ಪುಟ:ಕ್ರಾಂತಿ ಕಲ್ಯಾಣ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೨

ಕ್ರಾಂತಿ ಕಲ್ಯಾಣ


ಅರಮನೆಯ ಒಂದು ಕೊನೆಯಲ್ಲಿ ದೀಪಮಾಲಿಕೆಗಳಿಂದ ಬೆಳಗುತ್ತಿದ್ದ ಮೊದಲ ಮೊಗಶಾಲೆ, ತಾನು ತಪ್ಪಿಸಿಕೊಂಡು ಬಂದ ಪಾನಶಾಲೆಗೆ ಸೇರಿದುದೆಂದು ಅಗ್ಗಳನ್ನು ತಿಳಿದನು. ಎರಡು ಮೂರನೆಯ ಮೊಗಶಾಲೆಗಳ ಪ್ರಕಾಶಮಾನವಾದ ಬೆಳಕು, ಅವು ಸಭಾಂಗಣಕ್ಕೆ ಸೇರಿದವುಗಳೆಂಬುದನ್ನು ಸೂಚಿಸುತ್ತಿದ್ದವು. ಉಳಿದ ಮೂರು ಮೊಗಶಾಲೆಗಳ ಹಿಂದೆ ರಾಣಿಯ ಬಿಡಾರವಿರಬೇಕು. ಆ ದಿನ ಪೂರ್ವಾಹ್ನದಲ್ಲಿ ರಾಣಿಯ ದರ್ಶನಕ್ಕೆ ಹೋಗಿದ್ದಾಗ ವಾತಾಯನದಿಂದ ಶೂಲದ ಮರವನ್ನು ತೋರಿಸಿದುದು ಅಗ್ಗಳನಿಗೆ ನೆನಪಾಯಿತು. ಎಲ್ಲ ಮೊಗಶಾಲೆಗಳಿಂದ ಆಚೆ, ಅರಮನೆಯ ಇನ್ನೊಂದು ಕೊನೆಯಲ್ಲಿ ಮಹಾದ್ವಾರ. ಇಷ್ಟು ಹೊತ್ತಿಗೆ ರಾಣಿ ಸಭಾಂಗಣದಿಂದ ಹೊರಟು ಬಿಡಾರವನ್ನು ಸೇರಿರಬೇಕು.

ಕರ್ಣದೇವನು ಹೇಳಿದ್ದು ನಿಜವಾದರೆ-
ರಾಣಿ ಕಾಮೇಶ್ವರಿಯ ಜೀವಿತದಲ್ಲಿ ಇದೆಂತಹ ದುರ್ದಿನ !

ಚಾಲುಕ್ಯ ಅರಸೊತ್ತಿಗೆಯನ್ನು ಪುನಃ ಪಡೆಯಲು ಕಳೆದ ಒಂದು ವರ್ಷದಿಂದ, ರಾಣಿ ಕಾಮೇಶ್ವರಿ ಯಾರ ವಿರುದ್ಧ ಒಳಸಂಚು ನಡೆಸುತ್ತಿದ್ದಳೋ ಆ ಬಿಜ್ಜಳನ ಅರಮನೆಯಲ್ಲೇ ಈಗ ಅವಳು ಸ್ವಯಂ ಬಂದಿಯಾಗಿದ್ದಾಳೆ. ದುರ್ದೈವವೆಂದರೆ, ಬಂದಿಯೆಂಬ ಅರಿವೂ ರಾಣಿಗಿರುವುದಿಲ್ಲ.

ಎಂಥ ವಿಚಿತ್ರ ಪರಿಸ್ಥಿತಿ ಇದು !

ಸಿಡಿಲಂತೆ ಎರಗಿ ಬರುತ್ತಿರುವ ಈ ವಿಪತ್ತಿನಿಂದ ರಾಣಿಯನ್ನು ರಕ್ಷಿಸುವುದು ಕುಮಾರ ಸೋಮೇಶ್ವರನಿಗೆ ಮಾತ್ರವೇ ಸಾಧ್ಯ. ಅವನೀಗ ಮಂಗಳವೇಡೆಯ ಮಹಾ ಮಂಡಲೇಶ್ವರ, ಚಾಲುಕ್ಯ ರಾಜ್ಯದ ಸಾಮಂತರಲ್ಲಿ ಹೆಚ್ಚು ಪ್ರಭಾವಶಾಲಿ. ಇದುವರೆಗೆ ಕಲ್ಯಾಣದ ಬಳಿಯಿದ್ದ ಅವನ ದೊಡ್ಡ ಸೈನ್ಯ ಈಗ ಮಂಗಳವೇಡೆಗೆ ಬಂದು ನಗರದ ಹೊರಗೆ ಬೀಡು ಬಿಟ್ಟಿದೆ. ನಾಳಿನ ವಿಜಯೋತ್ಸವದ ಮೆರವಣೀಗೆ ಮುಗಿಯುತ್ತಲೆ ಆ ಮಹಾಸೈನ್ಯ ಮಂಗಳವೇಡೆಯ ಕೋಟೆಯನ್ನು ಪ್ರವೇಶಿಸುವುದು. ಕರ್ಣದೇವನ ಆಧೀನಸ್ಥವಾದ ಬಿಜ್ಜಳನ ಸೈನ್ಯ ಪಡೆಗಳು ಕಲ್ಯಾಣಕ್ಕೆ ಮರಳುವವು. ಮಂಗಳವೇಡೆಯ ಸಾಮಂತರು, ನಾಗರಿಕರು, ಈ ಸೈನ್ಯ ಪರಿವರ್ತನೆಯನ್ನು ಉತ್ಸಾಹ ಆತಂಕಗಳ ಮಿಶ್ರಭಾವದಿಂದ ಎದುರು ನೋಡುತ್ತಿದ್ದರೆಂಬುದನ್ನು ಅಗ್ಗಳನು ತಿಳಿದಿದ್ದನು.

ಆದರೆ ರಾಜ್ಯಭಾರ ನಿರೂಪಣೆಯ ಮೊದಲ ಹಂತದಲ್ಲಿಯೇ ತಂದೆಯ ವಿರುದ್ಧ ರಾಣಿಯ ಸಹಾಯಕ್ಕೆ ಬರಲು ಸೋಮೇಶ್ವರನು ಒಪ್ಪುವನೆ?

ಈ ಎಲ್ಲ ವಿಚಾರಗಳನ್ನು ತನ್ನಲ್ಲಿ ತಾನು ಅಳೆದು ಸುರಿದು ಯೋಚಿಸುತ್ತ