ಪುಟ:ಕ್ರಾಂತಿ ಕಲ್ಯಾಣ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೨೭


ಅರಮನೆಯ ಬೇರೊಂದು ಭಾಗದಲ್ಲಿ ನನ್ನ ಬಿಡಾರವನ್ನೇರ್ಪಡಿಸಿದ್ದಾರೆ. ಈಗ ಅದನ್ನು ಬದಲಾವಣೆ ಮಾಡಲು ಪ್ರಯತ್ನಿಸುವುದರಿಂದ ಸಂದೇಹಕ್ಕೆ ಅವಕಾಶ ಕೊಟ್ಟಂತಾಗುವುದು. ಚಾಲುಕ್ಯ ಮಂತ್ರಿವರ್ಗದವರು, ಕಲ್ಯಾಣದ ಸಾಮಂತ ನಾಗರಿಕ ಮನ್ನೆಯರು ನಾಳೆ ಇಲ್ಲಿಗೆ ಬರುತ್ತಾರೆ. ಪಂಚಮಿಯಂದು ಪಟ್ಟಾಭಿಷೇಕ ಮುಗಿಯುತ್ತಲೆ ಕೆಲವೇ ದಿನಗಳಲ್ಲಿ ನೀವು ಇಲ್ಲಿಂದ ಕಲ್ಯಾಣಕ್ಕೋ ದೇವಗಿರಿಗೋ ಪ್ರಯಾಣ ಮಾಡಿದರೆ ಒಳ್ಳೆಯದು.”-ಎಂದು ಹೇಳಿ ಅಗ್ಗಳನು ಕಾಮೇಶ್ವರಿಯಿಂದ ಬೀಳ್ಕೊಂಡನು.

***

ಕಲಚೂರ್ಯ ಯುವರಾಜ ಸೋಮೇಶ್ವರನ ಪಟ್ಟಾಭಿಷೇಕೋತ್ಸವ ಮಾಘ ಪಂಚಮಿಯ ಶುಭದಿನ ಕಲಚೂರ್ಯ ಅರಮನೆಯ ಓಲಗಶಾಲೆಯಲ್ಲಿ ವೈಭವ ವಿಜೃಂಭಣೆಗಳಿಂದ ನಡೆಯಿತು.

ಮಂಚಣ, ನಾರಣಕ್ರಮಿತ, ಚೆನ್ನಬಸವಣ್ಣ ಇವರೇ ಮೊದಲಾದ ಬಿಜ್ಜಳನ ಮಂತ್ರಿವರ್ಗದವರು, ಕಲ್ಯಾಣದ ನಾಗರಿಕ ಪ್ರಮುಖರು, ಚಾಲುಕ್ಯ ರಾಜ್ಯದ ಮಿತ್ರಸಾಮಂತರು, ಗೋಮಂತ ಹೈವೆ, ಕರ್ಹಾಡ, ದೇವಗಿರಿ, ಭಾಗಾನಗರ, ಓರಂಗಲ್ ರಾಜ್ಯಗಳ ರಾಜಪ್ರತಿನಿಧಿಗಳು ಆಹ್ವಾನಿತರಾಗಿ ಬಂದಿದ್ದರು.

ಸೋಮೇಶ್ವರ ಸುಂದರವಲ್ಲಿಯರು ಆದರದಿಂದ ವಿಶೇಷಾಹ್ವಾನ ಕಳುಹಿಸಿದ್ದರೂ ಮಧುವರಸ ಲಾವಣ್ಯವತಿ ಶೀಲವಂತರು ಮಹೋತ್ಸವಕ್ಕೆ ಬಂದಿರಲಿಲ್ಲ. ಮಧುವರಸನು ಅಸ್ವಸ್ಥ. ಲಾವಣ್ಯವತಿ ತಂದೆಯ ಶುಶ್ರೂಷೆಗಾಗಿ ಕಲ್ಯಾಣದಲ್ಲಿರುವುದು ಅಗತ್ಯವಾಯಿತು. ಆಹ್ವಾನವನ್ನು ಪರಮಾರ್ಥವೆಂದು ಭಾವಿಸಿ ಮಹೋತ್ಸವಕ್ಕೆ ಹೋಗುವುದರಿಂದ ತನ್ನನ್ನು ಅಪಮಾನಗೊಳಿಸಲು ನಾರಣಕ್ರಮಿತನಿಗೆ ಪುನಃ ಅವಕಾಶ ಕೊಟ್ಟಂತಾಗುವುದೆಂದು ಭಾವಿಸಿ ಶೀಲವಂತ ಸುಮ್ಮನಾದನು.

ಸೋಮೇಶ್ವರನೊಡನೆ ಸುಂದರವಲ್ಲಿಯೂ ಪಟ್ಟಾಭಿಷಿಕ್ತೆಯಾಗುವಳೆಂದು ತಿಳಿದಾಗ ಬಿಜ್ಜಳನ ಬೇರೆ ಮಕ್ಕಳೂ ಅವರ ತಾಯಂದಿರೂ ಕರುಬಿದುದುಂಟು. ಆದರೆ ಬಿಜ್ಜಳನಿಗೆ ಪ್ರತಿಯಾಡುವ ಧೈರ್ಯ ಸಾಹಸಗಳು ಅವರಲ್ಲಿ ಯಾರಿಗೂ ಇರಲಿಲ್ಲ.

ಗೊತ್ತಾದ ಶುಭಮುಹೂರ್ತದಲ್ಲಿ ಅಭಿಷೇಕ ವಿಧ್ಯುಕ್ತವಾಗಿ ನಡೆಯಿತು. ಶೈವ ಮಠಗಳ ಜಂಗಮ ಗುರುಗಳು, ವೈಷ್ಣವ ಧರ್ಮದ ಜೀಯರು, ಜೈನಬಸದಿಗಳ ಇಂದ್ರರು, ಪ್ರತ್ಯೇಕವಾಗಿ ಸಂಗ್ರಹಿಸಿದ್ದ ಏಳು ಮಹಾಸಾಗರಗಳ, ಏಳು ಪುಣ್ಯನದಿಗಳ