ಪುಟ:ಕ್ರಾಂತಿ ಕಲ್ಯಾಣ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೬೧


ಮರ ಗಿಡಗಳ ಮೇಲೆ ಬಿದ್ದು ಕತ್ತಲೆಯ ನೆರಳೊಡ್ಡುಗಳನ್ನು ಹರಡಿದ್ದವು. ಉದ್ಯಾನದ ಎಲ್ಲ ಕಡೆ ಹುಡುಕಲು ಭಟರನ್ನು ಕಳುಹಿಸಲು ನಾಯಕನು ಹವಣಿಸುತ್ತಿದ್ದಂತೆ ಕರ್ಣದೇವ ಅಲ್ಲಿಗೆ ಬಂದು,

“ಭಟರನ್ನು ಕಳುಹಿಸಿ ಗೊಂದಲಮಾಡಬೇಡ. ಅಣ್ಣನವರಿಗೆ ತಿಳಿದರೆ ಕೋಪ ಮಾಡುವರು. ತಪ್ಪಿಸಿಕೊಂಡ ಮನುಷ್ಯ ನಾಳೆ ತಾನಾಗಿ ನಮಗೆ ಸಿಕ್ಕಿಬೀಳುತ್ತಾನೆ,” ಎಂದು ತಡೆದನು.

ಉದ್ಯಾನದ ಅಂಚಿನಲ್ಲಿದ್ದ ಹೊದರಿನ ಮರೆಯಲ್ಲಿ ನಿಂತು ಅಗ್ಗಳನು ಮೊಗಶಾಲೆಯಲ್ಲಿ ನಡೆದುದನ್ನು ನೋಡಿದನು. ತನ್ನನ್ನು ಹುಡುಕಲು ಭಟರು ಉದ್ಯಾನಕ್ಕೆ ಬಂದರೆ ಏನು ಮಾಡಬೇಕು ಎಂಬುದನ್ನು ಆಗಲೆ ಅವನು ಯೋಚಿಸಿದ್ದನು. ಪೊದರುಗಳ ಮರೆಯಲ್ಲಿ ರಾಜಮಾರ್ಗವನ್ನು ದಾಟಿ ಸುಲಭವಾಗಿ ನಗರವನ್ನು ಸೇರಬಹುದು. ನಗರದ ಮನೆ ಮಠ ಸತ್ರ ಧರ್ಮಶಾಲೆಗಳು ಪ್ರವಾಸಿಗಳಿಂದ ತುಂಬಿದ್ದವು. ಅವರ ನಡುವೆ ಸಂದಣಿಯಲ್ಲಿ ರಾತ್ರಿ ಕಳೆಯಬೇಕಾಗುವುದು.

ಆದರೆ ಆ ಕೂಡಲೆ ಉದ್ಯಾನವನ್ನು ಬಿಡುವುದು ಅಗ್ಗಳನಿಗೆ ಇಷ್ಟವಿರಲಿಲ್ಲ. ಬಿಡಾರದಲ್ಲಿ ರಾಣಿ ಕಾಮೇಶ್ವರಿ ವಿಪತ್ತಿನಲ್ಲಿ ಸಿಲುಕಿರುವಾಗ ರಾಣಿಯ ಮನೆಹೆಗ್ಗಡೆಯಾದ ನಾನು ಪ್ರಾಣ ಭಯದಿಂದ ನಗರಕ್ಕೆ ಓಡುವುದೇ ಎಂದು ಅಳುಕಿದನು.

ಸುಮಾರು ಹೊತ್ತು ಕಳೆದರೂ ಭಟರು ಬಾರದಿರುವುದನ್ನು ಕಂಡು, ಉದ್ಯಾನದಲ್ಲಿ ನನ್ನನ್ನು ಹುಡುಕುವ ಯೋಚನೆಯನ್ನೇ ಅವರು ಬಿಟ್ಟಿರಬೇಕು ಎಂದು ಅಗ್ಗಳನು ತಿಳಿದನು. ಅರಮನೆಯ ದೀಪಗಳು ಆರಿ, ಜನರು ನಿದ್ರೆ ಮಾಡಿದ ಮೇಲೆ ಮೊಗಶಾಲೆ ವಾತಾಯನಗಳ ಮುಖಾಂತರ ರಾಣಿಯ ಬಿಡಾರವನ್ನು ಪ್ರವೇಶಿಸಬಹುದೆಂದೂ, ಏನೇ ಆಗಲಿ ರಾಣಿಯನ್ನು ಕಂಡು ಮಾತಾಡಿದಲ್ಲದೆ ಉದ್ಯಾನದಿಂದ ಹೊರಗೆ ಹೋಗಲಾಗದೆಂದೂ ನಿರ್ಧರಿಸಿಕೊಂಡು ಹೊದರಿನಡಿಯಲ್ಲಿ ಅಡಗಿ ಕುಳಿತನು.

ಅರಮನೆಯ ಆ ಪಾರ್ಶ್ವದ ಉಪ್ಪರಿಗೆಯಲ್ಲಿ ಆರು ದೊಡ್ಡ ಮೊಗಶಾಲೆಗಳೂ, ಅನೇಕ ವಾತಾಯನ ಜಾಲಂದ್ರಗಳೂ ಇದ್ದವು. ಕೆಳಗಿನ ಅಂತಸ್ತು ಅದೇ ಮಾದರಿಯಲ್ಲಿ ರಚಿತವಾಗಿತ್ತು. ಅವುಗಳಲ್ಲಿ ಕೆಲವು ಕತ್ತಲಾಗಿದ್ದವು. ಇನ್ನುಳಿದ ಮೊಗಶಾಲೆ ವಾತಾಯನಗಳು, ಅವುಗಳ ಹಿಂದಿನ ಕೊಠಡಿಗಳಲ್ಲಿ ಉರಿಯುತ್ತಿದ್ದ ದೀಪಮಾಲಿಕೆಗಳ ಬೆಳಕನ್ನು ಹೊರಗೆ ಚೆಲ್ಲಿ, ಉದ್ಯಾನದ ಎಲ್ಲ ಕಡೆ ಬೆಳಕು ನೆರಳಿನ ಚಿತ್ರಗಳನ್ನು ಬರೆದಿದ್ದವು. ಎಲ್ಲಿಯೂ ಕಾವಲುಗಾರರ ಸುಳಿವಿರಲಿಲ್ಲ.