ಪುಟ:ಕ್ರಾಂತಿ ಕಲ್ಯಾಣ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೪

ಕ್ರಾಂತಿ ಕಲ್ಯಾಣ


“ನಿನ್ನೆ ಮೆರವಣಿಗೆ ಸಭಾಂಗಣಕ್ಕೆ ಬರುವ ಮೊದಲು ನಡೆದ ಒಂದು ಘಟನೆ ಈಗ ಬೃಹದ್ರೂಪ ತಾಳಿ ಎದುರಿಗೆ ನಿಂತಿದೆ."

“ಯಾವ ಘಟನೆ ಅದು?”

“ಹಾಡುಗಾರನೊಬ್ಬನು ನಿಮ್ಮ ಮೇಲೆ ಒಂದು ಹಾಡು ಕಟ್ಟಿ ಜನರ ಮುಂದೆ ಹಾಡುತ್ತಿದ್ದ. ರಾಜಭಟರು ಅವನನ್ನು ಬಂಧಿಸಿದರು.”

“ಬಂಧಿಸಲು ಕಾರಣ? ಅವನು ಹಾಡುತ್ತಿದ್ದುದೇನು?”

ಅಗ್ಗಳನು ಕಡತದ ಹಾಳೆಯೊಂದನ್ನು ಕೊಟ್ಟು "ಹಾಡುಗಾರನನ್ನು ಬಂಧಿಸುವ ಮೊದಲೇ ಹಾಡಿನ ಕೆಲವು ಪ್ರತಿಗಳು ನಗರದ ಪ್ರಮುಖ ಸಾಮಂತರಿಗೆ ಕಳುಹಿಸಲ್ಪಟ್ಟಿದ್ದವು. ನಿಮ್ಮ ಮೇಲಿನ ಈ ಪ್ರಚಾರ ವ್ಯವಸ್ಥಿತ ರೀತಿಯಿಂದ ನಡೆಯುತ್ತಿದೆಯೆಂಬುದನ್ನು ನಾವು ಇದರಿಂದ ತಿಳಿಯಬಹುದು,” ಎಂದನು.

ಕಾಮೇಶ್ವರಿ ಓದಿದಳು :
ಒಲಿದಾನ ಬಿಜ್ಜಳ ಚಾಲುಕ್ಯ ಲಕ್ಕಿಗೆ,
ಒಲಿದಾಳ ಲಕ್ಕಿ ಬಿಜ್ಜಳಗೆ.
ಹಿಟ್ಟು ಹಳಸಿತ್ತ ! ನಾಯಿ ಹಸಿದಿತ್ತ !
ಚೆನ್ನಾಯ್ತು ಮೇಳ ಇಬ್ಬರಿಗೆ !
ತೈಲವಿಲ್ಲದ ದೀಪ ಗಂಡನಿಲ್ಲದ ತಾಪ,
ಹಾರಿಹತ್ತಿಕ್ಕಾಳ ಲಕ್ಕಿ !
ಬಿಜ್ಜಳನ ಬಿಡುತಾಳ, ತೊಡೆಯೇರಿ ಕುಳಿತಾಳ.
ಇಬ್ಬರಿಗೂ ಮಕ್ಕೀಕಾ ಮಕ್ಕಿ !
ಎರಡು ವರಹಕ್ಕೊಂದು ಗದ್ಯಾಣವೇಕೆಂದು
ಕೇಳುತ್ತಿದ್ದಾರೆಲ್ಲ ಕೊಸರಿ,
ಎರಡಕ್ಕ ಬೆಲೆ ಮೂರು ಲೋಕವೆಂದನುತಾಳ
ಹೆಸರು ಕಾಮಕ್ಕ, ಅಧೀಶ್ವರಿ !

ಕಾಮೇಶ್ವರಿಯ ಹುಬ್ಬುಗಳು ಕುಂಚಿತವಾದವು, ಲಜ್ಜೆಯಿಂದ ಕೆನ್ನೆಗಳು ಕೆಂಪಾದವು. “ಜನರು ಇದನ್ನು ನಂಬಿದರೆ ?” ಎಂದಳು

“ಬಿಜ್ಜಳನ ಕಡೆಯವರು ಇದನ್ನು ನಂಬಿದ್ದಾರೆ. ನಿಮ್ಮ ಒನಪು ವೈಯಾರಗಳಿಗೆ ವಶನಾದ ಅವನು ಕಲಚೂರ್ಯ ಅಧಿಕಾರ ಗೌರವಗಳನ್ನು ನಿಮಗೆ ಸೂರೆಕೊಡುತ್ತಿರುವನೆಂದು ಅವರು ಹೇಳುತ್ತಾರೆ.”

“ನಾನು ಮಂಗಳವೇಡೆಗೆ ಬಂದು ಇನ್ನೂ ಮೂರು ದಿನಗಳಾಗಿಲ್ಲ. ಆಗಲೆ