ಪುಟ:ಕ್ರಾಂತಿ ಕಲ್ಯಾಣ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೮೩


ಕರ್ಣದೇವ ನನ್ನನ್ನು ನೋಡಲು ಬಂದನು. ಶೀಲವಂತನಿಗೆ ನಾನು ಬಹುಮಾನವಾಗಿ ಕೊಟ್ಟಿದ್ದ ಕಡಗವನ್ನು ತೋರಿಸಿ ಬೆದರಿಸಿದನು. ಶೀಲವಂತನ ಪ್ರಾಣವನ್ನುಳಿಸಲು ನಾನು ಕರ್ಣದೇವನ ಸಲಹೆಗೆ ಒಪ್ಪಿದೆ. ಅವನನ್ನು ಅಂತಃಗೃಹಕ್ಕೆ ಕರೆದುಕೊಂಡು ಹೋಗಿ ತಲ್ಪದ ಮೇಲೆ ಕುಳ್ಳಿರಿಸಿ ಮಧುಪಾತ್ರೆಯನ್ನು ಮುಂದಿಟ್ಟೆ. ಆಮೇಲಿನ ಘಟನೆಗಳು ಯಾಂತ್ರಿಕವಾಗಿ ನಡೆದವು. ನಾಲ್ಕಾರು ಬಟ್ಟಲು ಮಧುವನ್ನು ಕುಡಿದು ಕರ್ಣದೇವ ಮತ್ತನಾದ. ನಾನು ಅಲ್ಲಿಂದ ಸರಿದು ನನ್ನಂತೆ ವೇಷ ಭೂಷಣಗಳನ್ನು ಧರಿಸಿದ್ದ ದಾಸಿಯನ್ನು ಕಳುಹಿಸಿದೆ. ಕರ್ಣದೇವನೊಡನೆ ಆ ರಾತ್ರಿಯನ್ನು ಕಳೆದವಳೂ ಆ ದಾಸಿ, ನಾನಲ್ಲ.”

“ಆಹಾ ! ರಾಣಿ ದಾಸಿಯರ ನಡುವಣ ಅಂತರವನ್ನು ತಿಳಿಯಲು ಅಸಮರ್ಥನಾದನೇ ಕರ್ಣದೇವ !” –ಬಿಜ್ಜಳನು ಅವಿಶ್ವಾಸದಿಂದ ಹೇಳಿದನು.

“ಆಕಾರೇಂಗಿತಗಳಲ್ಲಿ ಆ ದಾಸಿ ನನ್ನನ್ನು ಬಹುಮಟ್ಟಿಗೆ ಹೋಲುತ್ತಾಳೆ. ನನ್ನಂತೆ ಉಡುಪು ಧರಿಸಿದರೆ ಪರಿಚಿತರಿಗೆ ಕೂಡಾ, ರಾಣಿ ಯಾರು, ದಾಸಿ ಯಾರು, ಎಂದು ತಿಳಿಯಲು ಕಷ್ಟವಾಗುವುದು.”

“ಹಾಗಾದರೆ ನನ್ನೆದುರಿಗಿರುವ ಈ ಹೆಣ್ಣು ರಾಣಿಯೋ ದಾಸಿಯೋ ?”
-ಎಂದು ಬಿಜ್ಜಳನು ಮಂಚದಿಂದಿಳಿದು ಕಾಮೇಶ್ವರಿಯ ಕೈಹಿಡಿದನು.

“ನನ್ನ ಕೈಬಿಡಿರಿ. ಗರುಡ ಹಕ್ಕಿಯಂತೆ ಮೇಲೆರಗಿ ಅಸಲು ಮಾಲನ್ನೇ ಅಪಹರಿಸಿದಿರಿ ನೀವು. ವಂಚಿಸುವ ಅವಕಾಶವೂ ಇರಲಿಲ್ಲ ನನಗೆ,”-ಎಂದು ಕಾಮೇಶ್ವರಿ ಚಡಪಡಿಸಿದಳು.

ಬಿಜ್ಜಳನು ಬಟ್ಟೆಗಳನ್ನು ಉಡುತ್ತಿದ್ದಂತೆ ಕಾಮೇಶ್ವರಿ ಮುಂದುವರಿದು ಹೇಳಿದಳು : “ಇನ್ನು ಅಗ್ಗಳನ ವಿಚಾರ. ಅವನು ನನ್ನ ಸ್ವಾಮಿನಿಷ್ಠ ಸೇವಕನು ಮಾತ್ರ. ಅಣ್ಣ ವಿಜಯಾರ್ಕನ ಸಮಕ್ಷಮ ರಾಜನಿಷ್ಠೆಯ ಪ್ರಮಾಣ ಮಾಡಿದ ಮೇಲೆ ಅವನು ನನ್ನ ಮನೆಹೆಗ್ಗಡೆ ಆದನು. ಅವನೊಡನೆ ನಾನು ಸಲಿಗೆಯಿಂದ ನಡೆದುಕೊಂಡರೂ ಸಭ್ಯತೆಯನ್ನು ಮೀರಿಲ್ಲ. ಬಾಲ್ಯದಿಂದ ನನಗೆ ಅಭ್ಯಾಸವಾಗಿದ್ದ ಸಂಯಮ, ಕವಿಗೆ ಸಹಜವಾದ ಗಂಭೀರ ವರ್ತನೆ, ಇವು ನಮ್ಮನ್ನು ರಕ್ಷಿಸಿದವು.”

“ಹಾಗಾದರೆ ಈ ಪದ್ಯದ ಅರ್ಥ ?” ಎಂದು ಬಿಜ್ಜಳನು ವಾಸಗೃಹದ ಪೀಠದ ಮೇಲಿದ್ದ ವರ್ಣಚಿತ್ರವನ್ನು ತೆಗೆದು ಕಾಮೇಶ್ವರಿಗೆ ಕೊಟ್ಟನು. ಕಡತದ ಹಾಳೆಯೊಂದನ್ನು ಚಿತ್ರಕ್ಕೆ ಕೂಡಿಸಿತ್ತು.

ಕಾಮೇಶ್ವರಿ ನೋಡಿದಳು. ಶೀಲವಂತ ಬರೆದ ನಗ್ನಚಿತ್ರ ಅದು ! ಕಡತದ ಹಾಳೆಯಲ್ಲಿ, ಶಾಂತಲೆಯನ್ನು ಕುರಿತ ಪದ್ಯದ ಅಡಿಯಲ್ಲಿ ಮುಂದಿನ ಪದ್ಯವಿತ್ತು: