ಲ ಪ್ರಶ್ನೆಗಳಿಗೆ ನಿಮ್ಮದೊಂದೇ ಉತ್ತರ, 'ನನಗೆ ತಿಳಿಯದು' ಎಂದು."

"ಆ ಒಂದು ಉತ್ತರವನ್ನು ನಾಲ್ಕು ಭಾಷೆಗಳಲ್ಲಿ, ನಾಲ್ಕು ವಿಧವಾಗಿ ಹೇಳುವ ಚತುರತೆ ನನಗಿದೆ, ಹೆಗ್ಗಡೆಗಳೆ, ನೀವು ಹೆದರಬೇಕಾಗಿಲ್ಲ" -ಬ್ರಹ್ಮಶಿವನು ಎದೆ ತಟ್ಟಿ ಜಂಭದಿಂದ ಹೇಳಿದನು.

"ಅಷ್ಟೇ ಅಲ್ಲ, ಪ್ರಭುಗಳು ನಿಮ್ಮ ಮುಖಾಂತರ ಹೊರಗಿನವರಿಗೆ ಓಲೆ ಕಳುಹಿಸಲು, ತರಿಸಿಕೊಳ್ಳಲು ಪ್ರಯತ್ನ ಮಾಡಬಹುದು, ಆ ಸಂದರ್ಭಗಳಲ್ಲಿ........"

"ಏನು ಮಾಡಬೇಕು?"

"ಓಲೆ ತೆಗೆದುಕೊಂಡು ರಹಸ್ಯವಾಗಿ ನನಗೆ ಕೊಡಬೇಕು."

"ಆಗಬಹುದು," ಎಂದು ಬ್ರಹ್ಮಶಿವನು ತುಂಟಾಟಿಕೆಯ ನಗೆಹಾರಿಸಿ, ಆ ಕಾವ್ಯೋಪದೇಶಕ, ಅಗ್ಗಳ, ಅವನ ವಿಚಾರವೇನು?" ಎಂದು ಕೇಳಿದನು.

"ಅವನೊಬ್ಬ ಮೋಜುಗಾರ ಭಂಡಕವಿ. ಹೆಣ್ಣೆಂದರೆ ಬಾಯಿಬಿಡುತ್ತಾನೆ. ಅವನ ಮೇಲೂ ನೀವು ಕಣ್ಣಿಟ್ಟಿರಬೇಕು. ಪ್ರಭುಗಳೊಡನೆ ರಹಸ್ಯವಾಗಿ ಮಾತಾಡಲು ಅವನಿಗೆ ಅವಕಾಶ ಕೊಡಬಾರದು. ಅವನು ರಾಜಗೃಹಕ್ಕೆ ಬಂದು ಕೆಲವೇ ವಾರಗಳಾದವು. ಹೆಂಗಸರು, ಪುಸ್ತಕ, ಇವೆರಡನ್ನು ಬಿಟ್ಟರೆ ಅವನಿಗೆ ಮತ್ತಾವ ಆಸಕ್ತಿಯೂ ಇಲ್ಲ."

"ಅವನೊಬ್ಬ ಪುಸ್ತಕಪ್ರಿಯ ಮೊನೆಗಾರ ರಸಿಕನೆಂದು ನಾನು ನೋಡುತ್ತಲೆ ತಿಳಿದೆ. ಅವನಿಗೆ ನೀವು ಗಣಿಕಾವಾಸದ ಹತ್ತಿರ ಬಿಡಾರ ಮಾಡಿಕೊಟ್ಟಿರುವುದು ಕುರಿಹಿಂಡನ್ನು ಕಾಯಲು ತೋಳನನ್ನು ನೇಮಿಸಿದಂತಾಗಿದೆ, ಹೆಗ್ಗಡೆಗಳೆ." ಬ್ರಹ್ಮಶಿವನ ಕುಹಕ ಹೆಗ್ಗಡೆಗೆ ತಟ್ಟನೆ ಅರ್ಥವಾಗಲಿಲ್ಲ. "ಏನು ಹೇಳಿದಿರಿ, ಅಯ್ಯನವರೆ?" ಎಂದು ಕುತೂಹಲದಿಂದ ಪ್ರಶ್ನಿಸಿದನು.

"ಹಿಂಡನ್ನು ಕಾಯಲು ಬಂದ ತೋಳ, ದಿನಕ್ಕೊಂದು ಕುರಿಯನ್ನು