ಪುಟ:ಕ್ರಾಂತಿ ಕಲ್ಯಾಣ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೫೯


ನಡೆಸುವ ಅವಕಾಶವೂ ಅವರಿಗಿರಲಿಲ್ಲ. ಅರಮನೆಯ ಸುತ್ತ ಸೈನಿಕರ ಕಾವಲಿಟ್ಟು ರಾಜನು ಅಲ್ಲಿ ಬಂದಿಯಂತೆ ಸುಖವಾಗಿರಲು ಏರ್ಪಡಿಸಿ, ರಾಜನ ಹೆಸರಿನಲ್ಲಿ ತಾವೇ ರಾಜ್ಯಭಾರ ಮಾಡಲು ಪ್ರಾರಂಭಿಸಿದರು.

“ನಗರದ ನಾಪಿತನೊಬ್ಬನಿಗೆ ಮಾತ್ರ ಅರಮನೆಗೆ ಪ್ರವೇಶವಿತ್ತು. ಅವನು ನಗರಕ್ಕೆ ಹೊಸಬ, ತರುಣ, ತಕ್ಕಮಟ್ಟಿಗೆ ರೂಪವಂತನೂ ಹೌದು. ಕ್ಷೌರ ಕಾರ್ಯದಲ್ಲಿ ಸಹಾಯವಾಗಲೆಂದು ವೈದ್ಯ ವೇದಾಂತಗಳ ಅಧ್ಯಯನ ಮಾಡಿದ್ದ. ನಾಪಿತನ ಈ ಕಲ್ಯಾಣ ಗುಣಗಳನ್ನು ತಿಳಿದೇ ಮಂತ್ರಿಮಂಡಲ ಅವನನ್ನು ರಾಜನ ನಿತ್ಯಸೇವೆಗೆ ನೇಮಿಸಿತ್ತು. ಕಾಲಕ್ರಮದಲ್ಲಿ ಅವನು ಆ ನರಭಕ್ಷಕ ರಾಜನ ವೈದ್ಯ, ಉಪದೇಶಿ, ಕೊನೆಗೆ ಆಪ್ತಸಚಿವ ಸ್ಥಾನಕ್ಕೂ ಏರಿದ.

“ಇದನ್ನೆಲ್ಲ ನೋಡುತ್ತಿದ್ದ ರಾಜಮಹಿಷಿ, ಈ ನರಭಕ್ಷಕ ರಾಜನ ಸಹವಾಸ ತನಗೆ ತಪ್ಪಬೇಕಾದರೆ ಈ ನಾಪಿತನಿಂದಲೇ” ಎಂದು ನಿರ್ಧರಿಸಿಕೊಂಡು ಮೋಹದ ಬಲೆ ಬೀಸಿದಳು.

“ಕನೆಯಾಗಿದ್ದಾಗ ತಂದೆಯ ಮನೆಯಲ್ಲಿ ರಾಜಮಹಿಷಿಗೆ ಸಂಗೀತ ಪಾಠವಾಗಿತ್ತು. ಮದುವೆಯಾಗಿ ಗಂಡನ ಮನೆಗೆ ಹೋಗಿ ನರ್ತನ ಕಲಿತಳು. ನರಭಕ್ಷಕ ರಾಜನು ಅಪಹರಿಸಿ ತಂದಮೇಲೆ ಅರಮನೆಯ ದಾಸಿಯರಿಂದ ಗಣಿಕೆಯರ ವಿಲಾಸ ವಿಭ್ರಮ ವಂಚನೆಗಳನ್ನು ಕಲಿತಳು. ಇಂತಹ ರಸಪಾಕ ತಾನಾಗಿ ಬಂದು ತಟ್ಟೆಗೆ ಬಿದ್ದಾಗ ಬೇಡವೆನ್ನುವುದು ಯಾರಿಗೆ ಸಾಧ್ಯ? ಪಾಲಿಗೆ ಬಂದದ್ದು ಪಂಚಾಮೃತ ಎಂದು ಹೇಳಿಕೊಂಡು ನಾಪಿತನು ಮುಂದಿನ ಕಾರ್ಯಕ್ಕೆ ಸಿದ್ದನಾದನು.

“ಒಂದು ದಿನ ಅವನು ಕ್ಷೌರ ಮಾಡುತ್ತಿದ್ದಾಗ ಕತ್ತಿ ಕೆಳಕ್ಕೆ ಸರಿದು ರಾಜನ ಕೊರಳಿಗೆ ಗಾಯವಾಯಿತು. ಹಾ ! ಎನ್ನುವುದರಲ್ಲಿ ರಾಜನ ತಲೆ ಕೆಳಗುರುಳಿತು. ಅರಮನೆಯ ದಾಸ ದಾಸಿಯರಿಗೆ ಸಾಕು ಸಾಕಾಗಿ ಹೋಗಿತ್ತು, ನರಭಕ್ಷಕ ರಾಜನ ಚಿತ್ರಹಿಂಸೆ. ಅವರೆಲ್ಲ ರಾಣಿಯ ಕಡೆ ಸೇರಿ, ರಾಜನ ದೇಹವನ್ನು ಅರಮನೆಯ ಉದ್ಯಾನದಲ್ಲಿ ಹೂತಿಟ್ಟರು. ನಾಪಿತನಿಗೆ ರಾಜನ ಪೋಷಾಕುಗಳನ್ನು ಹಾಕಿ, ಸಿಂಹಾಸನದ ಮೇಲೆ ಕುಳ್ಳಿರಿಸಿ ಮಂತ್ರಿ ಸಾಮಂತರಿಗೆ ಹೇಳಿ ಕಳುಹಿಸಿದರು. ರಾಜಮಹಿಷಿಯ ಗೌರೀಪೂಜೆಯ ಫಲವಾಗಿ ರಾಜನ ನರಮಾಂಸಭಕ್ಷಣೆ ನಿಂತು, ಎಲ್ಲರಂತೆ ಅವನೂ ಮನುಷ್ಯನಾಗಿದ್ದಾನೆ ಎಂದು ಎಲ್ಲ ಕಡೆ ಸುದ್ದಿ ಹರಡಿದರು.

“ಹೊಸ ರಾಜನನ್ನು ಕಂಡಾಗ ಮಂತ್ರಿ ಸಾಮಂತರಿಗೆ ಆನಂದವಾಯಿತು. ಅವರನ್ನು ಸ್ವಾಗತಿಸಿ ರಾಜ ಭಾಷಣ ಮಾಡುತ್ತ, ಶಾಸ್ತ್ರ ಪುರಾಣಗಳಿಂದ