ಪುಟ:ಕ್ರಾಂತಿ ಕಲ್ಯಾಣ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ರಾಂತಿ ಕಲ್ಯಾಣ

ಕೊರೆಯಿಸುವುದು ಅವರ ಯೋಜನೆ. ಅದಕ್ಕಾಗಿ ಅವರು ಈಗೆರಡು ವರ್ಷಗಳಿಂದ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.”-ಅಗ್ಗಳನು ಉತ್ತರಿಸಿದನು.

ದೇವಗಿರಿಗೆ ಹೋಗಿದ್ದಾಗ ಇಂತಹ ಯೋಜನೆಯೊಂದು ನಡೆಯುತ್ತಿರುವುದಾಗಿ ಕ್ರಮಿತನು ಕೇಳಿದ್ದನು. ಅನ್ಯಮತೀಯರ ಚಟುವಟಿಕೆಗಳ ಬಗೆಗೆ ಪ್ರೋತ್ರಿಯನಿಗೆ ಸಹಜವಾದ ಉದಾಸೀನ ತಾತ್ಸಾರಗಳಿಂದ ಆ ವಿಚಾರವಾಗಿ ಹೆಚ್ಚು ವಿವರಗಳನ್ನು ತಿಳಿಯಲು ಪ್ರಯತ್ನಿಸಿರಲಿಲ್ಲ. ಸಮಯಸ್ಫೂರ್ತಿಯಿಂದ ಅಗ್ಗಳನು ಹೇಳಿದ ಕಲ್ಪಿತ ಕಥೆಯನ್ನು ಅವನು ನಿಜವೆಂದೇ ಭಾವಿಸಿ, “ಈಗ ಬ್ರಹ್ಮರಾಜ ಸೇಟರು ಎಲ್ಲಿ ಹೋಗಿದ್ದಾರೆ?” ಎಂದು ಕೇಳಿದನು.

ರಹಸ್ಯ ನುಡಿಯುತ್ತಿರುವಂತೆ ದನಿ ತಗ್ಗಿಸಿ ಅಗ್ಗಳನ್ನು ಹೇಳಿದನು : “ವರ್ಣಾಶ್ರಮ ಧರ್ಮದ ವಿರುದ್ದ ಶರಣರು ಪ್ರಾರಂಭಿಸಿರುವ ಹೊಸ ಆಂದೋಳನದ ವಿಚಾರ ಕೇಳಿದಾಗ ಬ್ರಹ್ಮರಾಜ ಸೇಟರಿಗೆ ಬಹಳ ಅಸಮಾಧಾನವಾಯಿತು. ವೈದಿಕ ಧರ್ಮದ ವಿರುದ್ಧವಾಗಿ ನಡೆಯುವ ಯಾವ ಚಳುವಳಿಯೇ ಆಗಲಿ, ಸಮಾಜದ ಅಸ್ತಿತ್ವದೃಢತೆಗಳಿಗೆ ಅಪಾಯಕಾರಿಯೆಂದು ಅವರು ನಂಬಿದ್ದಾರೆ. ಈ ಚಳುವಳಿಯ ಸುಳಿಯಲ್ಲಿ ಸಿಕ್ಕು ಬಸವಣ್ಣನವರು ದೇಶನಿರ್ವಾಸಿತರಾದರು. ಈಗಲಾದರೂ ಬುದ್ದಿ ಕಲಿತು ವಿರೋಧವನ್ನು ನಿಲ್ಲಿಸಿ-ಎಂದು ಶರಣರಿಗೆ ಹೇಳುವುದು ಅವರ ಉದ್ದೇಶ. ಕಲ್ಯಾಣದಲ್ಲಿ ಶರಣ ಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಿರುವ ಶೆಟ್ಟಿಸಾಮಂತರ ಸಭೆ ಕರೆಸುವ ಏರ್ಪಾಡಿಗಾಗಿ ಅವರು ವೀರಬಣಂಜು ಸಂಘದ ನಾನಾದೇಶಿ ಚಾವಡಿಗೆ ಹೋಗಿದ್ದಾರೆ :

ಕ್ರಮಿತನಿಗೆ ಆಶ್ಚರ್ಯವಾಯಿತು. ಅಗ್ಗಳನು ಹೇಳುತ್ತಿರುವುದು ನಿಜವೆ? ಅಥವಾ ಕವಿ ಕಲ್ಪನೆಯ ಕನಸೆ? ಎಂದು ಅವನು ಯೋಚಿಸಿದನು.......

....ಕಲ್ಯಾಣದ ಶೆಟ್ಟಿಸಾಮಂತರಲ್ಲಿ ಬಹುಸಂಖ್ಯಾತರು ಶೈವರು; ನಗರದ ನೂರೊಂದು ಶೈವಮಠಗಳಲ್ಲಿ ಯಾವುದಾದರೊಂದು ಮಠಕ್ಕೆ ಶಿಷ್ಯರಂತೆ ನಡೆದುಕೊಳ್ಳುತ್ತಿದ್ದಾರೆ. ಬಸವಣ್ಣನವರ ಆರು ವರ್ಷಗಳ ನಿರಂತರ ಪರಿಶ್ರಮದಿಂದ ಈಗ ಆ ಮಠಗಳೆಲ್ಲ ಶರಣಧರ್ಮದ ಕೇಂದ್ರಗಳಾಗಿವೆ. ಅವುಗಳ ಶಿಷ್ಯರು ಶರಣರಾಗಿದ್ದಾರೆ. ಉತ್ತರಾಪಥದಿಂದ ದಕ್ಷಿಣಕ್ಕೆ ಬಂದ ವಿಧರ್ಮಿ ವರ್ತಕನೊಬ್ಬನು, ಅವನು ಎಂತಹ ಶ್ರೀಮಂತನೇ ಆಗಿರಲಿ, ಅವರ ಮೇಲೆ ಪ್ರಭಾವ ಬೀರಲು ಸಮರ್ಥನಾಗುವನೆಂಬುದು ತೀರ ಅಸಂಭವ, ವಿಫಲತೆಯ ಶಾಪದೊಡನೆ ಹುಟ್ಟಿ ವಿಷಾದದಲ್ಲಿ ಮುಗಿಯುವ ದೂರದ ಆಸೆ. ಆದರೂ ಅನಪೇಕ್ಷಿತವಾಗಿ ದೊರಕಿದ ಈ ಸಹಾಯ ವೈದಿಕ ಧರ್ಮದ ಬಗೆಗೆ ಜನರಲ್ಲಿ ತಲೆ ಎತ್ತುತ್ತಿರುವ ಪರಿವರ್ತನೆಗೆ