ಪುಟ:ಕ್ರಾಂತಿ ಕಲ್ಯಾಣ.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೯೭

ಸದ್ಯದಲ್ಲಿ ಅರಮನೆಯ ಸುತ್ತ ಕಾವಲು ಹೆಚ್ಚಿಸು. ಹೊರಗಿನವರಾರೂ ಉರಿಯುತ್ತಿರುವ
ಬಿಡಾರದ ಹತ್ತಿರಹೋಗದಂತೆ ನೋಡಿಕೊಳ್ಳಬೇಕು. ಈ ದಾಸಿಯರಿಗೆ ಪ್ರತ್ಯೇಕ
ಬಿಡಾರವನ್ನು ಗೊತ್ತುಮಾಡಿ ಯಾರೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸು,” ಎಂದು
ಆಜ್ಞೆಮಾಡಿದನು.
ಉಪ್ಪರಿಗೆಯ ಚಾವಣಿ ಗೋಡೆಗಳು ಕುಸಿದು ದೊಡ್ಡ ಶಬ್ದವಾಯಿತು.
ಉರಿ ಹೆಚ್ಚಿ ಗಗನಕ್ಕೇರಿತು.
ಆಗ ಮೆರವಣಿಗೆಯಿಂದ ಹಿಂದಿರುಗಿದ ಸೋಮೇಶ್ವರನು ಅಲ್ಲಿಗೆ ಬಂದನು.
ಆಗಲೇ ಅವನ ಸೈನ್ಯದಳಗಳು, ಬೆಂಕಿ ನಗರದ ಬೇರೆ ಕಡೆಗೆ ಹರಡದಿರಲು
ಅಗತ್ಯವಾದ ಎಚ್ಚರಿಕೆಯ ಕಾರ್ಯಗಳಲ್ಲಿ ತೊಡಗಿದ್ದವು.
ಬಿಜ್ಜಳನು ಸೋಮೇಶ್ವರನನ್ನು ಹತ್ತಿರ ಕರೆದು ದುಗುಡತುಂಬಿದ ಕಂಠದಿಂದ,
“ಗ್ರಹಗಳೆಲ್ಲ ನನಗೆ ವಿರುದ್ಧವಾಗಿವೆ. ಸೋಮೇಶ್ವರ, ರಾಜ್ಯಭಾರ
ನಿರೂಪಣದಿಂದ ಮಣಿಹ ಮುಗಿಯಿತೆಂದು ಭಾವಿಸಿದ್ದೆ. ಮೇಘವಿಲ್ಲದ ಮುಗಿಲಿಂದ
ಬರಸಿಡಿಲು ಬಡಿದಂತೆ ಈ ಅಗ್ನಿದುರಂತ ಬಂದೊದಗಿತು. ವಿಜಯಾರ್ಕದೇವರಿಗೆ
ನಾಳೆಯೇ ಸುದ್ದಿ ಕಳುಹಿಸಬೇಕು. ಏನೆಂದು ಬರೆಯುವುದು ಎಂದು
ಯೋಚಿಸುತ್ತಿದ್ದೇನೆ,” ಎಂದು ವೈರಾಗ್ಯದ ಸೋಗು ಹಾಕಿದನು.
ತಂದೆಯ ವಂಚಕ ದ್ವಿಮುಖ ನೀತಿಯನ್ನು ಅರಿತಿದ್ದ ಸೋಮೇಶ್ವರನು
ಉತ್ತರ ಕೊಡಲಿಲ್ಲ. ಕೊಂಚ ಹೊತ್ತು ಮೌನವಾಗಿ ನಿಂತಿದ್ದು ಬಳಿಕ ಮೆಲ್ಲನೆ
ಅಲ್ಲಿಂದ ಸರಿದನು. ಕರ್ಹಾಡಕ್ಕೆ ದುರಂತದ ಸುದ್ದಿ ಕಳುಹಿಸುವ ಹೊಣೆಯನ್ನು
ತಂದೆಯೇ ವಹಿಸಿಕೊಂಡದ್ದರಿಂದ ಅವನಿಗೆ ಸಮಾಧಾನವಾಗಿತ್ತು.
ಅರಮನೆ ಆ ರಾತ್ರಿಯೆಲ್ಲ ಉರಿಯಿತು. ಮರುದಿನ ಮುಂಜಾವಿನಲ್ಲಿ
ಬಿಜ್ಜಳನು ಭಟರೊಡನೆ ಅಲ್ಲಿಗೆ ಬಂದಾಗ ಕೆಳಗಿನ ಅಂತಸ್ತಿನ ಗೋಡೆಗಳು ಮಾತ್ರ
ಉಳಿದಿದ್ದವು. ಒಡೆಯನ ಆಜ್ಞೆಯಂತೆ ಭಟರು ಕೆಂಡಗಳ ನಡುವೆ ಬೂದಿಯ
ರಾಶಿಯಲ್ಲಿ ಹುಡುಕಿದಾಗ ಬೆಂದ ಅಸ್ಥಿಗಳು ದೊರಕಿದವು.
ಭಟರು ಅವುಗಳನ್ನು ಆರಿಸಿ ತಂದು ಮುಂದೆ ಹರಡಿದಾಗ ಬಿಜ್ಜಳನು
ನಡುಗಿದನು, ಕಣ್ಣುಗಳು ನೀರಿಂದ ತುಂಬಿದವು.
.......ನಿನ್ನಿನ ರಾತ್ರಿಯ ಘಟನೆಗಳು ಕನಸೋ ಕಲ್ಪನೆಯೋ ವಿಲಾಸ
ವಿಭ್ರಮಗಳ ಅನಿಂದಿತ ಶುಭ್ರಕಾಂತಿಯಿಂದ ನಶ್ವರ ಜಗತ್ತನ್ನು ಬೆಳಗಿ, ಎಣಿಕೆಗೆ
ಬಾರದ, ಮಾತಿಗೆ ನಿಲುಕದ ಅಪ್ಪರ ಲೋಕಕ್ಕೆ ನನ್ನನ್ನು ಕರೆದೊಯ್ದ ಆ ಅತುಲ
ಸೌಂದರ್ಯ ರಾಶಿ ಇಂದೇನಾಯಿತು ? ಅದರ ಗುರುತಾಗಿ ನನಗೆ ಉಳಿದದ್ದು