ಪುಟ:ಕ್ರಾಂತಿ ಕಲ್ಯಾಣ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೮

ಕ್ರಾಂತಿ ಕಲ್ಯಾಣ


ಮನೆಯಲ್ಲಿ ಅಜ್ಞಾತವಾಸದಲ್ಲಿದ್ದು, ಈಗ ತಮ್ಮ ಕ್ಷೇತ್ರಜಪುತ್ರ ಕುಮಾರ ಪ್ರೇಮಾರ್ಣವನೊಡನೆ ಪುನಃ ಚಾಲುಕ್ಯರಾಜ್ಯಕ್ಕೆ ಹಿಂದಿರುಗಿದ್ದಾರೆ. ಅವರನ್ನು ಸ್ವಾಗತಿಸಿ ಉಚಿತರೀತಿಯಲ್ಲಿ ಗೌರವ ಸಲ್ಲಿಸುವುದು ಈಗ ನಮ್ಮ ಕರ್ತವ್ಯವಾಗಿದೆ. ಜಗದೇಕಮಲ್ಲರಸರ ಅನಂತರ ಚಾಲುಕ್ಯರಾಜ್ಯದ ಉತ್ತರಾಧಿಕಾರಿಯಾಗಿ ಕುಮಾರ ಪ್ರೇಮಾರ್ಣವನ ಯುವರಾಜ ಪಟ್ಟಾಭಿಷೇಕ ಶೀಘ್ರದಲ್ಲಿ ಕಲ್ಯಾಣದಲ್ಲಿ ನಡೆಯುವುದು.”

ಸಭೆಯಲ್ಲಿದ್ದ ಸಾಮಂತ ಮನ್ನೆಯ ಅಧಿಕಾರಿಗಳು ಬಿಜ್ಜಳನ ಸಲಹೆಯಿಂದ ಆಶ್ಚರ್ಯಗೊಂಡರು. ಬಿಜ್ಜಳನ ರಾಜ್ಯಾಪಹಾರವನ್ನು ರಹಸ್ಯವಾಗಿ ವಿರೋಧಿಸುತ್ತಿದ್ದವರೂ ಈ ಕ್ಷಿಪ್ರ ಪರಿವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಸಲಹೆಯ ಹಿಂದೆ ತಮಗೆ ಅಗೋಚರವಾದ ಯಾವುದೋ ಕಾರಣವಿದೆಯೆಂದು ಅವರು ಅನುಮಾನಿಸಿದರು. ಬಿಜ್ಜಳನ ರಾಜ್ಯಾಪಹಾರವನ್ನು ಅನುಮೋದಿಸಿದ್ದ ಸಾಮಂತರು ಕರ್ತವ್ಯಮೂಢರಾದರು.

ಆಗ ಕುಮಾರ ಸೋಮೇಶ್ವರನೂ, ಅವನ ಸಂಗಡ ಅಂದಣಕ್ಕೆ ಹೆಗಲು ಕೊಟ್ಟಿದ್ದ ತರುಣ ಸಾಮಂತರೂ ಮುಂದೆ ಬಂದು,

“ನಾವು ಸರ್ವಾಧಿಕಾರಿ ಬಿಜ್ಜಳರಾಯರ ಸಲಹೆಯನ್ನು ಅನುಮೋದಿಸುತ್ತೇವೆ. ಜಯ! ಚಾಲುಕ್ಯ ಮಹಾರಾಣಿ ಕಾಮೇಶ್ವರೀದೇವಿ! ಜಯ! ಚಾಲುಕ್ಯ ಯುವರಾಜ ಪ್ರೇಮಾರ್ಣವ! ಉಘೇ! ಉಫೇ!” ಎಂದು ಜಯಘೋಷ ಮಾಡಿದರು. ಉಳಿದವರು ಇಚ್ಚೆಯಿಂದಲೋ ಅನಿಚ್ಚೆಯಿಂದಲೋ ಅವರೊಡನೆ ದನಿಗೂಡಿಸಿದರು. ಕೂಡಲೆ ಸುಮಂಗಲಿಯರು ಫಲಪುಷ್ಪ ಮಂಗಳದ್ರವ್ಯಗಳ ಹರಿವಾಣಗಳನ್ನು ಕಾಮೇಶ್ವರಿಯ ಮುಂದಿಟ್ಟರು. ಶ್ರೋತ್ರಿಯರು ಆಶೀರ್ವಾದ ಮಾಡಿದರು. ವಂದಿಮಾಗಧರು ಸ್ತುತಿಗೀತಗಳನ್ನು ಹಾಡಿದರು.

ಬಿಜ್ಜಳನು ಪುನಃ ಸಭಾಸದರಿಗೆ ವಂದಿಸಿ, “ನಾನು ಚಾಲುಕ್ಯ ರಾಜ್ಯದ ಮಹಾಮಂಡಲೇಶ್ವರ, ಸರ್ವಾಧಿಕಾರಿ ದಂಡನಾಯಕ, ಪ್ರಥಮ ಪ್ರಜೆ. ಮಹಾರಾಣಿಯವರ ಚರಣದಡಿಯಲ್ಲಿ ನನ್ನ ರಾಜಭಕ್ತಿ ಗೌರವಗಳನ್ನು ಅರ್ಪಿಸುತ್ತೇನೆ,” ಎಂದು ಮೊಣಕಾಲೂರಿ ವಂದಿಸಿ ಕಾಮೇಶ್ವರಿ ಪ್ರೇಮಾರ್ಣವರಿಗೆ ಮುಜುರೆ ಮಾಡಿದನು. ನೆರೆದಿದ್ದ ಸಾಮಂತ ಮನ್ನೆಯರು ತಮ್ಮ ಪದವಿ ಅಧಿಕಾರಗಳ ಅನುಕ್ರಮದಲ್ಲಿ ಒಬ್ಬೊಬ್ಬರಾಗಿ ಮುಜುರೆ ಮಾಡಿದರು. ಈ ಸಾಂಪ್ರದಾಯಿಕ ಸಭ್ಯಾಚರಣೆ ಮುಗಿದ ಮೇಲೆ ಕಾಮೇಶ್ವರಿ ಎದ್ದು ನಿಂತು ಕೈಮುಗಿದು.

“ನನ್ನ ಮತ್ತು ಕುಮಾರ ಪ್ರೇಮಾರ್ಣವನ ಪರವಾಗಿ ನಾನು ನಿಮಗೆಲ್ಲರಿಗೂ