ಪುಟ:ಕ್ರಾಂತಿ ಕಲ್ಯಾಣ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೨

ಕ್ರಾಂತಿ ಕಲ್ಯಾಣ


ಬಿಡಿಸಿದ್ದಾನೆ. ಆ ಶಿಲ್ಪಿಯ ಅವಿನಯ ಶಾಂತಲೆಯ ದುರ್ಮರಣಕ್ಕೆ ಕಾರಣವಾಯಿತೆಂದು ಜನ ಹೇಳುವುದನ್ನು ಕೇಳಿದ್ದೇನೆ.”

“ಇನ್ನು ಕೆಲವರು ಹೇಳುತ್ತಾರೆ, ಹೊಸದಾಗಿ ಗರುಡನಾದ ತರುಣನೊಬ್ಬನ ದುಡುಕತನ ದುರಂತದ ಕಾರಣವೆಂದು. ರಾಜಕಾರಣಿಗಳಾದ ನೀವು ಈ ದಂತಕಥೆಗಳನ್ನು ನಂಬುವಿರಾ ?”

“ಸತ್ಯಕಥೆ ತಿಳುಯುವವರೆಗೆ ದಂತಕಥೆ ಪ್ರಚಾರದಲ್ಲಿರುವುದು ಸಹಜ.”

ಕಾಮೇಶ್ವರಿ ಆವೇಶದಿಂದ, “ಸತ್ಯಕಥೆ ನನಗೆ ತಿಳಿದಿದೆ. ಶಾಂತಲೆಯ ಮರಣಕ್ಕೆ ಕಾರಣ ಶಿಲ್ಪಿಯ ಅವಿನಯವೂ ಅಲ್ಲ, ಗರುಡನ ದುಡುಕುತನವೂ ಅಲ್ಲ. ಪುರುಷರು ಪ್ರತಿನಿತ್ಯ ನಡೆಸುವ ಅದಮ್ಯ ಅತ್ಯಾಚಾರ ! ವಿಷ್ಣುವರ್ಧನನಂತಹ ಲಂಪಟ ನಿರಂಕುಶ ಬರ್ಭರ ರಾಜನ ಭೋಗಿನಿ ಆಗಿರಲು ನಿರಾಕರಿಸಿ ಶಾಂತಲೆ ಸಾವನ್ನಪ್ಪಿದಳು,” ಎಂದು ನುಡಿದಳು.

ಶಾಂತಲೆಯನ್ನು ಕುರಿತು ಆಗ ಪ್ರಚಾರದಲ್ಲಿದ್ದ ಅಪವಾದಗಳ ಅನೀತಿ ಅಸತ್ಯ ಆತ್ಯಾಚಾರಗಳೂ ಕಾಮೇಶ್ವರಿಯನ್ನು ಕೆರಳಿಸಿದ್ದವು. ಶಾಂತಲೆ ಮೃತಳಾದ ಕೆಲವೇ ತಿಂಗಳ ಅನಂತರ ವಿಷ್ಣುವರ್ಧನನು ರೂಪವತಿಯರಾದ ಇಬ್ಬರು ಸೋದರಿಯರನ್ನು ಏಕಕಾಲದಲ್ಲಿ ಮದುವೆಯಾದದ್ದು ಅವಳಿಗೆ ತಿಳಿದಿತ್ತು

“ಈ ಆವೇಶ ನಿನಗೊಪ್ಪುವುದು, ರಾಣಿ !”-ಎಂದು ಬಿಜ್ಜಳನು ಪುನಃ ಮೆಚ್ಚುಗೆಯ ಮಾತಾಡಿದನು.

“ನಿಮ್ಮ ಪಟ್ಟಿಯಲ್ಲಿ ಉಳಿದಿರುವ ಇನ್ನೆರಡು ಹೆಸರುಗಳ ವಿಚಾರದಲ್ಲಿ ನನ್ನ ವಿವರಣೆ ಕೇಳಿದ ಮೇಲೆ ಮೆಚ್ಚುಗೆ ಉಳಿಯುವುದೇ ಎಂದು ನನ್ನ ಸಂದೇಹ,”ಎಂದು ಕೊಂಕು ನುಡಿದಳು ಕಾಮೇಶ್ವರಿ.

“ವಿವರಣೆ ಮುಗಿದರೆ ನಿನಗೇ ಅದು ತಿಳಿಯುವುದು,”-ಎಂದು ಬಿಜ್ಜಳನು ಮಾರ್ಮಿಕವಾಗಿ ಉತ್ತರಿಸಿದನು.

ಕಾಮೇಶ್ವರಿ ಹೇಳಿದಳು : “ಬೇಟೆಯ ಅರಣ್ಯದ ಅಂಚಿನಲ್ಲಿದ್ದ ಒಂದು ಸಣ್ಣ ಹಳ್ಳಿಯಲ್ಲಿ ನಾವು ಬಿಡಾರ ಮಾಡಿದ್ದೆವು. ಆ ರಾತ್ರಿ ನಾನು ಜಗದೇಕಮಲ್ಲರಸರ ಶಿಬಿರಕ್ಕೆ ಹೋಗಿದ್ದಾಗ ನಿಮ್ಮ ಸಹೋದರ ಕರ್ಣದೇವನು ಬಿಡಾರದಲ್ಲಿದ್ದ ಕದಂಬ ರಾಜಕನ್ಯೆ ಕುಸುಮಾವಳಿಯ ಮೇಲೆ ನಡೆಸಿದ ಅತ್ಯಾಚಾರ ಪ್ರಯತ್ನ ಮುಂದಿನ ದುರ್ಘಟನೆಗೆ ಕಾರಣವಾಯಿತು. ರಾಜಕನ್ಯೆಯ ಸಹಾಯಕ್ಕೆ ಹೋದ ಶೀಲವಂತ ಕರ್ಣದೇವನ ಕೋಪಕ್ಕೆ ಪಾತ್ರನಾದನು. ನಾನು ಕಲ್ಯಾಣಕ್ಕೆ ಹಿಂದಿರುಗಿದ ದಿನ ರಾತ್ರಿ, ಕರ್ಹಾಡಕ್ಕೆ ಮರುದಿನ ಮುಂಜಾವಿನಲ್ಲಿ ಪಯಣಮಾಡಲು ಸಿದ್ಧಳಾಗುತ್ತಿದ್ದಂತೆ,