ಪುಟ:ಕ್ರಾಂತಿ ಕಲ್ಯಾಣ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೬

ಕ್ರಾಂತಿ ಕಲ್ಯಾಣ


ಪಗಡೆಯಾಡುತ್ತಿದ್ದವರು ಈ ಏಳುಬೀಳುಗಳಿಗೆ ಸಿಕ್ಕದೆ ವಿನೋದವಾಗಿ ಮಾತಾಡುತ್ತಾ ಆಡುತ್ತಿದ್ದರು. ಪಾನಕ ಪಣ್ಯಾರಗಳ ಹಂಚಿಕೆ ಭರಾಟೆಯಿಂದ ನಡೆಯುತ್ತಿತ್ತು.

ಬಿಜ್ಜಳನನ್ನು ಕಂಡಕೂಡಲೆ ಕ್ರಮಿತನು ಸುಖಾಸನದಿಂದೆದ್ದು ಬಾಗಿಲಿಗೆ ಹೋಗಿ ಸ್ವಾಗತಿಸಿ ಒಳಗೆ ಕರೆತಂದನು. ಸಾಮಂತರು ಎದ್ದುನಿಂತು ಕೈಯೆತ್ತಿ ನಮಸ್ಕಾರಮಾಡಿದಾಗ ಬಿಜ್ಜಳನು,

“ನಾನೂ ನಿಮ್ಮಂತೆ ಆಟಗಾರನಾಗಿ ಇಲ್ಲಿಗೆ ಬಂದಿದ್ದೇನೆ. ಆಟ ಮುಂದುವರೆಯಲಿ,” -ಎಂದು ಹೇಳಿ ಸಾವಿರ ವರಹಗಳ ಥೈಲಿಯೊಂದನ್ನು ಕರಣಿಕನ ಮುಂದಿಟ್ಟು “ನಿಮ್ಮಲ್ಲಿರುವ ನಾಲ್ಕು ಪ್ರಮಾಣದ ಬಿಲ್ಲೆಗಳನ್ನು ಸಮಸಂಖ್ಯೆಯಲ್ಲಿ ಕೊಡಿ,” ಎಂದನು.

ಕರಣಿಕನು ತಬ್ಬಿಬ್ಬಾದನು. ಅವನಲ್ಲಿದ್ದುದು ೫-೧೦-೫೦-೧೦೦ ಪ್ರಮಾಣದ ನಾಲ್ಕು ಬಣ್ಣದ ಗುರುತು ಬಿಲ್ಲೆಗಳು. ಅವುಗಳನ್ನು ಸಮಸಂಖ್ಯೆಯಲ್ಲಿ ಒಂದು ಸಾವಿರ ವರಹಕ್ಕೆ ಹಂಚುವುದು ಹೇಗೆ ? ಲೆಕ್ಕದಲ್ಲಿ ತನ್ನ ಚತುರತೆಯ ಪರೀಕ್ಷೆ ನಡೆಯುತ್ತಿರುವುದಾಗಿ ಕರಣಿಕನು ತಿಳಿದನು. ಒಂದೊಂದು ಕ್ಷಣವೂ ಪರೀಕ್ಷಕನ ರೂಪ ತಾಳಿ ಎದುರಿಗೆ ನಿಂತಂತಾಯಿತು ಅವನಿಗೆ. ಬಿಜ್ಜಳನ ದೃಷ್ಟಿ ಒಂದು ಎರಡು ಎಂದು, ಆ ಕ್ಷಣಗಳನ್ನು ಎಣಿಸುತ್ತಿರುವುದಾಗಿ ಭಾವಿಸಿದನು.

ಪರಿಗಣನೆ ಐದನ್ನು ಮುಟ್ಟಿದಾಗ ಕರಣಿಕನಿಗೆ ಉತ್ತರ ಹೊಳೆಯಿತು. ಎದುರಿಗಿದ್ದ ನಾಲ್ಕು ಗುಡ್ಡೆಗಳಿಂದ ಆರಾರು ಬಿಲ್ಲೆಗಳನ್ನು ತೆಗೆದಿಟ್ಟು, ಚೀಲದಿಂದ ಹತ್ತು ವರಹಗಳನ್ನು ತೆಗೆದು ಅದರೊಡನಿಟ್ಟನು. ಪ್ರಭುಮನ್ನೆಯರಿಗೆ ಕರಣಿಕನು ಹಣವನ್ನು ಕೈಯೆತ್ತಿಕೊಡುವುದು ಆಗ ಶಿಷ್ಟಾಚಾರವಾಗಿರಲಿಲ್ಲ.

ಬಿಜ್ಜಳನು ಗುರುತು ಬಿಲ್ಲೆಗಳನ್ನು ತೆಗೆದುಕೊಂಡು, “ನಿನ್ನ ಶೀಘ್ರ ಗಣಿತಕ್ಕೆ ಇದು ಬಹುಮಾನ,” ಎಂದು ಹೇಳಿ ಹತ್ತು ವರಹಗಳನ್ನು ಅಲ್ಲಿಯೇ ಬಿಟ್ಟನು.

ಲಕ್ಷ್ಮೀಪ್ರತಿಮೆಯ ಅಡಿಯಲ್ಲಿ ಈ ಸರಳಗಣಿತದ ಪರೀಕ್ಷೆ ನಡೆಯುತ್ತಿದ್ದಂತೆ ಕುಮಾರ ಸೋಮೇಶ್ವರನು ಚಾಲುಕ್ಯ ರಾಣಿ ಕಾಮೇಶ್ವರಿಯನ್ನು ಕರೆದುಕೊಂಡು ಅಲ್ಲಿಗೆ ಬಂದನು. ಸಂಗಡ ಸುಂದರವಲ್ಲಿ ಮತ್ತು ಅಗ್ಗಳ.

ಬಿಜ್ಜಳನ ಮುಖ ಸ್ವಾಗತದ ಮಂದಹಾಸದಿಂದ ಅರಳಿತು. ತನ್ನ ಅನುಮತಿಯ ಫಲವಾಗಿ ಅಂತಃಪುರನಿವಾಸಿಯರಾದ ಕೆಲವು ಮಂದಿ ಸಭ್ಯ ಮಹಿಳೆಯರಾದರೂ ದ್ಯೂತಸಭೆಗೆ ಬರಬಹುದೆಂದು ಅವನು ನಿರೀಕ್ಷಿದ್ದನು. ಅವನ ರಾಣಿವಾಸದ ಒಬ್ಬಿಬ್ಬರು ಸಭಾಂಗಣದ ಉಪ್ಪರಿಗೆಯ ಮೊಗಶಾಲೆಗೆ ಬಂದು, ಕೆಳಗೆ ನಡೆಯುತ್ತಿದ್ದ ಜೂಜಾಟದ ಗೊಂದಲವನ್ನು ಕೊಂಚ ಹೊತ್ತು ನಿಂತು ನೋಡಿ ಆಗಲೆ ಹೊರಟು