ಪುಟ:ಕ್ರಾಂತಿ ಕಲ್ಯಾಣ.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೯೫

ಕಾಣಿಸಿದ್ದು. ದಾಸಿಯರ ಕೂಗು ಕೇಳಿ ಪಾರ್ಶ್ವದ ಚಾವಡಿಯಲ್ಲಿದ್ದ ನಾನು ಓಡಿ ಬಂದೆ. ಬಿಡಾರ ಹತ್ತಿ ಉರಿಯುತ್ತಿತ್ತು. ಮೆಟ್ಟಲುಗಳಿಂದ ಮೇಲೆ ಹೋಗಲು ಪ್ರಯತ್ನಿಸಿದೆವು. ಉರಿಯಿಂದ ಸಾಧ್ಯವಾಗಲಿಲ್ಲ."

"ರಾಣಿ ಕಾಮೇಶ್ವರೀದೇವಿಯೆಲ್ಲಿ?"

"ಬೆಂಕಿ ಬಿದ್ದಾಗ ಅವರು ಬಿಡಾರದಲ್ಲಿದ್ದರೆಂದು ರಾಣಿಯ ದಾಸಿಯರು ಹೇಳುತ್ತಾರೆ. ಅವರು ಮತ್ತು ಕುಮಾರ ಪ್ರೇರ್ಮಾರ್ಣವನು ಬೆಂಕಿಯಲ್ಲಿ ಮಡಿದಿರಬೇಕು. ಅವರನ್ನು ಉಳಿಸಲು ನಾವು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾದುವು."

ಬಿಜ್ಜಳನು ಕೆಲವು ಕ್ಷಣಗಳು ಮೌನವಾಗಿ ಚಿಂತಿಸಿದನು. ಕಾಮೇಶ್ವರಿಯ ದುರಂತ ಅವನನ್ನು ಸ್ತಂಭಿತಗೊಳಿಸಿತ್ತು. ಬೆಂಕಿಯು ಆಕಸ್ಮಿಕವೇ? ಅಥವಾ ಉದ್ದೇಶಪೂರ್ವಕವೇ? ಹಾಗಿದ್ದರೆ ಅದಕ್ಕೆ ಕಾರಣರಾರು? ಸ್ವಯಂ ಕಾಮೇಶ್ವರಿಯೇ, ಹೊರಗಿನವರೆ? ಅಂದು ಮುಂಜಾವಿನಲ್ಲಿ ರಾಣಿ ಜ್ವರಪೀಡಿತೆಯಾಗಿರುವರೆಂದು ಮನೆಹೆಗ್ಗಡೆ ಹೇಳಿದಾಗ, ಭಾವೋದ್ರೇಕವೇ ಜ್ವರದ ಕಾರಣವೆಂದೂ, ವಿಶ್ರಾಂತಿಯಿಂದ ಸ್ವಸ್ಥಳಾಗುವಳೆಂದೂ ಭಾವಿಸಿ ಬಿಜ್ಜಳನು ಉಪೇಕ್ಷಿಸಿದ್ದನು. ಕಳೆದ ರಾತ್ರಿ ನಡೆದ ಘಟನೆಗಳಿಂದ ರಾಣಿಗೆ ಅಸಮಾಧಾನವಾಗಿರಬಹುದೇ ಎಂಬ ಸಂದೇಹ ಬಾರಿ ಬಾರಿಗೆ ಅವನ ಮನಸ್ಸಿನಲ್ಲಿ ಇಣುಕುತ್ತಿತ್ತು.

ತುಸುಹೊತ್ತಿನ ಮೇಲೆ ಅವನು, ಈಗ ರಾಣಿಯ ದಾಸಿಯರೆಲ್ಲಿದ್ದಾರೆ? ಎಂದು ಹೆಗ್ಗಡೆಯನ್ನು ಕೇಳಿದನು.

ರಾಣಿಯ ದಾಸಿಯರು ಉದ್ಯಾನದ ಒಂದು ಸುರಕ್ಷಿತ ಪ್ರದೇಶದಲ್ಲಿ ಗುಂಪಾಗಿ ಅಳುತ್ತ ನಿಂತಿದ್ದರು. ಮನೆಹೆಗ್ಗಡೆ ಮುಖ್ಯ ದಾಸಿಯನ್ನು ಕರೆತಂದು ಬಿಜ್ಜಳನ ಮುಂದೆ ನಿಲ್ಲಿಸಿದನು.

"ಬೆಂಕಿ ಮೊದಲಾದಾಗ ಬಿಡಾರದಲ್ಲಿ ಯಾರಿದ್ದರು?* -ಬಿಜ್ಜಳನು ದಾಸಿಯನ್ನು ಕೇಳಿದನು.

"ರಾಣಿಯವರು ಮತ್ತು ಕುಮಾರ ಪ್ರೇಮಾರ್ಣವ," -ದಾಸಿ ಉತ್ತರಕೊಟ್ಟಳು.
"ನೀವೆಲ್ಲರೂ ಎಲ್ಲಿ ಹೋಗಿದ್ದಿರಿ?"
"ಮೆರವಣಿಗೆ ನೋಡಲು ನಗರಕ್ಕೆ ಹೋಗಿದ್ದೆವು."

"ರಾಣಿ ಅಸ್ವಸ್ಥರೆಂದು ನಿಮಗೆ ತಿಳಿದಿರಲಿಲ್ಲವೆ? ಅವರೊಬ್ಬರನ್ನೇ ಬಿಡಾರದಲ್ಲಿ ಬಿಟ್ಟು ನೀವೆಲ್ಲರೂ ಹೊರಗೆ ಹೋದದ್ದು ಹೇಗೆ?

"ನಮ್ಮಲ್ಲೊಬ್ಬರಿಗೂ ಹೋಗುವ ಇಷ್ಟವಿರಲಿಲ್ಲ. ರಾಣಿಯವರೆ ಒತ್ತಾಯದಿಂದ ನಮ್ಮನ್ನು ಕಳುಹಿಸಿದರು."