ಪುಟ:ಕ್ರಾಂತಿ ಕಲ್ಯಾಣ.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೦

ಕ್ರಾಂತಿ ಕಲ್ಯಾಣ

"ಒಡೆಯರು ಮರೆತಂತಿದೆ. ರಾಜಸಭೆಗೆ ಕಂಚುಕಿಯಂತೆ ಸೆರೆಮನೆಗೆ ಕಮ್ಮಾರ. ಅವನ ರಾಜಮುದ್ರೆ ಬೀಳದ ಹೊರತಾಗಿ ಇಲ್ಲಿಗೆ ಪ್ರವೇಶವೇ ದೊರಕುವುದಿಲ್ಲ,"

-ಎಂದು ಜವರಾಯ ರಹಸ್ಯವಾಡಿದನು.

ಮಧುವರಸನಿಗೆ ಅರ್ಥವಾಯಿತು, ಘಟನಾಕ್ರಮದಲ್ಲಿ ತನಗೊದಗಿದ ಅವಕಾಶವನ್ನು ಸೇಡಿಗಾಗಿ ಉಪಯೋಗಿಸಿಕೊಳ್ಳುವುದು ಕ್ರಮಿತನ ಉದ್ದೇಶವೆಂದು. ಮಂಚದಿದಂದೆದ್ದು, "ನೀನು ಅನುಭವಸ್ಥನಾದ ತತ್ವದರ್ಶಿಯಂತೆ ಮಾತಾಡುತ್ತಿರುವೆ ಜವರಾಯ,” ಎಂದನು.

"ತತ್ವದರ್ಶಿಯಾಗುವ ಪುಣ್ಯ ನನಗೆಲ್ಲಿಯದು, ಒಡೆಯರೆ? ನಿಮ್ಮಂತಹವರ ಸೇವೆಯಲ್ಲಿ ಕಲಿತ ನಾಲ್ಕು ಮಾತುಗಳನ್ನು ನುಡಿಯುತ್ತಿದ್ದೇನೆ. ಮನುಷ್ಯನಿಗೆ ಜೀವನದ ಕಹಿ ಸಿಹಿಗಳ ಪರಿಚಯವಾಗಲು ಅರಮನೆ ಗುರುಮನೆಗಳ ಪರಿಚಯ ಮಾತ್ರವೇ ಸಾಲದು. ಸೆರೆಮನೆಯ ಪರಿಚಯವೂ ಅಗತ್ಯ. ನಮ್ಮ ಸಾಮಂತರು, ಅಧಿಕಾರಿಗಳೂ, ವರ್ಷಕ್ಕೊಂದು ತಿಂಗಳು ಕಡ್ಡಾಯವಾಗಿ ಸೆರೆಮನೆಯ ವಾಸದಲ್ಲಿದ್ದರೆ ಅವರ ಆಡಳಿತ ದಕ್ಷತೆಗಳು ಉತ್ತಮವಾಗುತ್ತವೆ,” -ಎಂದು ಜವರಾಯ ಗಂಭೀರವಾಗಿ ನುಡಿದನು.

"ಮಂತ್ರಿಗಳ ವಿಚಾರದಲ್ಲಿಯೂ ಈ ನಿಬಂಧನೆ ಅನ್ವಯಿಸಬೇಕೇ?"

"ಮಂತ್ರಿಗಳೂ ಮನುಷ್ಯರಲ್ಲವೆ? ಮನುಷ್ಯತ್ವದ ಬೆಲೆ ಕಟ್ಟಲು ಅರಮನೆ ಗುರುಮನೆಗಳಿಗಿಂತ ಸೆರೆಮನೆಯೇ ಸರಿಯಾದ ಸ್ಥಾನ. ದರೋಡೆಕಾರ ಸಾಮಂತನಾಗಿ ಸೆರೆಮನೆಗೆ ಬಂದ ಸಿಂಗಿರಾಜನು ಭಕ್ತಕವಿಯಾಗಿ ಹೊರಗೆ ಹೋದನು. ಸೆರೆಮನೆಯ ವಾಸದಲ್ಲಿ ಮನುಷ್ಯನು ಮುರಿದು ಬೀಳುವನು, ಇಲ್ಲವೆ ಮೇಲಕ್ಕೇಳುವನು. ಎರಡರಲ್ಲಿ ಒಂದು ಆಗಲೇಬೇಕು."

ಮಧುವರಸನು ನಸುನಕ್ಕು, "ನಾನು ಮುರಿದು ಬೀಳಲಾರದಷ್ಟು ಮೇಲಕ್ಕೇರಿದ್ದೀರಿ ನೀವು, ಒಡೆಯರೆ. ಇನ್ನು ಹೆಚ್ಚು ಬೆಳೆದರೆ ಸೆರೆಮನೆಯೇ ಮುರಿದು ಬೀಳುವುದು,” ಎಂದು ತಾನೂ ನಗೆಯಾಡಿದನು.

ಆಮೇಲೆ ಅವರು ನೆಲಮನೆಯ ಉಗ್ರಾಣ ಮೊಗಶಾಲೆಗಳನ್ನು ದಾಟಿ, ಪಾವಟಿಗೆಗಳನ್ನು ಹತ್ತಿ, ಅರಮನೆಯ ಹಿಂಭಾಗದ ಒಂದು ಸಣ್ಣ ಅಂಗಣಕ್ಕೆ ಬಂದರು. ಅಂಗಣದ ಸುತ್ತ ಮುಗಿಲು ಮುಟ್ಟುವ ಎತ್ತರವಾದ ಗೋಡೆಗಳು,