ಪುಟ:ಕ್ರಾಂತಿ ಕಲ್ಯಾಣ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ರಾಂತಿ ಕಲ್ಯಾಣ

“ಬರುವ ದಾರಿಯಲ್ಲಿ ನಾವು ಬಾಂಧವರ ಓಣಿಗೆ ಹೋಗಿದ್ದೆವು. ಕಲ್ಯಾಣದ ನಾಗರಿಕರು ಬಸವಣ್ಣನವರನ್ನು ಬೀಳ್ಕೊಡಲು ಅಲ್ಲಿಗೆ ಬಂದಿದ್ದರು. ಅಲ್ಲಿ ಆಗ ನಡೆದದ್ದನ್ನು ಕಂಡು ನನ್ನ ಗೆಳೆಯ ಹೀಗಾಗಿದ್ದಾನೆ ಎಂದು ಹೇಳಿದ. 'ಇವರು ಬಸವಣ್ಣನವರ ಭಕ್ತರೇ? ಶರಣರೇ?' ಎಂದೆ ನಾನು. 'ಶರಣನೂ ಅಲ್ಲ. ಭಕ್ತನೂ ಅಲ್ಲ. ಶರಣರ ದೃಷ್ಟಿ ತಗುಲಿ ಕಿಸುರಾಗಿದೆ. ತುಸುಹೊತ್ತು ವಿಶ್ರಮಿಸಿಕೊಂಡರೆ, ಸರಿಹೋಗುತ್ತದೆ' ಎಂದು ಭಂಡಾರಿ ನಗುತ್ತ ಉತ್ತರಿಸಿದ.”

“ನಿಮ್ಮ ಆ ಭಂಡಾರಿ ಒಳ್ಳೆ ರಸಿಕನಂತೆ ಕಾಣುತ್ತದೆ. ಬಾಂಧವರ ಓಣಿಯಲ್ಲಿ ಏನಾದರೂ ವಿಶೇಷ ನಡೆಯಿತೆ ?”-ಕುತೂಹಲದಿಂದ ಕ್ರಮಿತನು ಪ್ರಶ್ನಿಸಿದನು.

ಕಾರ್ಯಕರ್ತನು ಹೇಳಿದನು: “ಬಸವಣ್ಣನವರ ಸಂಗಡಿದ್ದ ರಕ್ಷಕದಳದ ನಾಯಕ ರೇವದಾಸನು ಮೋಳಿಗೆಯ ಮಾರಯ್ಯನವರನ್ನು ಹೊಡೆಯಲು ಕತ್ತಿ ಎತ್ತಿದಾಗ ಬಸವಣ್ಣನವರು ಪವಾಡ ಮೆರೆಸಿದರಂತೆ. ಅವರ ದೃಷ್ಟಿಮಾತ್ರದಿಂದ ರೇವದಾಸನ ಕತ್ತಿ ಕೈಯಿಂದ ಕಳಚಿಬಿದ್ದು ಮುರಿದುಹೋಯಿತೆಂದು ಜನರು ಹೇಳುತ್ತಾರೆ.”

ಕ್ರಮಿತನು ಅವಾಕ್ಕಾದನು. ದಾರಿಯಲ್ಲಿ ನಡೆದಿರಬಹುದಾದ ಒಂದು ಸಾಮಾನ್ಯ ಘಟನೆ ಅತ್ಯಲ್ಪ ಕಾಲದಲ್ಲಿ ಪವಾಡದ ರೂಪ ತಾಳಿ ನಗರದಲ್ಲಿ ಹರಡಿದ್ದು ಹೇಗೆ? ಎಂದು ಕ್ಷಣಕಾಲ ಚಿಂತಿಸಿ, “ಜನರು ಇದನ್ನು ನಂಬುವರೆ?” ಎಂದು ಕೇಳಿದನು.

“ಸಾಮಾನ್ಯದಿಂದ ಮನ್ನೆಯರವರೆಗೆ ಅನೇಕ ಬಾಯಿಂದ ನಾನು ಈ ವಿಚಾರ ಕೇಳಿದೆ, ಒಡೆಯರೆ. ಅದೊಂದು ಪವಾಡವೆಂದೇ ಅವರೆಲ್ಲ ತಿಳಿದಿದ್ದಾರೆ,” ಕಾರ್ಯಕರ್ತನೆಂದನು.

ವ್ಯಂಗ್ಯದ ನಗೆಬೀರಿ ಕ್ರಮಿತನು, “ಮೂಢ ನಂಬಿಕೆಯ ಅವಿವೇಕಿ ಜನರಿಂದ ತುಂಬಿದೆ ಈ ಜಗತ್ತು. ಈಗ ಅಗ್ಗಳದೇವರೆಲ್ಲಿದ್ದಾರೆ ? ನಾನು ಅವರನ್ನು ನೋಡ ಬೇಕಾಗಿದೆ,” ಎಂದನು.

“ಉಪ್ಪರಿಗೆಯ ಬಿಡಾರದಲ್ಲಿ ಅವರೊಬ್ಬರೇ ಕುಳಿತಿದ್ದಾರೆ. ಬ್ರಹ್ಮರಾಜ ಸೇಟರು ತುಸುಹೊತ್ತಿನ ಮೊದಲು ಕಾರ್ಯದರ್ಶಿಯನ್ನು ಕರೆದುಕೊಂಡು ಹೊರಗೆ ಹೋದರು. ಒಡೆಯರು ಹೀಗೆ ದಯಮಾಡಿಸಬೇಕು,” ಎಂದು ಕಾರ್ಯಕರ್ತನು ಕ್ರಮಿತನನ್ನು ಪಾಂಥ ನಿವಾಸದ ಉಪ್ಪರಿಗೆಗೆ ಕರೆದುಕೊಂಡು ಹೋದನು.

ಕಾರ್ಯಕರ್ತನೂ ಕ್ರಮಿತನೂ ಬಿಡಾರದೊಳಗೆ ಬಂದಾಗ ಅಗ್ಗಳನು ಕವಿತೆಯ ಹೊತ್ತಿಗೆಯೊಂದನ್ನು ಓದುತ್ತಾ ಕುಳಿದ್ದನು. ಆ ದಿನ ಪೂರ್ವಾಹ್ನ