ಪುಟ:ಕ್ರಾಂತಿ ಕಲ್ಯಾಣ.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೦೧

"ಬೆಂಕಿ ತಗುಲಿದ ಕಾರಣ ಗೊತ್ತಾಯಿತೇ? -ಕ್ರಮಿತನ ಉತ್ತರದಿಂದ ರುದ್ರಭಟ್ಟ ಪ್ರೋತ್ಸಾಹಗೊಂಡು ಪುನಃ ಕೇಳಿದನು.

"ಕಾರಣ ಗೊತ್ತಾಗಲಿಲ್ಲ. ಸರ್ವಾಧಿಕಾರಿಗಳು ವಿಚಾರಣೆ ನಡೆಸಿ ಬಿಡಾರದ ಕಾರ್ಯಕರ್ತನನ್ನು ಶೂಲಕ್ಕೇರಿಸಲು ಆಜ್ಞೆ ಮಾಡಿದರು."

"ಅವನಿಂದಾದ ಅಪರಾಧ?"

"ಚಾಲುಕ್ಯ ರಾಣಿಯ ಸಂಗಡ ಎಷ್ಟು ಜನ ದಾಸ ದಾಸಿಯರಿದ್ದರೆಂಬುದನ್ನು ಬರೆದಿಡದೆ ಹೋದದ್ದು. ಅವನ ಈ ಅಚಾತುರ್ಯದಿಮದ ಬೆಂಕಿಯಲ್ಲಿ ಎಷ್ಟು ಜನ ಬೆಂದರು ಎಂಬುದನ್ನು ಸರಿಯಾಗಿ ತಿಳಿಯಲಾಗಲಿಲ್ಲ."

"ರಾಣಿಯ ದಾಸಿಯರು ಏನು ಹೇಳುತ್ತಾರೆ?"

"ಬೆಂಕಿ ಬಿದ್ದಾಗ ರಾಣಿ ಮತ್ತು ಕುಮಾರ ಪ್ರೇಮಾರ್ಣವ, ಇಬ್ಬರೇ ಅರಮನೆಯಲ್ಲಿದ್ದದ್ದು ಎಂದು."

"ಕುಮಾರ ಪ್ರೇಮಾರ್ಣವನೂ ಮೃತನಾದನೆ?"

"ಮೃತನಾದನೆಂದು ದಾಸಿಯರು ಹೇಳುತ್ತಾರೆ. ಆದರೆ ಅದು ನಂಬಿಕೆಗೆ ಅರ್ಹವಲ್ಲ. ಸರ್ವಾಧಿಕಾರಿಗಳು ಅದನ್ನು ನಂಬಲಿಲ್ಲ."

"ನಂಬಲಿ, ನಂಬದಿರಲಿ, ಅಗ್ನಿಕಾಂಡದ ಕಾರಣವೇನೆಂಬುದನ್ನು ಕಲ್ಯಾಣದ ನಾಗರಿಕರು ತಿಳಿದಿದ್ದಾರೆ, ನಾರಣಕ್ರಮಿತರೆ."

"ಏನು ಹೇಳುತ್ತಾರೆ ನಾಗರಿಕರು?"

"ಅಪಮಾನಿತೆಯಾದ ಚಾಲುಕ್ಯರಾಣಿ ಕುಮಾರ ಪ್ರೇಮಾರ್ಣವನನ್ನು ಕರ್ಹಾಡಕ್ಕೆ ಕಳುಹಿಸಿ, ಬಳಿಕ ಅರಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಳೆಂದು."

ರುದ್ರಭಟ್ಟನ ಮಾತುಗಳನ್ನು ಕೇಳಿ ಕ್ರಮಿತನು ಕಂಪಿಸಿದನು. ಜನ ಹೇಳುವುದು ಸತ್ಯಕ್ಕೆ ದೂರವಲ್ಲವೆಂಬುದು ಅವನಿಗೆ ತಿಳಿದಿತ್ತು. ಆದರೆ ಅಪಘಾತ ನಡೆದ ಕೆಲವೇ ದಿನಗಳಲ್ಲಿ ಕಲ್ಯಾಣದಲ್ಲಿ ಸುದ್ದಿ ಹರಡಿದ್ದು ಹೇಗೆ? ಶರಣರೇ ಆ ಕಾರ್ಯ ಮಾಡಿರಬೇಕು ಎಂದು ಕ್ರಮಿತನು ನಿರ್ಧರಿಸಿಕೊಂಡನು.

ಕೆಲವು ಕ್ಷಣಗಳ ಮೇಲೆ ಅವನು ರುದ್ರಭಟ್ಟನ ಕಡೆಗೆ ಬಿರುನೋಟ ಬೀರಿ, "ಪ್ರಭುಗಳ ಧವಳ ಕೀರ್ತಿಗೆ ಕಳಂಕ ಹಚ್ಚಲು ನಮ್ಮ ವಿರೋಧಿಗಳು ಮಾಡುತ್ತಿರುವ ಈ ಅಪಪ್ರಚಾರವನ್ನು ನೀವು ನಂಬಿದಿರಾ?" ಎಂದು ಕೇಳಿದನು.

"ಜನ ಹೇಳದ್ದನ್ನೆಲ್ಲ ನಂಬುವ ತಿಳಿಗೇಡಿಯೇ ನಾನು, ನಾರಣಕ್ರಮಿತರೆ, ಜನಶ್ರುತಿ ಯಾವ ದಾರಿ ಹಿಡಿದಿದೆ ಎಂಬುದು ನಿಮಗೆ ತಿಳಿಯಲಿ ಎಂದು ಈ ವಿಚಾರವನ್ನು ನಿಮ್ಮ ಗಮನಕ್ಕೆ ತಂದೆ. ನೀವು ರಾಜಪುರೋಹಿತರು,